ನೈಸರ್ಗಿಕ ಅಡಿಕೆಯ ಸೊಗಸು

ಸೋಮವಾರ, ಜೂಲೈ 22, 2019
27 °C
ಅಮೃತ ಭೂಮಿ 33

ನೈಸರ್ಗಿಕ ಅಡಿಕೆಯ ಸೊಗಸು

Published:
Updated:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೆಳೆಯೂರು ಗ್ರಾಮದ ಸತ್ಯನಾರಾಯಣ ಅವರು ಅರ್ಧ ಎಕರೆ ಅಡಿಕೆ ತೋಟ ಹಾಗೂ ಒಂದೂವರೆ ಎಕರೆ ಭತ್ತದ ಗದ್ದೆ ಹೊಂದಿದ್ದರು. 10 ವರ್ಷಗಳ ಹಿಂದೆ ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಬೆಳೆ ತೆಗೆಯಲಾಗದೆ ಅಲ್ಲಿ ಅಡಿಕೆ ತೋಟ ಮಾಡಲು ಅವರು ಮುಂದಾದರು.ಕೆಲವೇ ಸಮಯದಲ್ಲಿ ಸತ್ಯನಾರಾಯಣ ಅವರ ಲೆಕ್ಕಾಚಾರಗಳು ತಲೆಕೆಳಗಾಗಿತ್ತು. ಒಂದೆಡೆ ಭತ್ತದ ಗದ್ದೆಯಿಂದ ಬರುವ ಆದಾಯ ನಿಂತಿತ್ತು. ಹೊಸ ಅಡಿಕೆ ತೋಟಕ್ಕೆ ಖರ್ಚು ವಿಪರೀತವಾಗುತ್ತಿತ್ತು. ಇದಕ್ಕಾಗಿ ಮಾಡಿದ ಸಾಲದ ಬಡ್ಡಿ ಏರುತ್ತಲೇ ಇತ್ತು.ಒಂದೆರೆಡು ವರ್ಷ ಹೇಗೋ ಪರಿಸ್ಥಿತಿಯನ್ನು ನಿಭಾಯಿಸಿದ ಅವರು ನಂತರ ಕೃಷಿಯನ್ನೆ ಬಿಟ್ಟುಬಿಡಬೇಕು ಎಂದು ಯೋಚಿಸಿದ್ದರು.

ಆ ಸಮಯಕ್ಕೆ ಅವರ ನೆರವಿಗೆ ಬಂದದ್ದು ನೈಸರ್ಗಿಕ ಕೃಷಿ ಪದ್ಧತಿ. ಪತ್ರಿಕೆಯಲ್ಲಿ ಇದನ್ನು ಓದಿ ಆ ಕಡೆ ಒಲವು ತೋರಿದರು ಸತ್ಯನಾರಾಯಣ. ಇದಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದರು. ಹಲವು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಹೊಸ ಕೃಷಿ ಪದ್ಧತಿಯ ಆಳವಾದ ಪರಿಚಯ ಮಾಡಿಕೊಂಡರು.`ನೈಸರ್ಗಿಕ ಕೃಷಿ ಪದ್ಧತಿ ಆರಂಭಿಸಿದೊಡನೆ ಕೃಷಿಯ ಖರ್ಚು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಅಡಿಕೆ ತೋಟದ ಮಣ್ಣನ್ನು ಸಡಿಲಗೊಳಿಸಲು ಗೊಬ್ಬರ ಬಳಸುವುದಕ್ಕೆ ಒಂದು ಎಕರೆಗೆ 40 ಸಾವಿರ ರೂಪಾಯಿ ಬೇಕಿತ್ತು. ಆದ್ದರಿಂದ ತೋಟದ ತ್ಯಾಜ್ಯ ಬಳಸಿ ಜೀವಾಣುಗಳಿಗೆ ಬೇಕಾದ ತಂಪಿನ ವಾತಾವರಣ ನಿರ್ಮಿಸಿದೆ. ರಾಸಾಯನಿಕ ಗೊಬ್ಬರದ ಬದಲು ಜೀವಾಮೃತ ಸಿಂಪಡಿಸಿದೆ. ಇದರಿಂದ ಶೇ.75ರಷ್ಟು ಖರ್ಚು ಉಳಿತಾಯವಾಯಿತು' ಎನ್ನುತ್ತಾರೆ ಸತ್ಯನಾರಾಯಣ.ಹೀಗಿದೆ ಜೀವಾಮೃತ

ಜೀವಾಮೃತ ತಯಾರಿಸುವ ವಿಧಾನ ಹೀಗಿದೆ: ಒಂದು ಎಕರೆ ಅಡಿಕೆ ತೋಟಕ್ಕೆ 10ಕೆ.ಜಿ ನಾಟಿ ತಳಿಯ ಸೆಗಣಿ, 10ಲೀ. ಗೋಮೂತ್ರ, 2ಕೆ.ಜಿ ದ್ವಿದಳ ಧಾನ್ಯದ ಹಿಟ್ಟು, 2 ಕೆ.ಜಿ ಜೋನಿ ಬೆಲ್ಲ, ಒಂದು ಹಿಡಿ ತೋಟದ ಮಣ್ಣನ್ನು 200ಲೀಟರ್ ನೀರಿನಲ್ಲಿ ಕದಡಿ 48 ಗಂಟೆಗಳ ಕಾಲ ಬಿಡುತ್ತಾರೆ. ಹೀಗೆ ಕದಡಿದ 7 ದಿನಗಳೊಳಗೆ ಬೆಳಿಗ್ಗೆ ಅಥವಾ ಸಂಜೆ ತಂಪು ಇರುವ ಹೊತ್ತಿನಲ್ಲಿ ಸಿಂಪಡಿಸುತ್ತಾರೆ.`ಸಾಂಪ್ರದಾಯಿಕ ಕೃಷಿ ವಿಧಾನದಲ್ಲಿ ಎರಡು ಅಡಿ ಆಳ, ಎರಡು ಅಡಿ ಅಗಲದ ಗುಂಡಿಯನ್ನು ಚೌಕಾಕಾರದಲ್ಲಿ ತೆಗೆದು ಅಡಿಕೆ ಸಸಿ ನೆಟ್ಟಿದ್ದೇನೆ. ಒಂದು ದಿನಕ್ಕೆ ಒಂದು ಆಳು 10ರಿಂದ 12 ಸಸಿ ನೆಡಬಲ್ಲೆ. ಆದರೆ ನೈಸರ್ಗಿಕ ಕೃಷಿ ಪದ್ಧತಿ ಪ್ರಕಾರ ಮೊಳಕೆಯಾದ ಅಡಿಕೆ ಬೀಜವನ್ನೆ ಬೀಜ ಮುಚ್ಚುವಷ್ಟು ಮಾತ್ರ ಗುಂಡಿ ತೆಗೆದು ನೆಡುವುದರಿಂದ ದಿನಕ್ಕೆ 200 ಸಸಿ ನೆಡಬಹುದು' ಎನ್ನುತ್ತಾರೆ ಸತ್ಯನಾರಾಯಣ.ಸಾಮಾನ್ಯವಾಗಿ ಮಲೆನಾಡಿನಲ್ಲಿ ಒಂದು ಎಕರೆ ಅಡಿಕೆ ತೋಟದಿಂದ 15ರಿಂದ 16 ಕ್ವಿಂಟಾಲ್ ಸಿದ್ಧ ಅಡಿಕೆ ದೊರೆಯುತ್ತದೆ. ಸತ್ಯನಾರಾಯಣ ನೈಸರ್ಗಿಕ ಕೃಷಿ ಪದ್ಧತಿ ಮೊರೆ ಹೋಗಿ ಎಕರೆಗೆ 22 ಕ್ವಿಂಟಾಲ್ ಸಿದ್ಧ ಅಡಿಕೆ ಪಡೆಯುತ್ತಿದ್ದಾರೆ.`ಮೊದಲು ನೈಸರ್ಗಿಕ ಪದ್ಧತಿ ಆರಂಭಿಸಿದಾಗ ಹಲವರ ಮೂದಲಿಕೆಗೆ ಗುರಿಯಾಗಿದ್ದೆ. ಆದರೆ ಇದಕ್ಕೆ ಕಿವಿಗೊಡಲಿಲ್ಲ. ಈಗ ಅವರೇ ಅಚ್ಚರಿ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.`ರಾಸಾಯನಿಕ ಬಳಸಿ ಕೃಷಿ ಮಾಡಿದರೆ ಫಲ ಬೇಗ ದೊರಕುತ್ತದೆ. ಅದಕ್ಕಾಗಿ ಮಲೆನಾಡಿನ ಅಡಿಕೆ ಬೆಳೆಗಾರರು ನೈಸರ್ಗಿಕ ಕೃಷಿಯತ್ತ ಒಲವು ತೋರುವುದಿಲ್ಲ. ಆದರೆ ರಾಸಾಯನಿಕದಿಂದ ಭೂಮಿಯ ಫಲವತ್ತತೆ ಅಷ್ಟೆ ಬೇಗ ಹಾಳಾಗುತ್ತದೆ. ಆದರೆ ನೈಸರ್ಗಿಕ ಕೃಷಿಯಲ್ಲಿ ಫಲಿತಾಂಶ ಕೊಂಚ ವಿಳಂಬವಾಗಬಹುದು.ಆದರೆ ಫಲ ನಿರಂತರ. ನಮ್ಮಲ್ಲಿ ಫಲಕ್ಕಾಗಿ ಕಾಯುವ ತಾಳ್ಮೆ ಇಲ್ಲ' ಎಂಬ ವಿಷಾದದ ಮಾತು ಸತ್ಯನಾರಾಯಣ ಅವರದ್ದು. ಸಂಪರ್ಕಕ್ಕೆ 9483492012.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry