ಭಾನುವಾರ, ಮೇ 16, 2021
21 °C

ನೈರ್ಮಲ್ಯೀಕರಣ: ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ಮೀಸಲಿರಿಸಿದ ಹಣದ ಪ್ರಮಾಣ ತುಂಬಾ ಕಡಿಮೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರ ಸರ್ಕಾರ, ಸಂಪೂರ್ಣ ನೈರ್ಮಲ್ಯೀಕರಣ ಕಾರ್ಯಕ್ರಮದ ಅಡಿ ಪ್ರತಿ ಮನೆಗೆ ನೀಡಲಾಗುವ ಧನ ಸಹಾಯವನ್ನು ರೂ2,200ದಿಂದ 9,900 ರೂಪಾಯಿಗೆ ಏರಿಸಲಾಗುವುದು ಎಂದು ಹೇಳಿದೆ.

`ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುತ್ತಿರುವ 2,200 ರೂಪಾಯಿಗಳಿಂದ ಶೌಚಾಲಯ ನಿರ್ಮಾಣ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ನವದೆಹಲಿಯಲ್ಲಿ ಕುಳಿತು ನೈರ್ಮಲ್ಯೀಕರಣ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ತಾವು ಕಟ್ಟಲು ನೆರವು ನೀಡಿದ ಶೌಚಾಲಯಗಳನ್ನು ಬಳಸುತ್ತಿಲ್ಲ. ಆದರೆ ಜನರು ಅವುಗಳನ್ನು ಬಳಸಬೇಕು ಎಂಬುದನ್ನು ನಾವು ನಿರೀಕ್ಷಿಸುತ್ತೇವೆ~ ಎಂದು ಗ್ರಾಮೀಣಾಭೀವೃದ್ಧಿ ಸಚಿವ ಜೈರಾಮ್ ರಮೇಶ್ ಯುನಿಸೆಫ್ ಆಯೋಜಿಸಿದ್ದ ಪ್ರಾದೇಶಿಕ ಸಮ್ಮೇಳನದಲ್ಲಿ ಹೇಳಿದ್ದಾರೆ.

`ನಾವು ನೆರವು ನೀಡುವುದರಲ್ಲಿ ತುಂಬಾ ನಿಪುಣರಾಗಿದ್ದೇವೆ. ಎಲ್ಲಾ ನಿಯಮಗಳನ್ನು ನಾವು ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿ ಇವುಗಳಲ್ಲಿ ಬದಲಾವಣೆ ಮಾಡಲಾಗುವುದು~ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಖಾತೆಯನ್ನೂ ಹೊಂದಿರುವ ರಮೇಶ್ ಹೇಳಿದ್ದಾರೆ.

ಶೌಚಾಲಯ ನಿರ್ಮಾಣಕ್ಕಾಗಿ ನೀಡುತ್ತಿರುವ ಧನ ಸಹಾಯವನ್ನು 9,900 ರೂಪಾಯಿಗೆ ಏರಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಈ ಒಟ್ಟು ಮೊತ್ತದಲ್ಲಿ 5,400 ರೂಪಾಯಿ ಸಂಪೂರ್ಣ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ನೀಡಲಾಗುವುದು ಮತ್ತು ಉಳಿದ 4,500 ರೂಪಾಯಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಒದಗಿಸಲಾಗುವುದು ಎಂದು ಅವರು ಹೇಳಿದರು.

3 ಕೋಟಿ ಮಕ್ಕಳು ಶೌಚಾಲಯ ವಂಚಿತರು

ನವದೆಹಲಿ (ಐಎಎನ್‌ಎಸ್):  ಇತ್ತೀಚಿನ ವರ್ಷಗಳಲ್ಲಿ ಸೌಲಭ್ಯಗಳನ್ನು ಒದಗಿಸುವಲ್ಲಿ ಭಾರತದ ಶಾಲೆಗಳು ಪ್ರಗತಿ ಸಾಧಿಸಿದ್ದರೂ, ಸರಿ ಸುಮಾರು 3 ಕೋಟಿ ಶಾಲಾ ಮಕ್ಕಳ ಬಳಕೆಗೆ ಶೌಚಾಲಯಗಳೇ ಇಲ್ಲ ಎಂದು ಯುನಿಸೆಫ್‌ನ ನೀರು, ಸ್ವಚ್ಛತೆ, ಆರೋಗ್ಯಶಾಸ್ತ್ರ ಕಾರ್ಯಕ್ರಮ (ಡಬ್ಲ್ಯುಎಎಸ್‌ಎಚ್)  ಬುಧವಾರ ಹೇಳಿದೆ.

ಹೆಚ್ಚಿನ ಶಾಲೆಗಳಲ್ಲಿ ಆರೋಗ್ಯಶಾಸ್ತ್ರ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಇನ್ನಷ್ಟು ಶಿಕ್ಷಣ ನೀಡುವ ಅಗತ್ಯವಿದೆ ಎಂದೂ ಅದು ಅಭಿಪ್ರಾಯ ಪಟ್ಟಿದೆ.

ಡಬ್ಲ್ಯುಎಎಸ್‌ಎಚ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ  ಶೌಚಾಲಯಗಳಿರುವ ಶಾಲೆಗಳ ಪ್ರಮಾಣ ಶೇ 50ರಿಂದ ಶೇ 75ರವರೆಗೆ ಏರಿದ್ದರೂ, ಶೇ 60ರಷ್ಟು ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿನಿಯರಿಗಾಗಿ ಶೌಚಾಲಯಗಳಿವೆ. ಈ ಶಾಲೆಗಳಲ್ಲಿ ಲಭ್ಯವಿರುವ ಶೌಚಾಲಯಗಳಲ್ಲಿ ಒಂದು ಅಥವಾ ಎರಡು ಮಾತ್ರ ಬಳಕೆಗೆ ಯೋಗ್ಯವಾಗಿದೆ.

ಭಾರತದಲ್ಲಿ ಶೇ 90ರಷ್ಟು ಶಾಲೆಗಳು ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿವೆ. ಅವುಗಳಲ್ಲಿ ಶೇ 80ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಭಾರತದ 65 ಲಕ್ಷ ಶಾಲಾ ಮಕ್ಕಳು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಡಬ್ಲ್ಯುಎಎಸ್‌ಎಚ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.