ಶನಿವಾರ, ಮೇ 8, 2021
19 °C

ನೊಂದವರ ಬಾಳಿಗೆ ಬೆಳಕು ಚೆಲ್ಲಿದ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಾಷ್ಟ್ರ ನಾಯಕ ಡಾ.ಬಾಬು ಜಗಜೀವನ್‌ರಾಂ ಅವರು ಹೋರಾಟದ ಮೂಲಕ ನೊಂದವರ ಬಾಳಿಗೆ ಬೆಳಕು ಚೆಲ್ಲಿದ ಮಹಾನ್ ನಾಯಕರಾಗಿದ್ದರು ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ಬಣ್ಣಿಸಿದರು.ಗುರುವಾರ ಜಿಲ್ಲಾ ತರಾಸು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಮ್ಮ ಜೀವನದುದ್ದಕ್ಕೂ ಸಮಾಜ ಪರಿವರ್ತನೆಗಾಗಿ ಮತ್ತು ನೊಂದವರ ಬಾಳಿಗೆ ಶ್ರಮಿಸಿದ ಜಗಜೀವನರಾಂ ಅವರು ಎಲ್ಲಿಯೂ ಸಹ ತಮ್ಮ ಗುರಿಯಿಂದ ಹಿಂದೆ ಸರಿದಿಲ್ಲ. ವಿಜ್ಞಾನ ಪದವೀಧರರಾದ ಬಾಬು ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅನೇಕ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದರು ಎಂದು ಸ್ಮರಿಸಿದರು.ಬಾಬು ಅವರ ಜೀವನವೇ ನೀರಂತರ ಹೋರಾಟದಿಂದ ಕೂಡಿದ್ದು, ಅವರ ಮಗಳಾದ  ಮೀರಾಕುಮಾರ್ ಅವರು ಇಂದಿನ ಲೋಕಸಭಾ ಸ್ಪೀಕರ್ ಆಗಿರುವುದು ನೊಂದವರ ಹಾಗೂ ಹಿಂದುಳಿದ, ದೀನ, ದಲಿತ ಸಮುದಾಯಕ್ಕೆ ನೀಡಿದ ಗೌರವವಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಬಾಬು ಜಗಜೀವನ್ ರಾಂ ಅವರನ್ನು ತಾವು ಹತ್ತಿರದಿಂದ ಕಂಡಿದ್ದು, 1969ರಲ್ಲಿ ಚಿತ್ರದುರ್ಗಕ್ಕೆ ಪ್ರಥಮ ಬಾರಿ ಆಗಮಿಸಿದ್ದಾಗ ಈಗಿನ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಭಾಷಣ ಮಾಡಿದ್ದರು ಎಂದು ನೆನೆದರು. ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನ್ ರಾಂ ಅವರು ದೇಶದ ಪ್ರಧಾನಮಂತ್ರಿಗಳಾಗಬೇಕಿತ್ತು. ಆದರೆ, ಜಾತಿ ಕಾರಣದಿಂದ ಅದು ಸಾಧ್ಯವಾಗಲಿಲ್ಲ ಎಂದರು.

ಸರ್ಕಾರಿ ಕಲಾ ಕಾಲೇಜು ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಚ್. ಲಿಂಗಪ್ಪ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾಡನಾಯಕನಹಳ್ಳಿ ರಂಗಪ್ಪ ಅವರು ಡಾ.ಬಾಬು ಜಗಜೀವನ್ ರಾಂ ಕುರಿತು ಉಪನ್ಯಾಸ ನೀಡಿದರು. ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಆರ್. ಪರಮೇಶ, ಉಪಾಧ್ಯಕ್ಷೆ  ಪ್ರತಿಭಾ ರಮೇಶ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ, ಉಪ ವಿಭಾಗಾಧಿಕಾರಿ ನಾಗರಾಜ್, ನಗರಸಭಾ ಸದಸ್ಯ ಕುಮಾರ್, ಮುಖಂಡ ಡಿ.ಎನ್. ಮೈಲಾರಪ್ಪ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಜಿ. ವೆಂಕಟೇಶ್ ಹಾಜರಿದ್ದರು.ದೇಶ ಕಂಡ ಮಾದರಿ ರಾಜಕಾರಣಿ ಬಾಬೂಜಿ

ಮೊಳಕಾಲ್ಮುರು: ಡಾ.ಬಾಬು ಜಗಜೀವನ್‌ರಾಂ ಅವರು ಹತ್ತಾರು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟಸೇವೆ ಸಲ್ಲಿಸುವ ಮೂಲಕ ದೇಶಕಂಡ ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮಿದರು ಎಂದು ಉಪನ್ಯಾಸಕ ಡಾ.ಲೋಕರಾಜ್ ದೊಡ್ಡಮನಿ ಹೇಳಿದರು.ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾ.ಪಂ. ಸಮಾಜ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್‌ರಾಂ ಅವರ 105ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.1967ರಲ್ಲಿ ಜಗಜೀವನ್‌ರಾಂ ಅವರು ಜಾರಿಗೆ ತಂದ ಹಸಿರುಕ್ರಾಂತಿ ದೇಶದ ಕೃಷಿ ಚಿತ್ರಣ ಬದಲಾವಣೆ ಮಾಡುವ ಜತೆಗೆ ಶೋಷಿತ ಹಾಗೂ ಆರ್ಥಿಕ ಅಶಕ್ತರು ಕೃಷಿ ಕ್ಷೇತ್ರದತ್ತ ಮುಖ ಮಾಡಲು ಅನುವು ಮಾಡಿಕೊಟ್ಟಿತು. ಈ ಮೂಲಕ ಜಗಜೀವನ್‌ರಾಂ ಎಲ್ಲಾ ವರ್ಗಗಳ ನಾಯಕರಾಗಿ ರೂಪಿತವಾದರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ವಿ.ಆರ್. ನಾಯ್ಕ, `ಜಗಜೀವನ್‌ರಾಂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ದೇಶ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ~ ಎಂದರು.

ಜಿಲ್ಲಾಪಂಚಾಯಿತಿ ಸದಸ್ಯರಾದ ಮಾರಕ್ಕ ಓಬಯ್ಯ, ನರಸಮ್ಮ ಗೋವಿಂದಪ್ಪ, ಪ.ಪಂ. ಅಧ್ಯಕ್ಷೆ ಸಮೀರಾನಾಜ್, ಉಪಾಧ್ಯಕ್ಷ ಜಿಂಕಾ ಶ್ರೀನಿವಾಸ್, ತಾ.ಪಂ. ಸದಸ್ಯ ಅಡವಿ ಮಾರಯ್ಯ, ಮುಖ್ಯಾಧಿಕಾರಿ ವಾಸಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಮಾರನಾಯಕ, ದಲಿತ ಸಂಘರ್ಷ ಸಮಿತಿಗಳ ನಾಗೇಂದ್ರಪ್ಪ, ಪಿ. ಪರಮೇಶ್ವರಪ್ಪ, ಹೊನ್ನೂರಪ್ಪ, ಅಮಕುಂದಿ ಗಂಗಾಧರ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಗುರುಮೂರ್ತಿ, ಒಬೇದುಲ್ಲಾ ಮತ್ತು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಮರಿಕುಂಟೆ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದಯಾನಂದ್ ಸ್ವಾಗತಿಸಿದರು, ಮಹಮದ್ ರಫಿ ವಂದಿಸಿದರು. ಪ್ರಧಾನಿ ಪಟ್ಟದಿಂದ ದೂರವಿಟ್ಟ ಜಾತಿ ವ್ಯವಸ್ಥೆ

