ಮಂಗಳವಾರ, ಜೂನ್ 15, 2021
26 °C

ನೋಟಿಫೈ ಮಾಡದ ಜಾಗದಲ್ಲಿ ನಿವೇಶನ: ಬಿಡಿಎ ವಿರುದ್ಧ ದೂರು ದಾಖಲು

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯ ಸರ್ಕಾರ ನೋಟಿಫೈ ಮಾಡದಂತಹ 38 ಎಕರೆ ಜಾಗದಲ್ಲಿ 112 ನಿವೇಶನಗಳನ್ನು ಹಂಚಿಕೆ ಮಾಡಿದ ಆರೋಪದ ಮೇರೆಗೆ ಬೆಂಗಳೂರು ಮಹಾನಗರ ಕಾರ್ಯ ಪಡೆಯು (ಬಿಎಂಟಿಎಫ್) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದೆ.ರಾಜ್‌ಮೋಹನ್ ಎಂಬುವರು ನೀಡಿದ ದೂರಿನ ಮೇರೆಗೆ ಬಿಎಂಟಿಎಫ್ ಐಪಿಸಿ ಸೆಕ್ಷನ್ 420, 306 ಹಾಗೂ 192 ಹಾಗೂ ಬಿಡಿಎ ಕಾಯ್ದೆ 33ರ ಅನ್ವಯ ಬಿಡಿಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಈ ಅಧಿಕಾರಿಗಳ ಹೆಸರು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.ಪ್ರಕರಣದ ಹಿನ್ನೆಲೆ: 1996ರಲ್ಲಿ ಬಿಡಿಎ ರಾಜ್‌ಮೋಹನ್ ಅವರಿಗೆ ನಿವೇಶನವೊಂದನ್ನು ಹಂಚಿಕೆ ಮಾಡಿದ್ದು, 2010ರಲ್ಲಿ ಅವರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಬಿಬಿಎಂಪಿಯಿಂದ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಯನ್ನೂ ಪಡೆದುಕೊಂಡಿದ್ದರು. ಆದರೆ, ಅವರು ಮನೆ ನಿರ್ಮಾಣ ಕೆಲಸ ಪ್ರಾರಂಭಿಸುವ ವೇಳೆಗೆ ಕರ್ನಾಟಕ ಸಾರ್ವಜನಿಕ ಭೂ ನಿಗಮದ (ಕೆಪಿಎಲ್‌ಸಿ) ಅಧಿಕಾರಿಗಳು ಆಕ್ಷೇಪವೆತ್ತಿದ್ದಾರೆ.

 

ಅಲ್ಲದೆ, ದೂರುದಾರರಿಗೆ ನೋಟಿಸ್ ಜಾರಿಗೊಳಿಸಿರುವುದಲ್ಲದೆ, ನಿವೇಶನದ ಸುತ್ತಲೂ ತಂತಿಬೇಲಿ ಹಾಕಿ ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂಬ ಫಲಕವನ್ನು ನೇತು ಹಾಕಿದ್ದಾರೆ.`ಸುಮಾರು 14 ವರ್ಷಗಳ ಹಿಂದೆ ಬಿಡಿಎ ನನಗೆ ಹಂಚಿಕೆ ಮಾಡಿದ ನಿವೇಶನಕ್ಕೆ ಕಾಲಿಡುವುದು ಅತಿಕ್ರಮ ಪ್ರವೇಶವೇ?~ ಎಂಬುದು ರಾಜ್‌ಮೋಹನ್ ಪ್ರಶ್ನೆ. ಈ ಬಗ್ಗೆ ಪ್ರಶ್ನಿಸಲು ಹೋದರೆ, ಬಿಡಿಎ ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಟಿಎಫ್‌ಗೆ ದೂರು ನೀಡಬೇಕಾಯಿತು ಎನ್ನುತ್ತಾರೆ ಅವರು.ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸದೆ ಹೇಗೆ ಜಾಗವನ್ನು ವಶಕ್ಕೆ ತೆಗೆದುಕೊಂಡು, ಬಡಾವಣೆಯನ್ನಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ಕೇಳಿ ಬಿಎಂಟಿಎಫ್, ಬಿಡಿಎಗೆ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ಬಿಡಿಎ ವಿಶ್ವಾಸಾರ್ಹತೆ ಪ್ರಶ್ನಿಸುವಂತಾಗಿದೆ: ಬಿಡಿಎದಿಂದ ವಂಚಿತರಾಗಿದ್ದಾರೆ ಎನ್ನಲಾದ ಇತರ ಹಲವರೊಂದಿಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಾಜ್‌ಮೋಹನ್, `ಈ ಹಿಂದೆ ಎಚ್‌ಬಿಆರ್ ಬಡಾವಣೆಯಲ್ಲಿ ನನಗೆ ನಿವೇಶನ ಹಂಚಿಕೆಯಾಗಿತ್ತು.ಆದರೆ, ಜಾಗದ ಬಗ್ಗೆ ವಿವಾದವಿದ್ದ ಕಾರಣ ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ಪರ್ಯಾಯ ನಿವೇಶನ ಹಂಚಿಕೆ ಮಾಡಲಾಯಿತು. ಪ್ರಸ್ತುತ ಸರ್ಕಾರಿ ಸ್ವಾಮ್ಯದ ಸಂಸ್ಥೆಯೇ ಆಕ್ಷೇಪವೆತ್ತಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಇದೀಗ ನಾವು ಸಂದಿಗ್ದ ಸ್ಥಿತಿಯಲ್ಲಿದ್ದೇವೆ. ನಿಜವಾದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಡಿಎನೋ ಅಥವಾ ಕೆಪಿಎಲ್‌ಸಿಯೋ ಎಂಬ ಗೊಂದಲ ಮೂಡಿದೆ. ಬಿಡಿಎ ಬಡಾವಣೆಗಳನ್ನು ನಿರ್ಮಿಸಿ ಜನರಿಗೆ ಹಂಚಿಕೆ ಮಾಡಿದರೆ, ಆ ನಿವೇಶನ ಹಂಚಿಕೆ ಅಕ್ರಮ ಹಾಗೂ ಫಲಾನುಭವಿಗಳು ನಿವೇಶನಗಳನ್ನು ಖಾಲಿ ಮಾಡಬೇಕು ಎಂದು ಕೆಪಿಎಲ್‌ಸಿ ಉಪ ಆಯುಕ್ತರು ಹೇಳುತ್ತಾರೆ~ ಎಂದು ಅವರು ಹೇಳಿದರು.`ಬಿಡಿಎ ಮಾಡಿದ ಪ್ರಮಾದದಿಂದ ಜನ ಅದರ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗಿದೆ. ಯಾವುದೇ ಸರ್ಕಾರಿ ಸಂಸ್ಥೆ ಜನರಿಗೆ ನ್ಯಾಯ ಒದಗಿಸಿ ಕೊಡುತ್ತಿಲ್ಲ~ ಎಂದು ಬಿ.ಡಿ.ಎ.ದಿಂದ ವಂಚಿತರಾಗಿರುವ ಮತ್ತೊಬ್ಬ ಫಲಾನುಭವಿ ಶಂಕರ್ ಆರೋಪಿಸಿದರು. `ನಿವೇಶನ ಖಾಲಿ ಮಾಡುವಂತೆ ಕೆಪಿಎಲ್‌ಸಿ ನೋಟಿಸ್ ನೀಡಿದ ನಂತರ ನಮಗೆ ನಿದ್ದೆಯೇ ಬರುತ್ತಿಲ್ಲ. ಪ್ರತಿ ಭಾನುವಾರ ನಾವು ನಮ್ಮ ಕುಟುಂಬದೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಿದ್ದೆವು. ಆದರೆ, ಈಗ ಸಭೆ ನಡೆಸಿ ಕಾರ್ಯತಂತ್ರ ರೂಪಿಸುವುದಕ್ಕಾಗಿಯೇ ಪ್ರತಿ ಭಾನುವಾರವನ್ನು ಬಳಸಿಕೊಳ್ಳುತ್ತಿದ್ದೇವೆ~ ಎಂದು ಎಚ್‌ಆರ್‌ಬಿಆರ್‌ನ ನಿವೇಶನದ ಮಾಲೀಕರಾಗಿರುವ ಅನ್ಸಾರ್ ಅಹ್ಮದ್ ನುಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.