ನೊಂದ ಮಗುವಿಗೆ ನೀಡಿ ಸಾಂತ್ವನ

7

ನೊಂದ ಮಗುವಿಗೆ ನೀಡಿ ಸಾಂತ್ವನ

Published:
Updated:

ಯಾವುದೇ ರೀತಿಯ ಹಿಂಸೆ ಅಥವಾ ದೌರ್ಜನ್ಯ ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲದು. ಘಟನೆಯಿಂದ ಮಗುವಿಗೆ ಆಘಾತವಾದಾಗ, ಆ ಸಂದರ್ಭ ಘಟಿಸಿದ ಕೆಲವು ದಿನಗಳ ನಂತರವೂ ಮಗು ತನ್ನ ಮನಸ್ಸನ್ನು ಪುನರ್ ರೂಪಿಸಿಕೊಳ್ಳಲು ಮತ್ತು ಘಟನೆ ನಡೆಯುವುದಕ್ಕೆ ಮುಂಚೆ ಇರುವಂತೆ ಆಗಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ರೀತಿಯ ಭಾವನಾತ್ಮಕ ನಡವಳಿಕೆ ಹಾಗೂ ಬದಲಾವಣೆಗಳು ಅದರಲ್ಲಿ ಕಾಣಿಸುತ್ತವೆ.ಕೆಲವೊಮ್ಮೆ ದೊಡ್ಡವರಿಗೆ ಆಗುವಂತೆ ಮಕ್ಕಳು ಸಹ ಅಂತಹ ಘಟನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ. ಆ ಘಟನೆಯಿಂದ ತಮಗಾದ ನೋವಿಗೆ ಪ್ರತಿಯಾಗಿ ದೊಡ್ಡವರಿಂದ ಒಂದು ರೀತಿಯ `ಸಾಂತ್ವನ' ಮತ್ತು `ಉತ್ತರ'ಗಳನ್ನು ಮಕ್ಕಳು ನಿರೀಕ್ಷಿಸುತ್ತಾರೆ. ದೌರ್ಜನ್ಯ ನಡೆದ ಸಂದರ್ಭದ ಬಗ್ಗೆ ದೊಡ್ಡವರಾಗಿದ್ದರೂ ಹಲವು ಬಾರಿ ನಮ್ಮಲ್ಲಿ ಉತ್ತರಗಳು ಇರುವುದಿಲ್ಲ. ಅಂತಹ ಘಟನೆಯಿಂದ ನಾವು ಸಹ ಆಘಾತಕ್ಕೆ ಒಳಗಾಗಿರುತ್ತೇವೆ. ಆದರೂ ಮಕ್ಕಳಿಗಾಗಿ ನಮ್ಮ ವರ್ತನೆಯನ್ನು ಬದಲಿಸಿಕೊಳ್ಳಲೇ ಬೇಕಾಗುತ್ತದೆ.ಮಾತನಾಡಬೇಕೇ?

ಯಾವತ್ತೂ ಮಗುವಿನೊಡನೆ ಘಟನೆಯ ಬಗ್ಗೆ ಮಾತನಾಡಲು ಹಿಂಜರಿಯಬಾರದು. ಮಗು ಬಂದು ನಿಮ್ಮಂದಿಗೆ ಸಂಬಂಧಿಸಿದ ಘಟನೆಯ ಬಗ್ಗೆ ಹೇಳಿದಾಗ (ತನ್ನ ಮೇಲೆ ದೌರ್ಜನ್ಯ ನಡೆದ ಬಗ್ಗೆ) ಅದರಿಂದ ನೀವು ಚಿಂತೆಗೆ ಒಳಗಾಗುತ್ತೀರಿ ಎಂಬುದು ತಿಳಿದರೆ, ಅದು ಮತ್ತೆ ನಿಮ್ಮೊಂದಿಗೆ ಆ ವಿಷಯ ಹೇಳಲು ಹಿಂದೆ-ಮುಂದೆ ನೋಡಬಹುದು. ಇದರಿಂದ ವಿಷಯವನ್ನು ಮನಸ್ಸಿನಲ್ಲೇ ಇಟ್ಟುಕೊಂಡು, ಮುಂದೆ ಜೀವನಪರ್ಯಂತ ಮಗು ಒದ್ದಾಡಬಹುದು. ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಬದಿಗಿಟ್ಟು, ಮಗು ಹೇಳಿದ್ದನ್ನು ಆಸಕ್ತಿಯಿಂದ ಕೇಳಿ ಅದಕ್ಕೆ ಸಾಂತ್ವನ ನೀಡಿ.ದೌರ್ಜನ್ಯ ನಡೆದ ರೀತಿಯನ್ನು ಅವಲಂಬಿಸಿ, ಮಕ್ಕ­ಳಿಗೆ ತಪ್ಪು ಭಾವನೆ ಬರದಂತೆ ಪೋಷಕರು ನೋಡಿಕೊಳ್ಳ­ಬೇಕು. ಇದನ್ನು ಎರಡು ಉದಾಹರಣೆಗಳ ಮೂಲಕ ನೋಡೋಣ.ಉದಾಹರಣೆ 1

ಉಷಾ ಎಂಟು ವರ್ಷದ ಬಾಲಕಿ. ಮನೆಯಲ್ಲಿ ತಂದೆ-ತಾಯಿ ಮತ್ತು ಅಣ್ಣನನ್ನು ಒಳಗೊಂಡ ಚಿಕ್ಕ ಕುಟುಂಬ. ತಾಯಿ ಒಂದು ದಿನ ಉಷಾ ಒಬ್ಬಳನ್ನೇ ಅಣ್ಣನೊಂದಿಗೆ ಬಿಟ್ಟು ಯಾವುದೋ ಕೆಲಸದ ಸಲುವಾಗಿ ದಿನಪೂರ್ತಿ ಹೊರಗೆ ಹೋಗಿದ್ದಳು. ಅಣ್ಣ ಅಂದು ಯಾಕೋ ಅಸಹ್ಯಕರವಾಗಿ ಉಷಾಳನ್ನು ಮುಟ್ಟಬಾರದ ಕಡೆ ಮುಟ್ಟಿದ. ಅವಳಿಗಂತೂ ಅಳುವೇ ಬಂತು. ಅಣ್ಣ ಯಾರಿಗೂ ಹೇಳಬಾರದೆಂದು ಹೆದರಿಸಿದ. ತಾಯಿ ಸಂಜೆ ಮನೆಗೆ ಬಂದಳು. ಉಷಾ ಹಾಗೂ ಹೀಗೂ ಧೈರ್ಯ ಮಾಡಿ ಅಣ್ಣ ಮಾಡಿದ್ದನ್ನು ಅರ್ಧಂಬರ್ಧ ಹೇಳಿದಳು.ಉಷಾಳ ತಾಯಿಗೆ ಒಂದು ಕ್ಷಣ ಆಘಾತ ಆಯಿತು. ಅವಳಿಗೆ ಅರ್ಥವಾದದ್ದೂ ಅರ್ಧಂಬ­ರ್ಧವೇ. ಅವನೂ ತನ್ನದೇ ಮಗ. ತಕ್ಷಣ ಉಷಾಗೆ ಹೇಳಿದಳು `ನೀನೇ ಏನೋ ಕಿತಾಪತಿ ಮಾಡಿರ­ಬೇಕು. ಅದಕ್ಕೆ ನಿನಗೆ ಹೊಡೆಯಲು ಬಂದಿ­ದ್ದಾನೆ. ನೀನು ಬೇರೇನೋ ಹೇಳುತ್ತಿದ್ದೀಯ' ಎಂದಳು. ಹೇಗೋ ಧೈರ್ಯ ತಂದುಕೊಂಡು ಹೇಳಿದ್ದ ಉಷಾಗೆ, ತನ್ನದೇ ತಪ್ಪೇನೋ ಎನಿಸಿತು. ನಂತರವೂ ಹಲವು ಬಾರಿ ಅಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೂ, ಅದನ್ನು ಯಾರ ಮುಂದೆಯೂ ಬಾಯಿ ಬಿಡದೆ ಸುಮ್ಮನಾದಳು.

ಉದಾಹರಣೆ 2

ಹತ್ತು ವರ್ಷದ ರಮೇಶ ತನ್ನ ಪುಟ್ಟ ಕುಟುಂಬದೊಂದಿಗೆ ನೆಮ್ಮದಿಯಿಂದ ವಾಸವಾಗಿದ್ದ. ಅವನ ಊರಿನಲ್ಲಿ ನಡೆದ ಕೋಮು ಗಲಭೆಯಲ್ಲಿ ತಂದೆ ಮತ್ತು ಅಣ್ಣನನ್ನು ಅವನ ಕಣ್ಣೆದುರೇ ಕಿಡಿಗೇಡಿಗಳು ಕೊಂದು ಹಾಕಿದರು. ಆಗ ರಮೇಶ ಬೀರುವಿನ ಹಿಂದೆ ಅಡಗಿಕೊಂಡಿದ್ದರಿಂದ  ಬಚಾವ್ ಆದ. ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ದರಿಂದ ಬದುಕಿ ಉಳಿದುಕೊಂಡಳು. ಯಾವಾಗಲೂ ಕಣ್ಣಲ್ಲಿ ನೀರು ಹಾಕುವ ತಾಯಿ ಸದಾ ಖಿನ್ನತೆಯಿಂದ ಇರುತ್ತಾಳೆ.ರಮೇಶ ಅಂದಿನ ಘಟನೆಯ ಬಗ್ಗೆ, ತಂದೆ/ ಅಣ್ಣನ ಬಗ್ಗೆ ತಾಯಿ­ಯೊಂದಿಗೆ ಮಾತನಾಡಬೇಕು, ಏನಾದರೂ ಕೇಳಬೇಕು ಎಂದು ಎಷ್ಟೋ ಬಾರಿ ಅಂದುಕೊಳ್ಳುತ್ತಾನೆ. ಆದರೆ ಹಾಗೆ ಕೇಳಲು ಪ್ರಯತ್ನಿಸಿದಾಗೆಲ್ಲ ಅವಳಂತೂ ಅತ್ತೇಬಿಡುತ್ತಾಳೆ. ಕೆಲವು ಬಾರಿ ಸಿಟ್ಟು ಮಾಡಿಕೊಳ್ಳುತ್ತಾಳೆ. ಇದರಿಂದ ರಮೇಶನಿಗೆ ತಾನು ಘಟನೆಯ ಬಗ್ಗೆ ಮಾತನಾಡಲೇ ಬಾರದಿ­ತ್ತೇನೋ ಎನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಘಟನೆಗೆ ತಾನೇ ಕಾರಣನೇನೋ, ತಾನೇಕೆ ಇನ್ನೂ ಜೀವಂತವಾಗಿದ್ದೇನೆ ಎಂಬ ಭಾವನೆ ಕಾಡತೊಡಗುತ್ತದೆ.ಬದಲಾವಣೆ ಬೇಡ

ಹಿಂಸೆ-– ದೌರ್ಜನ್ಯ ನಡೆದಿದೆ ಎಂದ ಮಾತ್ರಕ್ಕೆ ಮಕ್ಕಳ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಬದಲಿಸಬೇಡಿ. ಎಂತಹುದೇ ದೌರ್ಜನ್ಯ ನಡೆದಿದ್ದರೂ, ಆಕಾಶವೇ ತಲೆಯ ಮೇಲೆ ಬಿದ್ದಂತೆ ಕೂರುವುದು ಬೇಡ. ಆದಷ್ಟೂ ಮಗುವಿನ ಪರಿಸರ ಆ ಘಟನೆ ನಡೆಯುವ ಮೊದಲಿನ ಸ್ಥಿತಿಗೆ ಮರಳುವಂತೆ ನೋಡಿಕೊಳ್ಳಿ. ನಿಮ್ಮ ಎಚ್ಚರಿಕೆ ನಿಮಗಿರಲಿ. ಹಾಗೆಂದು ಅತಿಯಾದ ಭಯ ಕೂಡ ಸಲ್ಲದು.ಉದಾಹರಣೆಗೆ, ಯಾವುದೋ ಶಿಕ್ಷಕನಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದ ಮಾತ್ರಕ್ಕೆ, ಮಗುವನ್ನು ಇತರ ಯಾವ ಶಿಕ್ಷಕರೊಂದಿಗೂ ಮಾತನಾಡಬೇಡ ಎಂದು ಹೇಳುವುದು ಅಥವಾ ಶಾಲೆಗೇ ಕಳುಹಿಸದೆ ಇರುವುದು ಸರಿಯಲ್ಲ.ಲೈಂಗಿಕ/ ದೈಹಿಕ ದೌರ್ಜನ್ಯ ನಡೆದ ಹಲವಾರು ಸಂದರ್ಭಗಳಲ್ಲಿ ಆತ್ಮೀ­ಯತೆ ಎನ್ನುವುದು ಭಯ, ಗೊಂದಲ, ನೋವು ಹೀಗೆ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳೊಂದಿಗೆ ಬೆರೆತು ಹೋಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪ್ರೀತಿ/ ಸಾಂತ್ವನ ನಿಯಮಿತವಾಗಿರಲಿ.

ಮಗುವಿನ ಜೊತೆ ಆತ್ಮೀಯವಾ­ಗಿರಿ. ಅದಕ್ಕೆ ನಿಮ್ಮ ಬಗ್ಗೆ ವಿಶ್ವಾಸ ಬರುವಂತೆ ಇರಿ, ಧೈರ್ಯ ತುಂಬಿ. ಹೆಗಲ ಮೇಲೆ ಕೈ ಹಾಕುವ, ಅಪ್ಪಿಕೊಳ್ಳುವ, ತಲೆ ಸವರುವ ಮೂಲಕ ಪ್ರೀತಿ ವ್ಯಕ್ತಪ­ಡಿಸಿ. ಆದರೆ ಇದು ಅತಿಯಾಗದಿರಲಿ, ಆದೇಶದಂತೆ ಇರದಿರಲಿ, ಒತ್ತಾಯ­ಪೂರ್ವಕವಾಗಿ ಇರದಿರಲಿ. ಅಂದರೆ, ಮೈ ಮೇಲೆ ಬಿದ್ದು ಪ್ರೀತಿ ವ್ಯಕ್ತಪಡಿಸುವ ಅಗತ್ಯ ಇಲ್ಲ.ಹಿಂಸೆ-– ದೌರ್ಜನ್ಯ ನಡೆದ ಸಂದರ್ಭದಲ್ಲಿ ಮಗುವಿಗೆ ನಿಮ್ಮ ರಕ್ಷಣೆಯ ಅಗತ್ಯ ಅತ್ಯಂತ ಹೆಚ್ಚಾಗಿರುತ್ತದೆ. ತನ್ನನ್ನು ರಕ್ಷಿಸಲು ಪೋಷಕರಿದ್ದಾರೆ/ ಕುಟುಂಬ ತನ್ನೊಂದಿಗೆ ಇದೆ ಎಂಬ ವಿಶ್ವಾಸ ಮಗುವಿನ ಮನಸ್ಸಿಗೆ ಬರಬೇಕು. ಕೆಲವು ದಿನಗಳ ಕಾಲ ತನ್ನನ್ನು ಶಾಲೆಗೆ ಕಳುಹಿಸಲು ತಾಯಿಯೇ ಬರಬೇಕು ಎಂದು ಅದು ರಚ್ಚೆ ಹಿಡಿದರೆ ಹೋಗಿ. ಮಲಗುವ ಸಮಯದಲ್ಲಿ ಜೊತೆಗೆ ಒಬ್ಬರು ಇರಲೇಬೇಕು ಎಂದು ಒತ್ತಾಯಿಸಿದರೆ ಅದನ್ನೂ ಮಾಡಿ. ಮಗುವಿನ ಮನಸ್ಸಿನಲ್ಲಿ ಮತ್ತೆ ನಿಮ್ಮ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ ವಿಶ್ವಾಸ ಮೂಡುವಂತೆ ನಡೆದುಕೊಳ್ಳಿ.ನಿಗಾ ಇರಲಿ

ಹಿಂಸೆ–- ದೌರ್ಜನ್ಯ ಎಂಥವರಲ್ಲೂ ಒತ್ತಡವನ್ನು ಉಂಟು ಮಾಡುತ್ತದೆ. ಅದರಲ್ಲೂ ಮಕ್ಕಳ ಮನಸ್ಸಂತೂ ಇನ್ನೂ ಅರಳಬೇಕಾದ ಹೂವು. ಅವರು ಯಾವ ರೀತಿ ಈ ಘಟನೆಗಳಿಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಂದೆ- ತಾಯಿ ತಿಳಿದಿರಬೇಕು.ಮಕ್ಕಳ ವರ್ತನೆಯಲ್ಲಿ ಬದಲಾವಣೆಗಳು ಆಗಬಹುದು (ಕೋಪ, ಸಿಡಿಮಿಡಿ ಅಥವಾ ಮಂಕಾಗಿರುವುದು, ಖಿನ್ನತೆ) ನಿದ್ರೆ/ ಆಹಾರ ಸೇವನೆಯಲ್ಲಿ ವ್ಯತ್ಯಾಸ ಉಂಟಾಗಬಹುದು (ನಿದ್ರೆಯಲ್ಲಿ ಪದೇಪದೇ ಎಚ್ಚರಗೊಳ್ಳು­ವುದು, ಭಯ ಬೀಳುವುದು, ಕಡಿಮೆ ಆಹಾರ ಸೇವಿಸುವುದು) ಈ ಎಲ್ಲ ಬದಲಾವಣೆಗಳನ್ನೂ ಎಚ್ಚರಿಕೆಯಿಂದ ಗಮನಿಸಬೇಕು.ಹಲವಾರು ಸಲ ಮಕ್ಕಳು ಆಟ ಆಡುವಾಗ, ಸ್ನೇಹಿತರೊಂದಿಗೆ ವರ್ತಿಸುವಾಗ, ಘಟನೆಯನ್ನು ಪ್ರಸ್ತಾಪಿಸಲು ಅಥವಾ ಅದಕ್ಕೆ ಸಂಬಂಧಿಸಿದ ಸೂಚನೆಗಳನ್ನು ನೀಡಲು ಪ್ರಯತ್ನಿಸಬಹುದು. ಈ ಸಂದರ್ಭದಲ್ಲಿ ಮಗುವಿಗೆ ಸಾಂತ್ವನ ಹೇಳಿ, ಅದರ ವರ್ತನೆಯ ಹಿಂದಿರುವ ಮಾನಸಿಕ ತುಮುಲವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಯಾವಾಗ ನಿಮಗೆ ಇದನ್ನು ನಿರ್ವಹಿಸಲು ಕಷ್ಟವಾಗುತ್ತಿದೆ ಎನಿಸುವುದೋ ಆಗ ಮನೋವೈದ್ಯರನ್ನು ಕಾಣಿ.ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಸಮಗ್ರವಾದ ಅವಶ್ಯಕತೆಗಳನ್ನು ಪರಿಶೀಲಿಸಿ, ನಂತರ ಅದಕ್ಕೆ ತಕ್ಕ ಪರಿಹಾರ ಕಂಡುಹಿಡಿದು, ಅದನ್ನು ಕಾರ್ಯರೂಪಕ್ಕೆ ತರಬೇಕಾದದ್ದು ಅತ್ಯಗತ್ಯ.ಈ ಸಲಹೆ ಪಾಲಿಸಿ

ಮಗುವಿನ ಸಮಸ್ಯೆಗೆ ಪರಿಹಾರ ಹುಡುಕಲು ಕೆಳಗಿನ "HELPING” acronym (ಹೆಲ್ಪಿಂಗ್ ಪದದ ಪ್ರಥಮಾಕ್ಷರಗಳು) ಉಪಯೋಗಿಸಿ.H–Health; ಆರೋಗ್ಯ: ಮಗು ಊಟ ಮಾಡುತ್ತಿಲ್ಲ, ಕೃಶವಾಗಿದೆ- ಸರಿಯಾದ ಆಹಾರದ ಅಗತ್ಯ ಇದೆ.E–Emotion; ಭಾವನೆಗಳು: ಮಗು ಖಿನ್ನತೆಯಿಂದ ಇದೆ- ಅದು ಬೇರೆಯವರೊಂದಿಗೆ ಮಾತನಾಡಿ, ತನ್ನ ಸಮಸ್ಯೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹ ಬೇಕಾಗಿದೆ.L–Learning; ಕಲಿಕೆ: ಶಾಲೆಯ ಕಲಿಕೆಯಲ್ಲಿ ತೊಂದರೆಗಳು ಉಂಟಾಗುತ್ತಿವೆ- ಕಲಿಕೆಯಲ್ಲಿ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಾಯದ ಅಗತ್ಯ ಇದೆ.P–Personal; ಬೇರೆಯವರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ- ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಬೆರೆಯುವುದನ್ನು ಪ್ರೋತ್ಸಾಹಿಸಬೇಕು.I–Interest; ಆಸಕ್ತಿ: ಮಗು ಯಾವ ಚಟುವಟಿಕೆಗಳಲ್ಲೂ ಆಸಕ್ತಿ ತೋರಿಸುತ್ತಿಲ್ಲ- ಆಟಗಳು, ಕತೆಗಳು, ಚಿತ್ರ ಬಿಡಿಸುವುದು, ಇತ್ಯಾದಿಗಳಲ್ಲಿ ಮಗು ತೊಡಗುವಂತೆ ಮಾಡಿ.N–Need to know; ತಿಳಿದುಕೊಳ್ಳಿ: ಇಷ್ಟೆಲ್ಲ ಮಾಡಿಯೂ ಮಗು ಖಿನ್ನತೆಯಲ್ಲಿದೆ, ಮಂಕಾಗಿದೆ- ಮಕ್ಕಳ ಮನೋವೈದ್ಯರ ಆಪ್ತ ಸಲಹೆಯ ಅಗತ್ಯ ಇದೆ ಎಂದರ್ಥ.G–Guidance in behaviour; ಮಾರ್ಗದರ್ಶನ: ಮಗುವಿಗೆ ನಿಮ್ಮ ಮಾರ್ಗದರ್ಶನದ ಅಗತ್ಯ ಇದೆ. ನಿಮಗೆ ಅದನ್ನು ಕೊಡಲು ಸಾಧ್ಯವಾಗದೇ ಇದ್ದಲ್ಲಿ ಸೂಕ್ತ ತಜ್ಞರ ಬಳಿಗೆ ಕರೆದೊಯ್ಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry