ಶುಕ್ರವಾರ, ಜನವರಿ 24, 2020
28 °C

ನೋಂದಣಿ ನಿಲುವು ಸಡಿಲಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಗ್ರಾಮೀಣ ಭಾಗದಲ್ಲಿ ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಪಿಎಂಪಿ ವೈದ್ಯರಿಗೆ ಆಂಧ್ರ, ತಮಿಳುನಾಡು ಮಾದರಿಯಲ್ಲಿ ತರಬೇತಿ ನೀಡಬೇಕು ಮತ್ತು ಇವರ ನೋಂದಣಿ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುವುದನ್ನು ಕೈಬಿಡಬೇಕು ಎಂದು ಖಾಸಗಿ ವೈದ್ಯರು ಆಗ್ರಹಿಸಿದ್ದಾರೆ.ಗುರುವಾರ ನಗರದಲ್ಲಿ ಕರ್ನಾಟಕ ಪ್ರೈವೇಟ್‌ ಮೆಡಿಕಲ್ ಪ್ರ್ಯಾಕ್ಟಿಷನರ್ ಅಸೋಸಿಯೇಷನ್ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ರ್್ಯಾಲಿ ನಡೆಸಿದ ವೈದ್ಯರು, ಈಗ ಆರೋಗ್ಯ ಇಲಾಖೆ ಅಧಿಕಾರಿಗಳು ಮೂರು ದಿನದಲ್ಲಿ ನೋಂದಣಿ ಮಾಡಿಸಲು ಗಡುವು ನೀಡಿದ್ದಾರೆ.  ಇದು ಸರಿಯಲ್ಲ ಎಂದು ದೂರಿದರು.ಪಿಎಂಪಿ ವೈದ್ಯರ ಸ್ಥಿತಿ ಕುರಿತು ಸರ್ಕಾರದ ಆದೇಶ ಬರುವವರೆಗೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಬಾರದು ಮತ್ತು ಖಾಸಗಿ ವೈದ್ಯರುಗಳಿಗೆ ನೋಂದಣಿ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಕೈಬಿಡ­ಬೇಕು ಎಂದು ಆಗ್ರಹಿಸಿದ್ದಾರೆ.ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ  ಸಲ್ಲಿಸಿದರು.  

ಅಸೋಸಿಯೇಷನ್ ಅಧ್ಯಕ್ಷ ಪಂಡಿತ­ರಾವ ಚಿದ್ರಿ ಮಾತನಾಡಿ, ಪಿ.ಎಂ.ಪಿ. ವೈದ್ಯರು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಕಡಿಮೆ ಶುಲ್ಕದಲ್ಲಿ ರೋಗಿ­ಗಳಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಈಗ ಏಕಾಏಕಿ ವೃತ್ತಿ ಮುಂದುವರಿಕೆಗೆ ಅಡ್ಡಿಯುಂಟು ಮಾಡ­ಲಾಗುತ್ತಿದೆ ಎಂದು  ದೂರಿದರು.ಸರ್ಕಾರಿ ಬಸ್, ರಸ್ತೆ ಸೌಲಭ್ಯಗಳು ಇಲ್ಲದ ಕುಗ್ರಾಮಗಳಲ್ಲಿಯೂ ಪಿಎಂಪಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಆಂಧ್ರದ ಮಾದರಿ ಪಿಎಂಪಿ ವೈದ್ಯರಿಗೆ ಒಂದು ವರ್ಷದ ತರಬೇತಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಇಂತಹ ವೈದ್ಯರ ಸಂಖ್ಯೆ ಒಂದೂವರೆ ಲಕ್ಷಕ್ಕೂ ಅಧಿಕವಾಗಿದೆ. ಬೀದರ್‌ ಜಿಲ್ಲೆಯಲ್ಲಿಯೇ 4,500 ಕ್ಕೂ ಹೆಚ್ಚು ಜನರಿದ್ದಾರೆ. ಸೇವೆಗೆ ದಿಢೀರ್‌ ನಿರ್ಬಂಧ ಹೇರಿದಲ್ಲಿ ಖಾಸಗಿ ವೈದ್ಯರ ಕುಟುಂಬಗಳು ಬೀದಿ ಪಾಲಾಗಲಿವೆ ಎಂದರು.ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಅಮರನಾಥ ಕೊಹಿನೂರು, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಜಾಧವ, ತಾಲ್ಲೂಕು ಅಧ್ಯಕ್ಷರಾದ ನಾಗಶೆಟ್ಟಿ ಹಿಂದೊಡ್ಡಿ, ನಾಗನಾಥ ಸ್ವಾಮಿ, ವಿಶ್ವನಾಥ ತೂಗಾವೆ, ಶ್ರೀಮಂತ, ರಾಜಶೇಖರ ಪಟ್ನೆ ಇದ್ದರು. ಜಿಲ್ಲೆಯ ವಿವಿಧೆಡೆಯ ವೈದ್ಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)