ನೈಸ್: ರೈತರ ಜಮೀನು ವಾಪಸಿಗೆ 27ರವರೆಗೆ ಗಡುವು

ಮಂಗಳವಾರ, ಜೂಲೈ 23, 2019
20 °C

ನೈಸ್: ರೈತರ ಜಮೀನು ವಾಪಸಿಗೆ 27ರವರೆಗೆ ಗಡುವು

Published:
Updated:

ರಾಜರಾಜೇಶ್ವರಿನಗರ: `ನೈಸ್~ ಸಂಸ್ಥೆಗೆ ಹೆಚ್ಚುವರಿಯಾಗಿ ನೀಡಿರುವ 1330 ಎಕರೆ ಜಮೀನನ್ನು ರೈತರಿಗೆ ವಾಪಸು ನೀಡಲು ಈ ತಿಂಗಳ 27ರವರೆಗೆ ಸರ್ಕಾರಕ್ಕೆ ಗಡುವು ನೀಡಿರುವ ವಿವಿಧ ಜನಪರ ಸಂಘಟನೆಗಳು, ತಪ್ಪಿದಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ.`ನ್ಯಾಯಕ್ಕಾಗಿ ನಾವು~ ಜನಪರ ಸಂಘಟನೆಗಳ ಒಕ್ಕೂಟ ಹಾಗೂ `ನೈಸ್~ ಭೂಸ್ವಾಧೀನ ವೇದಿಕೆ ಬಿಎಂಐಸಿ ಯೋಜನೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಹೊಸಕೆರೆಹಳ್ಳಿ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭಾನುವಾರ ಈ ನಿರ್ಣಯ ಕೈಗೊಳ್ಳಲಾಯಿತು. `ನ್ಯಾಯಕ್ಕಾಗಿ ನಾವು~ ಕಾರ್ಯಾಧ್ಯಕ್ಷ `ಅಗ್ನಿ~ ಶ್ರೀಧರ್ ನೇತೃತ್ವದಲ್ಲಿ ನಿರ್ಣಯ ಮಂಡಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿನಂತೆ ಹೆಚ್ಚುವರಿಯಾಗಿ `ನೈಸ್~ ಸಂಸ್ಥೆಗೆ ನೀಡಿರುವ 1330 ಎಕರೆ ಜಮೀನನ್ನು 27ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿ ನಿರ್ಣಯ ಅಂಗೀಕರಿಸಲಾಯಿತು.ಇದಕ್ಕೂ ಮುನ್ನ ರೈತರನ್ನು ಉದ್ದೇಶಿಸಿ ಮಾತನಾಡಿದ ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ ಸುರೇಶ್, `ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ `ನೈಸ್~ ಸಂಸ್ಥೆಯಿಂದ ನಡೆದಿರುವ ಆಕ್ರಮಗಳಿಗೆ ಕಡಿವಾಣ ಹಾಕಿ ಜಮೀನನ್ನು ರೈತರಿಗೆ ವಾಪಸ್ ಕೊಡಬೇಕು. ಇಲ್ಲದಿದ್ದರೆ ಮೋಸ, ಭ್ರಷ್ಟ, ಲೂಟಿಕೋರ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಧಿಕಾರದಿಂದ ತೊಲಗಬೇಕು~ ಎಂದು ಆಗ್ರಹಿಸಿದರು.`ಅನ್ನದಾತ ದೇವರಿಗಿಂತ ದೊಡ್ಡವನು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣ ಸಂಪಾದಿಸಲು ರೈತರನ್ನು ಹೆದರಿಸಿ `ನೈಸ್~ ಸಂಸ್ಥೆಗೆ ಜಮೀನು ನೀಡಿದ್ದು, ಈ ಅನ್ಯಾಯದ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಬೇಕು~ ಎಂದು ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ಕರೆ ನೀಡಿದರು.`ಜನಪ್ರತಿನಿಧಿಗಳಿಗೆ ಆತ್ಮ ಗೌರವವಿದ್ದರೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ, ಪ್ರಜಾಪ್ರಭುತ್ವ ನಾಶವಾಗದಂತೆ ರೈತರ ಹಕ್ಕುಗಳನ್ನು ರಕ್ಷಿಸಬೇಕು. ಪವಿತ್ರವಾದ ವಿಧಾನಸೌಧಕ್ಕಿಂತ ದೇವಸ್ಥಾನ ಬೇರೊಂದಿಲ್ಲ. ಆಣೆ ಮಾಡುವುದಕ್ಕೋಸ್ಕರ ಯಾರೂ ಮಂಜುನಾಥನ ಸನ್ನಿಧಿಗೆ ಹೋಗಬೇಕಾಗಿಲ್ಲ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ರೈತರಿಗೆ ನ್ಯಾಯ ದೊರಕಿಸಿಕೊಟ್ಟು ಪ್ರಜಾಪ್ರಭುತ್ವ ಉಳಿಸಬೇಕು~ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. `ನೈಸ್~ ಭೂಸ್ವಾಧೀನ ವಿರೋಧಿ ವೇದಿಕೆ ಅಧ್ಯಕ್ಷ ಪಂಚಲಿಂಗಯ್ಯ ಮಾತನಾಡಿ, `ನೈಸ್~ ಸಂಸ್ಥೆಯಿಂದ ರೈತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯವನ್ನು ನಿಲ್ಲಿಸಲು ಸರ್ಕಾರ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.ಸಾಹಿತಿ ದೇವನೂರು ಮಹದೇವ, ಚಿಂತಕ ಡಾ.ಕೆ.ಮರುಳಸಿದ್ದಪ್ಪ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ, ಡಿಎಸ್‌ಎಸ್‌ನ ವಿ.ನಾಗರಾಜ್, ಪಟಾಪಟ್ ನಾಗರಾಜ್, `ಅಹಿಂದ~ ಮುಖಂಡ ನರಸಿಂಹಯ್ಯ, ಕರುನಾಡ ಸೇನೆ ಕಾರ್ಯಾಧ್ಯಕ್ಷ ಪಟ್ಟಣಗೆರೆ ಜಯಣ್ಣ, ಮಹಿಳಾ ಅಧ್ಯಕ್ಷೆ ಎಂ.ಪಿ. ಹೇಮಾವತಿ, ಕಮ್ಯುನಿಸ್ಟ್ ನಾಯಕಿ ಡಾ.ಜಯಲಕ್ಷ್ಮಿ  ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry