ಶುಕ್ರವಾರ, ಜೂನ್ 18, 2021
28 °C

ನೈಸ್ ರಸ್ತೆಯಲ್ಲಿ ಜೆಲ್ಲಿ ಕಲ್ಲು ಘಟಕ: ಕೋರ್ಟ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿಯಲ್ಲಿನ ನೈಸ್ ರಸ್ತೆಯಲ್ಲಿ ತನ್ನ ಆದೇಶದ ಹೊರತಾಗಿಯೂ ಜೆಲ್ಲಿ ಕಲ್ಲು ಘಟಕಕ್ಕೆ ಅನುಮತಿ ನೀಡಿರುವ ಸರ್ಕಾರದ ವಿರುದ್ಧ ಹೈಕೋರ್ಟ್ ಸೋಮವಾರ ಕೆಂಡಾಮಂಡಲವಾಯಿತು.`ಕೋರ್ಟ್ ತೀರ್ಪನ್ನೂ ಪಾಲನೆ ಮಾಡಲು ನಿಮಗೆ ಆಗುತ್ತಿಲ್ಲವೆ, ಸರ್ಕಾರ ಯಾರ ಜೊತೆ ಶಾಮೀಲಾಗಿ ಘಟಕ ನಿರ್ಮಾಣಕ್ಕೆ  ಅನುಮತಿ ನೀಡಿದೆ, ಇದು ಮುಂದುವರಿದರೆ ನಾವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಘಟಕ ನಿರ್ಮಾಣದಿಂದ ಜನರು ತೊಂದರೆಗೆ ಒಳಗಾಗಿ ಸಾಯುತ್ತಿದ್ದಾರೆ.ಇಲ್ಲಿ ನೀವು ಪ್ರಭಾವಿಗಳ ಜೊತೆ ಸೇರಿ ಈ ರೀತಿ ಮಾಡುತ್ತಿದ್ದೀರಾ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು.ಸರ್ವೇ ನಂ.39ರಲ್ಲಿ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿರುವ ವಿವಾದ ಇದಾಗಿದೆ. ಇದರ ವಿರುದ್ಧ `ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಒಕ್ಕೂಟ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ಇಲ್ಲಿ ಘಟಕಕ್ಕೆ ಅನುಮತಿ ನೀಡದಂತೆ 2009ರಲ್ಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು ನ್ಯಾಯಮೂರ್ತಿಗಳ ಗಮನಕ್ಕೆ ಬಂದಿತು. ಆದುದರಿಂದ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.`ಈ ಘಟಕದಿಂದ ಜನತೆ ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಲಿಲ್ಲ~ ಎಂದು ಅರ್ಜಿದಾರರು ದೂರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.ಸಿಬಿಐ ತನಿಖೆಗೆ ಹಸಿರು ನಿಶಾನೆ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ವಂಚನೆ ಮಾಡಿರುವ ಆರೋಪ ಹೊತ್ತ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ವಿರುದ್ಧ ನಡೆಯುತ್ತಿರುವ ಸಿಬಿಐ ತನಿಖೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಮೊಕದ್ದಮೆ ರದ್ದತಿಗೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಆನಂದ ವಜಾಗೊಳಿಸಿದ್ದಾರೆ.`ಬಾಲಾಜಿ ಕೃಪಾ ಎಂಟರ್‌ಪ್ರೈಸಸ್~ ಮಾಲೀಕರೂ ಆಗಿರುವ ಶೆಟ್ಟಿ ಅವರು, ನಗರದ ವಿವಿಧ ಕಡೆಗಳಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಹೆಗಡೆ ನಗರ, ಹೆಗ್ಗನಹಳ್ಳಿ, ಕುದ್ರಿನಗರಗಳಲ್ಲಿ ಶೆಟ್ಟಿ ಅವರು ಅನೇಕ ಬಡಾವಣೆಗಳನ್ನು ರಚಿಸಿ ನಿವೇಶನಗಳನ್ನು ವಿವಿಧ ವ್ಯಕ್ತಿಗಳಿಗೆ ಹಂಚಿಕೆ ಮಾಡಿದ್ದರು. ಈ ಪೈಕಿ 181 ಮಂದಿಗೆ ಬ್ಯಾಂಕಿನ ಗಾಂಧಿನಗರ ಶಾಖೆಯು 7.17 ಕೋಟಿ ರೂಪಾಯಿ ಸಾಲ ನೀಡಿತ್ತು.ಆದರೆ ಸಾಲದ ಮರುಪಾವತಿ ಆಗಲಿಲ್ಲ. ಈ ಬಗ್ಗೆ ಬ್ಯಾಂಕ್ ತನಿಖೆ ನಡೆಸಿದಾಗ, ನಿವೇಶನದಾರರೆಲ್ಲ ವಿವಿಧ ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವೇತನ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ 2008ರ ಜನವರಿ 30ರಂದು ಬ್ಯಾಂಕ್‌ನ ವಿಚಕ್ಷಣ ದಳದ ಪ್ರಧಾನ ಅಧಿಕಾರಿಗಳು ಶೆಟ್ಟಿ ಅವರೇ ಇದಕ್ಕೆ ಕಾರಣಕರ್ತರು ಎಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ  ಸಿಬಿಐ ಕೋರ್ಟ್‌ನಲ್ಲಿ ಅವರ ವಿರುದ್ಧ ತನಿಖೆ  ನಡೆಯುತ್ತಿದೆ.ಇದರ ರದ್ದತಿಗೆ ಶೆಟ್ಟಿ ಹೈಕೋರ್ಟ್ ಮೊರೆ ಹೋಗ್ದ್ದಿದರು. ತಮ್ಮ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಿಸಲಾಗಿದೆ. ತಮ್ಮ ಸಂಸ್ಥೆ (ಬಾಲಾಜಿ ಎಂಟರ್‌ಪ್ರೈಸಸ್) ಬ್ಯಾಂಕ್‌ನಿಂದ ಪಡೆದಿರುವ ಸಂಪೂರ್ಣ ಹಣವನ್ನು ಸಂದಾಯ ಮಾಡಿರುವ ಬಗ್ಗೆ ದಾಖಲೆ ಇದೆ. ಆದರೂ ಈ ಆರೋಪ ಹೊರಿಸಲಾಗಿದ್ದು, ದೂರಿನ ಅನ್ವಯ ಮುಂದೆ ತೆಗೆದುಕೊಳ್ಳಬಹುದಾದ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಕೋರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.