ಶುಕ್ರವಾರ, ಮೇ 20, 2022
26 °C

ನೈರ್ಮಲ್ಯ ಕಾಪಾಡುವುದು ಆದ್ಯತೆಯಾಗಲಿ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ನೈರ್ಮಲ್ಯ ಕಾಪಾಡುವುದು ಜಾಗತಿಕವಾಗಿ ಮಹತ್ವದ ವಿಷಯವಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಇದನ್ನು ಆದ್ಯತೆಯಾಗಿ ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೀಡುವ 2009-10ನೇ ಸಾಲಿನ ‘ನೈರ್ಮಲ್ಯ ರತ್ನ’ ಪ್ರಶಸ್ತಿ ಯಲ್ಲಾಪುರ ತಾಲ್ಲೂಕು ಪಂಚಾಯಿತಿಗೆ ಬಂದಿದ್ದು, ರೂ. 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಅಲ್ಲದೇ ರಾಜ್ಯ ಸರ್ಕಾರದ ‘ಸ್ವರ್ಣ ನೈರ್ಮಲ್ಯ’ ದ್ವಿತೀಯ ಬಹುಮಾನ ಆನಗೋಡು ಪಂಚಾಯಿತಿಗೆ ಸಿಕ್ಕಿರುವುದು ಸಂತಸದ ಸಂಗತಿ ಎಂದು ಶಾಸಕ ವಿ.ಎಸ್. ಪಾಟೀಲ ಹೇಳಿದರು.ತಾ.ಪಂ. ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌಹಾರ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಂದ್ರವನ್ನು ಅನುಸರಿಸಿದ ರಾಜ್ಯ ಸರ್ಕಾರವೂ ಪ್ರತಿ ವರ್ಷ ನೈರ್ಮಲ್ಯ ಕಾಪಾಡುವ ಗ್ರಾಮಗಳಿಗೆ ಪ್ರೋತ್ಸಾಹದಾಯಕ ಪ್ರಶಸ್ತಿ ನೀಡಲು ಪ್ರಾರಂಭಿಸಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಶೇ. 70ರಷ್ಟು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು , ಹಾಗೂ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಸ್ವಚ್ಚತೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶೌಚಾಲಯಗಳ ನಿರ್ಮಾಣದಂತಹ ಜನೋಪಯೋಗಿ ಕಾರ್ಯಕ್ರಮಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದರು.ತಾಲ್ಲೂಕಿನ 14 ಗ್ರಾ.ಪಂ.ಗಳಲ್ಲಿ 57 ಸಾವಿರ ಕುಟುಂಬಗಳಿದ್ದು, 2005 ರಿಂದ ಯೋಜನೆ ಪ್ರಾರಂಭವಾದಾಗಿನಿಂದ ಶೌಚಾಲಯ ನಿರ್ಮಾಣದ ಗುರಿ 12,300 ಇತ್ತು. ಈ ಗುರಿಯನ್ನು 2007-08 ನೇ ಸಾಲಿನಲ್ಲಿ  ಸಾಧಿಸಿ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪ್ರಶಸ್ತಿ ಗಳಿಸಿದೆ. 2009-10ನೇ ಸಾಲಿನ ನೈರ್ಮಲ್ಯ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಲೂ ಸಾಧ್ಯವಾಗಿದೆ ಎಂದು ವಿವರಿಸಿದರು.ಈ ಪ್ರಶಸ್ತಿ ಗಳಿಸಲು ಈಗಿನ ಹಾಗೂ ಹಿಂದಿನ ಎಲ್ಲ ಜನಪ್ರತಿನಿಧಿಗಳ ಸಹಭಾಗಿತ್ವವೇ ಕಾರಣ  ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು. ಪ್ರಶಸ್ತಿ ನೀಡಿ ಪುರಸ್ಕರಿಸಿದ ಮುಖ್ಯ ಮಂತ್ರಿಗಳು ಹಾಗೂ ಪಂಚಾಯತ್‌ರಾಜ ಸಚಿವರನ್ನು ಹಾಗೂ ಮಾರ್ಗದರ್ಶನ ನೀಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಮೊಹನರಾಜ್ ಹಾಗೂ ಅಭಿವೃದ್ಧಿ ಅಧಿಕಾರಿ ನಾಗೇಶ ರಾಯ್ಕರ್ ಅವರನ್ನು ಅಭಿನಂದಿಸಿದರು. ತಾ.ಪಂ. ಅಧ್ಯಕ್ಷೆ ಗಿರಿಜಾ ಕೊಂಬೆ , ಉಪಾಧ್ಯಕ್ಷ ನಟರಾಜ ಗೌಡ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ಸಿದ್ದಾಪುರ. ಜಿ.ಪಂ. ಸದಸ್ಯ ರಾಘವೆಂದ್ರ ಭಟ್ಟ, ಮಾಜಿ ಸದಸ್ಯ ಉಮೇಶ ಭಾಗ್ವತ್, ಆನಗೋಡು ಪಂಚಾಯಿತಿ ಅಧ್ಯಕ್ಷ ಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.