ಹಿರಿಯೂರು: ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಅವರಂತಹ ಮಹಾತ್ಮರು ದೇಶದಲ್ಲಿನ ಜಾತಿ ವ್ಯವಸ್ಥೆ ಬುಡ ಸಮೇತ ಕಿತ್ತು ಹಾಕುವ ಪ್ರಯತ್ನ ಮಾಡಿದರೂ, ಜಾತಿ ನಮ್ಮನ್ನು ಬಿಟ್ಟು ಹೋಗಲಿಲ್ಲ. ಅನಿಷ್ಟ ಜಾತಿ ವ್ಯವಸ್ಥೆಯ ಕಾರಣಕ್ಕೆ ಅರ್ಹತೆ ಇದ್ದರೂ ಡಾ.ಬಾಬು ಜಗಜೀವನರಾಂ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಸಿ. ಮಹಾಲಿಂಗಪ್ಪ ವಿಷಾದಿಸಿದರು.ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಅವರ 105 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್ ಮಾತನಾಡಿ, ಹುಟ್ಟಿದ ಮನುಷ್ಯರೆಲ್ಲರೂ ಸಮಾನರು. ದೀನ-ದಲಿತರನ್ನು ಸಮಾಜದ ಮುಖ್ಯ ವಾಹಿನಿಯಿಂದ ಹೊರಗಿಡುವುದು ಸಲ್ಲದು. ಸಮಾನತೆ, ಸಹೋದರತ್ವ ಆಧಾರದ ಮೇಲೆ ಸಮಾಜ ಪುನರ್‌ನಿರ್ಮಿಸಬೇಕು ಎಂದು ಕರೆ ನೀಡಿದರು.ಮುಖಂಡ ಬಸವರಾಜ ನಾಯಕ ಮಾತನಾಡಿ, ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದ ಜಗಜೀವನರಾಂ ಅವರು ತಮ್ಮ ಮಿತಿಯಲ್ಲಿಯೂ ಸ್ವಾತಂತ್ರ್ಯ ಹೋರಾಟದ ಜತೆ, ಅಸಮಾನತೆಯ ವಿರುದ್ಧವೂ ಹೋರಾಟ ನಡೆಸಿದ್ದರು. ದಲಿತರ ಸಂಖ್ಯೆಗೆ ತಕ್ಕಂತೆ ಮೀಸಲಾತಿ ಇನ್ನೂ ಸಿಗುತ್ತಿಲ್ಲ. ಶೇ. 70ರಷ್ಟಿರುವ ದಲಿತರಿಗೆ ತಮ್ಮ ಹಕ್ಕನ್ನು ಪಡೆಯಲು ಕೂಗು ಹಾಕಬೇಕು ಎನ್ನುವ ಅರಿವು ಮೂಡಿಲ್ಲ. ಪ್ರಬಲ ಜಾತಿಗಳವರ ಕೂಗು ನಿಂತಿಲ್ಲ ಎಂದು ಅವರು ತಿಳಿಸಿದರು.ದಲಿತ ಮುಖಂಡ ಆಲೂರು ಕಾಂತರಾಜ್ ಮಾತನಾಡಿ, ಇಂದಿರಾ ಸಂಪುಟದಲ್ಲಿ ರಕ್ಷಣಾ ಸಚಿವರ ಹುದ್ದೆಯನ್ನು ಯಾವುದೇ ಹಗರಣಗಳಿಗೆ ಅವಕಾಶ ಕೊಡದೆ ನಿಭಾಯಿಸಿದ್ದ ಜಗಜೀವನರಾಮ ಅವರಿಗೆ ದಲಿತ ವರ್ಗದ ಜನರ ಬಗ್ಗೆ ಅಪಾರ ಕಾಳಜಿಯಿತ್ತು ಎಂದರು.ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರೇವಣಸಿದ್ದಪ್ಪ, ತಾ.ಪಂ. ಅಧ್ಯಕ್ಷೆ ಗಿರಿಜಮ್ಮ, ವೃತ್ತ ನಿರೀಕ್ಷಕ ರೋಷನ್ ಜಮೀರ್, ಮುಖ್ಯಾಧಿಕಾರಿ ಚಂದ್ರಶೇಖರಪ್ಪ, ಬೋರನಕುಂಟೆ ಜೀವೇಶ್, ಓಂಕಾರಪ್ಪ, ಕೆ.ಪಿ. ಶ್ರೀನಿವಾಸ್, ಕೆ. ತಿಮ್ಮರಾಜು, ಜಿ.ಎಲ್.ಎನ್. ಮೂರ್ತಿ, ದಿವಾಕರ್‌ನಾಯಕ್, ವೈ.ಆರ್. ಚೌಧರಿ, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.ಜನ ಸಮುದಾಯದ ನಾಯಕ 


ಚಳ್ಳಕೆರೆ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ್ ರಾಂ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಸಲ್ಲಿಸುವ ಮೂಲಕ ಸಿಹಿ ಹಂಚಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಬಾಬುಜಗಜೀವನ್ ರಾಂ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಮೂಲಕ ಪಕ್ಷವನ್ನು ಎತ್ತರಕ್ಕೆ ಬೆಳೆಸಿದರು ಎಂದು ಹೇಳಿದರು.ಇಂತಹ ನಾಯಕರು ನಡೆದು ಬಂದ ದಾರಿಯಲ್ಲಿ ಇಂದಿನ ಯುವಕರು ಸಾಗಬೇಕು. ಇಡೀ ದೇಶದ ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಉನ್ನತಿಗಾಗಿ ಶ್ರಮಿಸಿದ್ದಾರೆ. ದಲಿತ ಸಮೂಹಕ್ಕೆ ಮಾತ್ರವಲ್ಲದೇ ಎಲ್ಲಾ ಜನಸಮುದಾಯಗಳ ಹಿತಾಸಕ್ತಿಗಾಗಿ ಹೋರಾಡುವ ಮೂಲಕ ಮೌಲ್ಯಯುತ ರಾಜಕಾರಣ ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹುಣಸೇಕಟ್ಟೆ ವೆಂಕಟೇಶ್, ಮಾಜಿ ಪುರಸಭೆ ಸದಸ್ಯ ಎಸ್.ಎಚ್. ಸೈಯ್ಯದ್, ರಾಮಾಂಜನೇಯ, ವಕೀಲ ಶಾಂತಕುಮಾರ್, ಚನ್ನಗಾನಹಳ್ಳಿ ರುದ್ರಮುನಿ, ಪಿ. ತಿಪ್ಪೇಸ್ವಾಮಿ, ಪುರಸಭೆ ಸದಸ್ಯ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.