ನೈಸ್ ಅಕ್ರಮದ ವಿರುದ್ಧ ಪ್ರತಿಭಟನೆ

7

ನೈಸ್ ಅಕ್ರಮದ ವಿರುದ್ಧ ಪ್ರತಿಭಟನೆ

Published:
Updated:

ರಾಜರಾಜೇಶ್ವರಿನಗರ: ನೈಸ್ ಸಂಸ್ಥೆಯು ಅಕ್ರಮವಾಗಿ ಪ್ರವೇಶ ಮಾಡಿ ಬಡವರ ಮನೆಗಳನ್ನು ಕೆಡವಿ ಹಾಕಿರುವುದರ ವಿರುದ್ಧ ಅಲ್ಲಿನ ನಿವಾಸಿಗಳು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.‘ಹೊಸಕೆರೆ ಸಮೀಪದ ಬಾಗೇಗೌಡ ಲೇಔಟ್‌ನಲ್ಲಿರುವ ಮನೆಗಳನ್ನು ಜೆಸಿಬಿ ಯಂತ್ರಗಳಿಂದ ಧ್ವಂಸ ಮಾಡಲಾಗುತ್ತಿದೆ. ಅದನ್ನು ಪ್ರಶ್ನಿಸುವ ನಿವಾಸಿಗಳ ಮೇಲೆ ಗೂಂಡಾಗಳಿಂದ ಹಲ್ಲೆ ಮಾಡಿಸಲಾಗುತ್ತಿದೆ. ಪೊಲೀಸರಿಂದ ಸುಳ್ಳು ಮೊಕದ್ದಮೆಗಳನ್ನು ಹಾಕಿಸಿ ಬಂಧಿಸಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡ, ‘ಬೃಹತ್ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಬಡವರ ಮನೆಗಳನ್ನು ಕೆಡವಿ ಹಾಕಲಾಗುತ್ತಿದೆ. ಅದಕ್ಕಾಗಿ ಹತ್ತು ಎಕರೆ ಜಮೀನನ್ನು ನೈಸ್ ಸಂಸ್ಥೆಗೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ರಸ್ತೆಯ ಹೆಸರಿನಲ್ಲಿ ನೈಸ್ ಸಂಸ್ಥೆಯು ಸಾವಿರಾರು ಎಕರೆ ಜಮೀನನ್ನು ಕಬಳಿಸಿದೆ’ ಎಂದರು.‘ಪೊಲೀಸ್ ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಬಡವರಿಗೆ ರಕ್ಷಣೆ ನೀಡಬೇಕು. ಬಂಧಿಸಿರುವ ಬಡವರನ್ನು ಬಿಡುಗಡೆ ಮಾಡಬೇಕು. ಗೂಂಡಾಗಳನ್ನು ಕೂಡಲೇ ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದರು.‘ಪ್ರಮೋದ ಬಡಾವಣೆಯ ರಸ್ತೆಗೆ ಬಾಲಗಂಗಾಧರ ಸ್ವಾಮಿಜಿ ಹೆಸರನ್ನಿಡಲಾಗಿದೆ. ಶ್ರೀಗಳು ಖುದ್ದಾಗಿ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಮನವಿ ಮಾಡಿದರು.ಮನೆ ಕಳೆದುಕೊಂಡ ಕೆಂಪೇಗೌಡ, ಕಿರಣ್, ನಂಜಮ್ಮ ಮಾತನಾಡಿ, ‘ನಾವು 1988ರಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಆದರೆ ನೈಸ್ ಸಂಸ್ಥೆಯು 1997ರಲ್ಲೇ ಜಮೀನು ಸ್ವಾಧೀನಪಡಿಸಿಕೊಂಡಂತೆ ದಾಖಲೆಗಳನ್ನು ಸೃಷ್ಟಿಸಿ ಮನೆಗಳನ್ನು ಕೆಡವಿ ಹಾಕಿಸುತ್ತಿದೆ’ ಎಂದರು.ನೈಸ್ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ಪಂಚಲಿಂಗಯ್ಯ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry