ಬುಧವಾರ, ನವೆಂಬರ್ 13, 2019
23 °C

ನೊಂದ ನೋವ ನೋಯದವರೆತ್ತ ಬಲ್ಲರಯ್ಯ?

Published:
Updated:

ಈಚಿನ ದಿನಗಳಲ್ಲಿ  `ಪ್ರಜಾವಾಣಿ' ಯ ಸಂಗತದಲ್ಲಿ ಅಚ್ಚಾಗುತ್ತಿರುವ ವಚನಕಾರರ ಬಗೆಗಿನ ಚರ್ಚೆಯನ್ನು ಕುತೂಹಲದಿಂದ ಗಮನಿಸುತ್ತಾ ಬಂದಿದ್ದೇನೆ. ಕರ್ನಾಟಕದ ಸಂಸ್ಕೃತಿ ಮತ್ತು ಚಿಂತನೆಯ ನಿರ್ಮಾಣದಲ್ಲಿ ಅತ್ಯಂತ ವಿಶಿಷ್ಟ ಮತ್ತು ನಿರ್ಣಾಯಕ ಪಾತ್ರ ವಹಿಸಿದ ವಚನ ಪರಂಪರೆಯ ಕುರಿತ ಯಾವುದೇ ಚರ್ಚೆ ತುಂಬಾ ಮಹತ್ವಪೂರ್ಣವಾದುದು. ಅದರಲ್ಲೂ ಒಬ್ಬ ವ್ಯಕ್ತಿಯಾಗಿ, ಬರಹಗಾರನಾಗಿ, ಕನ್ನಡ ಜಾನಪದ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನ ಸಂವೇದನೆ ಮತ್ತು ಸೃಜನಶೀಲತೆಗೆ ಬಹು ದೊಡ್ಡ ಕೊಡುಗೆ ನೀಡಿರುವ, ಕಳೆದ ನಾಲ್ಕೈದು ದಶಕಗಳಿಂದ ನನ್ನ ಆತ್ಮಸಂಗಾತದಲ್ಲಿರುವ ವಚನಕಾರರ ಕುರಿತ ಚರ್ಚೆಯಲ್ಲಿ ನಾನೂ ದನಿಗೂಡಿಸಬೇಕು ಅನಿಸಿದೆ.ಪ್ರಸ್ತುತ ಚರ್ಚೆಯಲ್ಲಿರುವ ಸಂಗತಿಗಳಿಗೆ ನನ್ನ ಪ್ರತಿಕ್ರಿಯೆ ನೀಡುವ ಮೊದಲು ಅವಕ್ಕೆ ಭಿತ್ತಿಯಾಗಿ ಕೆಲವು ಅಂಶಗಳನ್ನು ದಾಖಲಿಸಬಯಸುತ್ತೇನೆ. ನನ್ನ ಕಿರಿಯ ಗೆಳೆಯರಾದ ಶಿವಪ್ರಕಾಶರು ತಮ್ಮ ಈ ಕುರಿತ ಅಂಕಣದಲ್ಲಿ ಹೇಳಿರುವ ಎಲ್ಲ ವಿಚಾರಗಳನ್ನೂ ನಾನು ಅನುಮೋದಿಸುವ ಸಂದರ್ಭದಲ್ಲೇ ನನ್ನ ಮತ್ತು ವಚನಗಳ ಸಂಬಂಧದ ವಿಶಿಷ್ಟ ಪರಿಯನ್ನೂ ಸೂಚಿಸಬಯಸುತ್ತೇನೆ. ಅತ್ತ ಲಿಂಗಾಯತ ಸಮುದಾಯದವನೂ ಅಲ್ಲದ ಇತ್ತ ಬಾಹ್ಮಣ ಪರಿವಾರದವನೂ ಅಲ್ಲದ ನಾನು ಆ ದೃಷ್ಟಿಕೋನಗಳಿಂದ ವಚನಗಳನ್ನು ಅರ್ಥೈಸಲು ಸಾಧ್ಯವಿಲ್ಲ. ವಚನಪರಂಪರೆಯ ಮುಂದುವರಿಕೆಯಾದ ಸಾವಳಗಿ ಮಠದ ಶಿವಲಿಂಗ ಸ್ವಾಮಿಗಳು ವಚನಕಾರರ ತತ್ವವನ್ನು ನಿಜಬದುಕಿನಲ್ಲಿ ಆಚರಿಸುತ್ತಿದ್ದವರು. ಆ ಮಹಾನ್ ಶಿವಯೋಗಿಗಳ ಸಾನ್ನಿಧ್ಯದಲ್ಲಿ ವಚನಗಳ ಜೀವನಸತ್ವವನ್ನು ಕಂಡುಕೊಂಡೆ. ನನ್ನ ವಿದ್ಯಾಗುರುಗಳಾದ ಪ್ರೊ. ಭೂಸನೂರುಮಠ ಅವರು ವಚನ ಪರಂಪರೆಯ ಬಹು ದೊಡ್ಡ ವಿದ್ವಾಂಸರಾಗಿದ್ದವರು. ಅವರ ಮೂಲಕ ನಾನು ವಚನಗಳ ತಾತ್ವಿಕ ಸತ್ವವನ್ನು ಅರಿತುಕೊಂಡೆ. ನನ್ನ ಕಾವ್ಯೋದ್ಯೋಗದಲ್ಲಿ ನನಗೆ ದೊರಕಿರುವ ಒಳನೋಟಗಳಿಂದ ವಚನಕಾರರ ಕಾವ್ಯಸತ್ವವನ್ನು ಗ್ರಹಿಸತೊಡಗಿದೆ. ಕಾವ್ಯ ಬರೆಯುವುದಕ್ಕಾಗಿ ಕಾವ್ಯ ಬರೆದ ದೊಡ್ಡ ಹೆಸರಿನ ಕವಿಗಣಕ್ಕಿಂತಾ ಬಸವಣ್ಣ, ಅಕ್ಕ ಮತ್ತು ಅಲ್ಲಮರೇ ದೊಡ್ಡಕವಿಗಳೆಂದೂ ಕಳೆದ ನಲವತ್ತು ಸಂವತ್ಸರಗಳಿಂದ ಸಾರುತ್ತಾ ಬಂದಿರುವವನು ನಾನು.ಕಲ್ಬುರ್ಗಿಯವರ 14 ವಚನ ಸಂಪುಟಗಳನ್ನು ಓದಿದ ಮಾತ್ರಕ್ಕೇ ಯಾರಿಗೂ ವಚನಗಳ ಆಳ ಮತ್ತು ಹರಿವುಗಳು ಅರ್ಥವಾಗುವುದಿಲ್ಲ. ವಚನಗಳನ್ನು ಇಡೀ ಭಾರತದ ಮತ್ತು ಕರ್ನಾಟಕದ ಪ್ರಾದೇಶಿಕ ಸಂಸ್ಕೃತಿಗಳ ವಿಕಾಸದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ವಚನಕಾರರ ಪೂರ್ವದಲ್ಲಿ ತಮಿಳಿನ ನಾಯನ್ಮಾರರಿದ್ದಾರೆ, ಆಳ್ವಾರರಿದ್ದಾರೆ. ಗುಜರಾತಿನ ಪಾಶುಪತರೂ, ಕಾಶ್ಮೀರದ ಶಿವಾದ್ವೈತಿಗಳೂ ಉತ್ತರಾಪಥದ ನಾಥ-ಸಿದ್ಧರೂ ಇದ್ದಾರೆ. ಅವರ ನಂತರದಲ್ಲಿ ಅವರ ಪ್ರಭಾವವನ್ನು ಬಿಂಬಿಸುವ ಮಹಾರಾಷ್ಟ್ರದ ವಾರ್ಖರಿ ಪಂಥದವರಿದ್ದಾರೆ, ತಮಿಳುನಾಡಿನ ಸಿದ್ಧರಿದ್ದಾರೆ, ಆಂಧ್ರದ ವೇಮನಾದಿ ಸಂತರಿದ್ದಾರೆ, ಕರ್ನಾಟಕದ ವಿರಕ್ತ ಪರಂಪರೆಯ ಶಿವಯೋಗಿಗಳಿದ್ದಾರೆ. ನಿಜಗುಣ, ಷಡಕ್ಷರಿ, ಕಡಕೋಳು ಮಡಿವಾಳಪ್ಪ, ಶಿಶುನಾಳ ಷರೀಫ ಇತ್ಯಾದಿ ತತ್ವಪದಕಾರರಿದ್ದಾರೆ. ಶರಣರಿಂದ ಪ್ರಭಾವಿತರಾಗಿ ಅವರಿಂದ ಭಿನ್ನರಾಗಿ ಬೆಳೆದ ಕೊಡೇಕಲ್ ಮೂಲದ ಮಂಟೇಸ್ವಾಮಿ, ಮಲೆ ಮಾದೇಶ್ವರರಿದ್ದಾರೆ. ವೈದಿಕ ಮಾರ್ಗಿಗಳಿಗಿಂತ, ಜೈನ-ಬೌದ್ಧರಿಂದ ಬೇರೆಯಾದ ಹಾದಿಯನ್ನು ತುಳಿದ, ಆಧುನಿಕಪೂರ್ವ ಭಾರತೀಯ ಸಂಸ್ಕೃತಿಯ ಬಹುದೊಡ್ಡ ನಿರ್ಮಾತೃವಾದ ಈ ಸಮೃದ್ಧ ಪರಂಪರೆಯ ಚೌಕಟ್ಟು ವಚನಕಾರರ ನಿರ್ವಚನಕ್ಕೆ ಬಹು ಮುಖ್ಯ.ಅಧ್ಯಾತ್ಮದಲ್ಲಿ ಶ್ರುತಿಪಾರಮ್ಯವನ್ನು ಈ ಪರಂಪರೆಯ ಎಲ್ಲರಂತೆ ವಚನಕಾರರೂ ವೇದಿಸಲರಿಯದ ವೇದಗಳನ್ನೂ ಪೂರೈಸಲರಿಯದ ಪುರಾಣಗಳನ್ನೂ ಅರಿಯಲರಿಯದ ಆಗಮಗಳನ್ನೂ ನಿರಾಕರಿಸಿದ್ದಾರೆ. ಈ ಪರಂಪರೆಗಳಲ್ಲಿ ಸರ್ವೋಪರಿಯಾದದ್ದು ಅನುಭವ ಪ್ರಮಾಣ. `ಆರೂಢಕೂಟದಲಿ ಆರ ಸಾಕ್ಷಿಯನೂ ಕಾಣೆ' ಅಂದವನು ಅಲ್ಲಮ. ತನ್ನರಿವನ್ನೇ ಆಧಾರವಾಗಿಟ್ಟುಕೊಂಡ ವಚನಕಾರರು ಸಮಾನ ನಂಬಿಕೆಯವರ ಜೊತೆಗಿನ ಸಂವಾದಗಳ ಮೂಲಕ ತಮ್ಮ ಒಳನೋಟಗಳನ್ನು ಪರಸ್ಪರ ನಿಕಷಕ್ಕೊಡ್ಡಲೋಸುಗ ಶರಣಸಮುದಾಯವನ್ನು ಕಟ್ಟಿಕೊಂಡರು. ಈ ಆಧ್ಯಾತ್ಮಿಕ ಮುಂಚಲನೆಯನ್ನು ಕನ್ನಡ ಭಾಷಿಕ ಸಂದರ್ಭದಲ್ಲಿ ಪ್ರಾರಂಭಿಸಿದವರು ಬಸವಪೂರ್ವಯುಗದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ದೇವರ ದಾಸಿಮಯ್ಯರೆಂಬುದು ಸ್ವತಃ ಬಸವಣ್ಣನವರ ವಚನಗಳಲ್ಲೇ ಸಿದ್ಧವಾಗುತ್ತದೆ. ಕಾಯಕಜೀವಿಗಳಾದ ಈ ಶರಣರು ಸಮಣಪಂಥದವರಂತೆ ಲೋಕವಿಮುಖವಾದವರಲ್ಲ. ಅಥವಾ ತ್ರಿಮತಸ್ಥಾಚಾರ್ಯರಂತೆ ವೇದೋಪನಿಷತ್ತುಗಳ ಭೂತಗನ್ನಡಿಯಲ್ಲಿ ಇಹಪರಗಳ ತಿಳಿವನ್ನು ಅರಿಯಹೊರಟವರಲ್ಲ. ಅಥವಾ ಬ್ರಹ್ಮಸೂತ್ರದ ಭಾಷ್ಯಕಾರರಲ್ಲ. ಶೂದ್ರರನ್ನು ಹೊಸಿಲಾಚೆಯಿಡುವ ಮಠ-ದೇಗುಲಗಳವರಲ್ಲ. ಇವರೆಲ್ಲರನ್ನೂ ಕೇವಲ ಅಧ್ಯಾತ್ಮಮಾರ್ಗಿಗಳೆಂಬ ಸರಳ ವಿಂಗಡನೆಗೊಳಪಡಿಸಿದರೆ ನಮಗೆ ಭಾರತೀಯ ಆಧ್ಯಾತ್ಮಿಕ ಪರಂಪರೆಗಳಲ್ಲಿರುವ  ಒಳಭಿನ್ನತೆಗಳ ಅರಿವಿಲ್ಲವೆಂದೇ ಅರ್ಥ. ಆದ್ದರಿಂದ ಶರಣರು ಶಾಂಕರಪರಂಪರೆಯ ವೈದಿಕರೂ ಅಲ್ಲ: ಅಭಿನವಗುಪ್ತ ಪರಂಪರೆಯ ಆಗಮಿಕರೂ ಅಲ್ಲ; ಬುದ್ಧ-ಮಹಾವೀರ ಪರಂಪರೆಯ ಸಮಣರೂ ಅಲ್ಲ. ಆದ್ದರಿಂದ ಶರಣರು ವೈದಿಕೇತರರೂ, ಸಮಣೇತರರೂ ಅಗಿದ್ದರೆಂಬುದು ಸುಸ್ಪಷ್ಟ.ಆಧ್ಯಾತ್ಮಿಕವಾಗಿ ಶಾಸ್ತ್ರ ಪ್ರಮಾಣವನ್ನು ತೊರೆದ ಶರಣರಿಗೆ ವರ್ಣಾಶ್ರಮ ಮತ್ತು ಜಾತಿಯ ಮೇಲುಕೀಳಿನ ಮೌಲ್ಯಗಳಿಂದಲೂ ಬಿಡುಗಡೆ ಪಡೆಯುವುದು ಅನಿವಾರ್ಯವಾಯಿತು. ಹರಳಯ್ಯ-ಮಧುವರಸರ ಪ್ರಸಂಗ ಐತಿಹಾಸಿಕವಲ್ಲವೆಂದು ಸಾಬೀತು ಮಾಡಿದರೂ ಅವರ ವರ್ಣಾಶ್ರಮ - ಜಾತಿಪರವಲ್ಲದ ನಿಲುವುಗಳನ್ನು ಅಲ್ಲಗಳೆಯಲಾಗುವುದಿಲ್ಲ. ಉತ್ತಮಕುಲದ ಅಹಮಿಕೆಯನ್ನು ಬಿಟ್ಟು ಅಂತ್ಯಜನೆನ್ನಲಾದ ಮಾದಾರ ಚನ್ನಯ್ಯನನ್ನು ತನ್ನ ಹಿರೀಕನೆಂದು ಗುರುತಿಸಿಕೊಂಡ ನಿದರ್ಶನಕ್ಕೆ ಸಂವಾದಿಯಾದದ್ದನ್ನು ಶಂಕರಾಚಾರ್ಯರಲ್ಲಿ ನೋಡಲು ಸಾಧ್ಯವೇ ಇಲ್ಲ. ಅಂದಮಾತ್ರಕ್ಕೆ ವಚನಕಾರರದು ಜಾತಿವಿನಾಶಕ ಸಂಘಟನೆಯೆಂದು ನಾನು ಹೇಳ ಹೊರಟಿಲ್ಲ. ಕಾವ್ಯರಚನೆಯಂತೆ ಜಾತಿವಿರೋಧವೂ ಅವರ ಆಧ್ಯಾತ್ಮಿಕ ಮಾರ್ಗದ ಮುಖ್ಯ ಭಾಗವೆಂದು ಮಾತ್ರ ಹೇಳುತ್ತಿದ್ದೇನೆ. `ಪೂರ್ವಾಚಾರವ ವಿಚಾರಿಸಿದರೆ ತಲೆದಂಡ' ಎಂದ ಬಸವಣ್ಣ ಶಾಂಕರ ಮಾರ್ಗಿಯಾಗುವುದು ಸಾಧ್ಯವೇ ಇಲ್ಲ.ಮುಂದೆ ವೀರಶೈವ ಸಾಹಿತ್ಯವೆಂದು ಕವಿಚರಿತ್ರಕಾರರು ಗುರುತಿಸಿದ್ದು ವಚನಕಾರರ ಪ್ರೇರಣೆ ಸೃಜಿಸಿದ ಒಂದು ಧಾರೆ ಮಾತ್ರ. ಈ ಧಾರೆಯಲ್ಲೂ ಸಾಮಾಜಿಕ ಆಯಾಮಗಳನ್ನು ಪೂರ್ತಿ ಬಿಟ್ಟುಕೊಡದಹರಿಹರ-ರಾಘವಾಂಕರಂಥವರಿದ್ದಾರೆ; ಸೋಮನಾಥ-ಭೀಮಕವಿಯಂಥವರಿದ್ದಾರೆ. ಅಷ್ಟೇ ಅಲ್ಲದೆ ಜಾತಿ ಚರ್ಚೆಗಳನ್ನು ಮುನ್ನೆಲೆಗೆ ತಂದ ಜನಪದ ದಲಿತ ಬಸವಪುರಾಣಕಾರರ ಧಾರೆಯೂ ಒಂದಿದೆ. ಸೂಫಿಗಳೊಡನೆ ಸಮನ್ವಯ ಬಯಸಿದ ಕೊಡೇಕಲ್ ಬಸವೇಶ್ವರ, ಫಕೀರೇಶ್ವರರ ಪರಂಪರೆಯೂ ಇದೆ. ಜಾತಿಯ ಕುರುಹೆಂದು ಇಷ್ಟಲಿಂಗವನ್ನೂ ತೊರೆದ ಸಿದ್ಧಾರೂಢರ ಪರಂಪರೆಯೂ ಇದೆ.  ಇವೆಲ್ಲವೂ ವೈದಿಕೇತರವಾದ, ವರ್ಣಾಶ್ರಮಾನುಸಾರಿಯಲ್ಲದ ವಚನಕಾರರ ಪರಂಪರೆಯ ವಿಸ್ತೃತ ರೂಪಗಳಾಗಿವೆ.ಇವೆಲ್ಲವುಗಳ ಹಿನ್ನೆಲೆಯಲ್ಲಿ ವಚನಕಾರರ ವೈದಿಕೇತರ, ವರ್ಣಾಶ್ರಮೇತರ ನೀತಿ ವಸಾಹತು ಪದ್ಧತಿಯ ಹೊತ್ತಿನಲ್ಲಿ ವಿಕೃತವಾದ ಭಾರತೀಯ ಇತಿಹಾಸ ಕಲ್ಪನೆಯ ಭಾಗವೆನ್ನುವ ನಿಲುವಿನಲ್ಲಿ ಹುರುಳಿಲ್ಲವೆಂದು ಹೇಳದೆ ವಿಧಿಯಿಲ್ಲ. ಇನ್ನು ಪಂಪನಿಂದಲೇ ಕನ್ನಡ ಪರಂಪರೆಯಲ್ಲಿ ಮುನ್ನೆಲೆಗೆ ಬಂದು, ವಚನಕಾರರಲ್ಲಿ, ಭಕ್ತಿಪರಂಪರೆಗಳಲ್ಲಿ, ಜನಪದದಲ್ಲಿ ಮರಮರಳಿ ಚರ್ಚೆಗೊಳಗಾಗಿರುವ ಜಾತಿಕುಲಗಳ ತರತಮ ಸಂಬಂಧ ಮತ್ತು ಸಂಘರ್ಷಗಳು ಇರಲಿಲ್ಲವೆನ್ನುವುದೂ ಅಷ್ಟೇ ಅಸಮರ್ಥನೀಯ.ವಚನಕಾರರು ನುಡಿನಡೆಗಳನ್ನು ಬೆಸೆಯುವ ಕಾತುರದಲ್ಲಿ ಕಾವ್ಯೋಪಜೀವಿ ಕವಿಗಳಿಗಿಂತ, ವಿಚಾರೋಪಜೀವಿ ವಿದ್ವಾಂಸರಿಂದ ಭಿನ್ನರಾದರು. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪ್ರಜ್ಞಾಪೂರ್ವಕವಾಗಿ ಕೊಟ್ಟ ಕೊಡುಗೆ ಅನನ್ಯ. ಆದರೆ ಅಷ್ಟೇ ಅಗ್ಗಳವಾದುದು ಅವರು ಜನರ ಬದುಕಿಗೆ ಮಾಡಿದ ಉಪಕಾರ. ಬಸವಪೂರ್ವ ಯುಗದಲ್ಲಿ ಆಗಮಿಕಪರವಾಗಿದ್ದ ಕಾಳಾಮುಖ ಮಠಗಳು ಬಸವೋತ್ತರ ಯುಗದಲ್ಲಿ ವಿರಕ್ತಮಠಗಳಾಗಿ ಮಾರ್ಪಟ್ಟವು. ಇಂಥಾ ಮಠಗಳಲ್ಲಿ ನಮ್ಮ ಗುರುಗಳ ಮಠವಾದ ಸಾವಳಗಿ ಮಠವೂ ಒಂದು. ಶಾಲೆಗೆ ಕಳುಹಿಸುವ ಚೈತನ್ಯವಿಲ್ಲದ ನನ್ನ ತಂದೆ ತಾಯಿ ನನ್ನನ್ನು ಸಾವಳಗಿ ಸ್ವಾಮಿಗಳ ಉಡಿಗೆ ಹಾಕಿದರು. ಅಂದಿನಿಂದ ಸಾವಳಗಿ ಸ್ವಾಮಿಗಳು ನನಗೆ ತಂದೆಯೂ ತಾಯಿಯೂ ಆಗಿ ಪೊರೆದು ನಾನೂ ಒಬ್ಬ ಸುಶಿಕ್ಷಿತನಾಗುವಂತೆ ಮಾಡಿದರು. ಜಾತಿಯಲ್ಲಿ ವೀರಶೈವ ನಾನಲ್ಲವೆಂಬ ವಿಚಾರ ಅವರ ಮನದಲ್ಲಿ ಸುಳಿಯಲೇ ಇಲ್ಲ. ಅವರಿಲ್ಲದಿದ್ದರೆ ನಾನು ಶಾಲೆಯ ಮೆಟ್ಟಿಲನ್ನೇ ಹತ್ತಲಾಗುತ್ತಿರಲಿಲ್ಲ. ವಚನಕಾರರರ ಆಚಾರ-ವಿಚಾರಗಳು, ಕೆಳಜಾತಿಪರ ನಿಲುವುಗಳು ಸಾಂಸ್ಥಿಕ ರೂಪವಾಗಿ ಬೆಳೆದಾಗ ನನ್ನಂಥ ಎಷ್ಟೋ ಮಂದಿ ಅದರಿಂದ ಉದ್ಧಾರವಾಗಿದ್ದೇವೆ. ಆದ್ದರಿಂದ ನನ್ನ ಕಾವ್ಯಭಾಷೆಯ ಮತ್ತು ಬದುಕಿನ ನಿರ್ಮಾತೃಗಳೂ ವಚನಕಾರರೇ ಆಗಿದ್ದಾರೆ. ಜಾತಿ-ಉಪಜಾತಿಗಳು ಉಗ್ರಸ್ವರೂಪ ಪಡೆಯುತ್ತಿರುವ ಇಂದಿನ ಸಮಾಜದಲ್ಲಿ ಜಾತಿಯೆನ್ನುವುದು ಶೋಷಕ ಸಂಸ್ಥೆಯಾಗಿರಲಿಲ್ಲ, ವಚನಕಾರರು ಆ ಬಗ್ಗೆ ಸೊಲ್ಲೆತ್ತಲಿಲ್ಲ ಎನ್ನುವವರ ಅಧ್ಯಯನ ಮಾದರಿ ಎಷ್ಟೇ ಸಂಕೀರ್ಣವಿರಲಿ, ಅವರ ವಾದಗಳು ಎಷ್ಟೇ ಚತುರವಾಗಿರಲಿ ಅದು ನಮ್ಮ ನಿಜಬದುಕಿನ ವಿಡಂಬನೆ.  `ಗಜಂ ಮಾಯಾ, ಪಲಾಯನಂ ಮಾಯಾ'  ಎಂಬ ಚತುರೋಕ್ತಿಯ ಇನ್ನೊಂದು ಪರಿ.ಅಕ್ಕ ಹೇಳುವಂತೆ: `ನೊಂದ ನೋವ ನೋಯದವರೆತ್ತ ಬಲ್ಲರಯ್ಯ?'

ಪ್ರತಿಕ್ರಿಯಿಸಿ (+)