ನೈಸರ್ಗಿಕ ಹಿಂಡಿ ಬಳಸಿದರೆ ಹೆಚ್ಚು ಹಾಲು, ಕಡಿಮೆ ಮಿಥೇನ್

ಬುಧವಾರ, ಜೂಲೈ 17, 2019
25 °C

ನೈಸರ್ಗಿಕ ಹಿಂಡಿ ಬಳಸಿದರೆ ಹೆಚ್ಚು ಹಾಲು, ಕಡಿಮೆ ಮಿಥೇನ್

Published:
Updated:

ಬೆಂಗಳೂರು:  ರಾಸುಗಳಿಂದ ಬಿಡುಗಡೆಯಾಗುವ ಮಿಥೇನ್ ಕಡಿಮೆಗೊಳಿಸಿ ಹಾಲು ಉತ್ಪಾದನೆ ಹೆಚ್ಚು ಮಾಡುವ ನೈಸರ್ಗಿಕ ಮೂಲದ ಹಿಂಡಿ ತಯಾರಿಕೆಯಲ್ಲಿ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.ಹಸುಗಳಿಗೆ ಮೇವಿನ ಜತೆಯಲ್ಲಿ ನಿತ್ಯ 200 ಗ್ರಾಂ ಈ ನೈಸರ್ಗಿಕ ಹಿಂಡಿ ನೀಡಿದರೆ ಕನಿಷ್ಠ 5 ಲೀಟರ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸಬಹುದು ಎಂದು ಪ್ರಾಥಮಿಕ ಸಂಶೋಧನೆಯಿಂದ ದೃಢಪಟ್ಟಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳಾದ ಡಾ.ಮಹೇಶ ಕಡಗಿ,  ಡಾ.ಜಿ.ಗೌತಮ್ ಅವರು `ಜನಿರಾನ್ ಬಯೋಲ್ಯಾಬ್ಸ್' ಸಂಸ್ಥೆ  ಹುಟ್ಟುಹಾಕಿದ್ದಾರೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಮಹೇಶ ಕಡಗಿ, `ಹಲವು ಔಷಧೀಯ ಸಸ್ಯಗಳನ್ನು ಬಳಸಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯ ಇವೆ. ಆದರೆ, ಹಾಲಿನ ಉತ್ಪಾದನೆಯ ಜತೆಯಲ್ಲಿ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿರುವ ಮಿಥೇನ್ ಅಂಶವು ರಾಸುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹಿಂಡಿ ತಯಾರಿಸಲಾಗಿದೆ' ಎಂದು ತಿಳಿಸಿದರು. ಏನಿದು ಮಿಥೇನ್?: ಜಾಗತಿಕ ತಾಪಮಾನ ಏರಿಕೆಯಲ್ಲಿ ಮಿಥೇನ್ ಪಾತ್ರ ಬಹುಮುಖ್ಯವಾಗಿದೆ. ಇಂಗಾಲದ ಡೈ ಆಕ್ಸೈಡ್‌ಗಿಂತ ಶೇ 25 ಪಟ್ಟು ತೀವ್ರತೆ ಮಿಥೇನ್‌ದ್ದಾಗಿದೆ. ಇದು ಪರಿಸರಕ್ಕೆ ಹಾನಿಕಾರಕ. ವರ್ಷಕ್ಕೆ 7.26ರಿಂದ 10.4 ದಶಲಕ್ಷ ಟನ್ ಮಿಥೇನ್ ಪ್ರಾಣಿ ಮೂಲದಿಂದ ಬಿಡುಗಡೆಯಾಗುತ್ತಿದೆ.  ಹಸು ಹಾಗೂ ಎಮ್ಮೆಗಳಿಂದಲೇ ಶೇ 90ರಷ್ಟು ಪ್ರಮಾಣದಲ್ಲಿ ಮಿಥೇನ್ ಬಿಡುಗಡೆಯಾಗುತ್ತಿದೆ. 3 ಕೋಟಿಯಷ್ಟು ಕಾರುಗಳು ಬಿಡುಗಡೆ ಮಾಡುವ ಇಂಗಾಲ ಡೈ ಆಕ್ಸೈಡ್‌ನಿಂದ ಪರಿಸರದ ಮೇಲಾಗುವ ಪರಿಣಾಮದ ತೀವ್ರತೆ, ಇದರಿಂದ ಆಗುತ್ತದೆ. ಆಡು, ಕುರಿಗಳಿಗಿಂತ ಹಸು ಹೆಚ್ಚಿನ ಪ್ರಮಾಣದಲ್ಲಿ ಮಿಥೇನ್ ಉತ್ಪತ್ತಿ ಮಾಡುತ್ತಿದೆ. ಅದಕ್ಕಾಗಿ ಮಿಥೇನ್ ಕಡಿಮೆ ಮಾಡುವ ಉದ್ದೇಶದಿಂದ ಈ ಪ್ರಯೋಗ ನಡೆಸಿದ್ದೇವೆ' ಎಂದು ಅವರು ಮಾಹಿತಿ ನೀಡಿದರು.ಮಿಥೇನ್ ಪ್ರಮಾಣ ಹೆಚ್ಚಾದಂತೆ ವಾತಾವರಣದಲ್ಲಿ ಉಷ್ಣಾಂಶವು ಮಿತಿಮೀರುತ್ತದೆ. ಅಲ್ಲದೇ ಒಜೋನ್ ಪದರವು ಶಿಥಿಲಗೊಳ್ಳುತ್ತದೆ. ಇದರಿಂದ ಸೂರ್ಯನ ಅಪಾಯಕಾರಿ ಅತಿ ನೇರಳೆ ಕಿರಣಗಳು ಭೂಮಿ ತಲುಪಿ ತಾಪಮಾನ ಹೆಚ್ಚಾಗಿ ವಿವಿಧ ಕಾಯಿಲೆಗಳನ್ನು ತಂದೊಡ್ಡುವ ಸಾಧ್ಯತೆಯಿದೆ.ಒಂದು ಹಸು ವರ್ಷಕ್ಕೆ 60 ಕೆ.ಜಿ ಮಿಥೇನ್ ಉತ್ಪಾದಿಸುತ್ತದೆ. ಈ ಹಿಂಡಿಯ ಬಳಕೆಯಿಂದ ಇದರ ಪ್ರಮಾಣ 35 ರಿಂದ 40 ಕೆ.ಜಿಗೆ ಇಳಿಕೆಯಾಗುತ್ತದೆ. ಇದಲ್ಲದೇ ದಿನಕ್ಕೆ ನೀಡುವ ಹಾಲಿನ ಪ್ರಮಾಣ 12 ರಿಂದ 15 ಲೀಟರ್‌ಗಳಿಗೆ ಏರಿಕೆಯಾಗುತ್ತದೆ.ಮಿಥೇನ್ ಉತ್ಪಾದನೆಗೆ ವ್ಯಯವಾಗುತ್ತಿರುವ ಹಸುವಿನ ಜೀವಕೋಶಗಳ ಶಕ್ತಿ ಹಾಲಿನ ಉತ್ಪಾದನೆಗೆ ನೆರವಾಗುವ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ' ಎಂದು ಸಹ ಸಂಶೋಧಕ ಗೌತಮ್ ವಿವರಣೆ ನೀಡಿದರು.ದರ: ರೈತರು, ಪಶು ಸಾಕಣೆದಾರರನ್ನು ಗಮನದಲ್ಲಿಟ್ಟುಕೊಂಡೇ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಒಂದು ಕೆ.ಜಿ. ಹಿಂಡಿಗೆ ರೂ 40  ದರ ನಿಗದಿಪಡಿಸಲಾಗಿದೆ. ದಿನವೊಂದಕ್ಕೆ 200 ಗ್ರಾಂ ನಂತೆ ಈ ಹಿಂಡಿಯನ್ನು ಐದು ದಿನಗಳ ಅವಧಿಯವರೆಗೆ ಬಳಕೆ ಮಾಡಬಹುದು. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದಿಸಬಹುದು' ಎಂದು ತಿಳಿಸಿದರು. `ಬಿಡುಗಡೆಯಾಗುವ ಮಿಥೇನ್‌ನ ಪ್ರಮಾಣ ಸಾಮಾನ್ಯವಾಗಿ ಹಸು ಮತ್ತು ಎಮ್ಮೆಗಳ ವಯಸ್ಸಿಗೆ ಅನುಗುಣವಾಗಿರುತ್ತದೆ. ಈ ಹಿಂಡಿಯ ದರ, ರೈತ ಸ್ನೇಹಿಯಾಗಲಿದೆ. ಈ ಸಂಶೋಧನೆಗೆ ಪೇಟೆಂಟ್ ಪಡೆದು ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸುಮಾರು ರೂ 2 ಕೋಟಿ  ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಧನಸಹಾಯ ನಿರೀಕ್ಷಿಸಲಾಗಿದೆ. ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಶೇ 30 ರಷ್ಟು ಪ್ರಮಾಣದಲ್ಲಿ ನೆರವು ನೀಡುವ ಭರವಸೆ ನೀಡಿದೆ' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry