ಬುಧವಾರ, ಅಕ್ಟೋಬರ್ 23, 2019
24 °C

ನೋಟಿಸ್‌ಗೂ ಜಗ್ಗದ ಅಧಿಕಾರಿಗಳು!

Published:
Updated:

ಔರಾದ್: ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಲ್ಲದೆ ಭಣಗುಡುತಿತ್ತು.ಬೆಳಿಗ್ಗೆ 11 ಗಂಟೆಗೆ ನಿಗದಿಯಾದ ಸಭೆ ಒಂದೂವರೆ ಗಂಟೆ ತಡವಾಗಿ ಆರಂಭವಾದರೂ ಕೆಲ ಇಲಾಖೆ ಅಧಿಕಾರಿಗಳ ಗೈರು ಸಭೆಯಲ್ಲಿ ಎದ್ದು ಕಾಣುತಿತ್ತು. ಇದರಿಂದ ಕೆರಳಿದ ಅಧ್ಯಕ್ಷ ಶ್ರೀರಂಗ ಪರಿಹಾರ ಅಧಿಕಾರಿಗಳೇ ಇಲ್ಲ ಎಂದ ಮೇಲೆ ಸಭೆ ನಡೆಸಿ ಪ್ರಯೋಜನ ಏನು ಎಂದು ಗುಡುಗಿದರು. ಈ ಹಿಂದಿನ ಸಭೆಯಲ್ಲಿ ಗೈರು ಹಾಜರಾದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಗೈರು ಹಾಜರಾದವರಿಗೆ ನೋಟಿಸ್ ಕಳುಹಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಸದನದ ಗಮನಕ್ಕೆ ತಂದರು. ಇನ್ನು ಮುಂದೆ ಸಭೆಗೆ ಗೈರು ಹಾಜರಾದವರ ಹೆಸರನ್ನು ಅವರ ಮೇಲಾಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಮುಖ್ಯಾಧಿಕಾರಿ ಪ್ರೇಮಸಿಂಗ್ ರಾಠೋಡ ಭರವಸೆ ನೀಡಿದರು.ಭೂಸೇನಾ ನಿಗಮ, ಸಣ್ಣ ನೀರಾವರಿ ಇಲಾಖೆ, ಜಲಾನಯನ ಇಲಾಖೆ, ಅಬಕಾರಿ ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಗೈರು ಹಾಜರಿದ್ದರು. ಇನ್ನು ಕೆಲವರು ತಮ್ಮ ಅಧೀನ ನೌಕರರನ್ನು ಸಭೆಗೆ ಕಳುಹಿಸಿರುವುದರಿಂದ ಮಹತ್ವದ ವಿಷಯ ಚರ್ಚೆಯಾಗದೆ ಸಭೆ ತನ್ನ ಮಹತ್ವ ಕಳೆದುಕೊಂಡಿತು. ಅಧೀನ ಅಧಿಕಾರಿಗಳ ಬಳಿ ಸಮಗ್ರ ಮಾಹಿತಿ ಇಲ್ಲದ ಕಾರಣ ವಿಷಯಗಳು ಪೂರ್ಣ ಪ್ರಮಾಣದ ಚರ್ಚೆಯಾಗದೆ ಸಭೆ ಮುಗಿಸಲಾಯಿತು.ನಡೆಯದ ಸಭೆ: ಪ್ರತಿ ತಿಂಗಳು ಕೆಡಿಪಿ ಸಭೆ ನಡೆದು ತಾಲ್ಲೂಕಿನ ಸಮಸ್ಯೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಮಾಲೋಚನೆ ನಡೆಯಬೇಕು. ಆದರೆ ಕಳೆದ ಮೂರು ತಿಂಗಳಿನಿಂದ ಕೆಡಿಪಿ ಸಭೆ ನಡೆಯದೆ ಇಲ್ಲಿಯ ತಾಲ್ಲೂಕು ಪಂಚಾಯ್ತಿಗೆ ಕೇಳುವವರು ಹೇಳುವವರು ಇಲ್ಲವಾಗಿದೆ ಎಂದು ಹೆಸರು ಹೇಳದ ಸದಸ್ಯರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಳಕೆಗೆ ಕ್ರಮ: ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಎಲ್ಲ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಈಗಾಗಲೇ ಎಲ್ಲ ಪ್ರೌಢ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸರ್ವ ಶಿಕ್ಷಣ ಯೋಜನೆಯಡಿ ಪ್ರಾಥಮಿಕ ಶಾಲೆಗಳಿಗೂ ಹಂತ ಹಂತವಾಗಿ ಶೌಚಾಲಯ ಕಟ್ಟಿಕೊಡಲಾಗುತ್ತಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಮಾತ್ರ ಶೌಚಾಲಯ ಬಳಕೆಯಾಗುತ್ತಿಲ್ಲ. ಉಳಿದೆಡೆ ಬಳಕೆ ಮಾಡಲಾಗುತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ. ಚಂದ್ರಶೇಖರ ಸಭೆಗೆ ತಿಳಿಸಿದರು.ಆರೋಗ್ಯ, ಕೈಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಶಿಶು ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಉಪಾಧ್ಯಕ್ಷೆ ಜೈಶ್ರೀ ಘಾಟೆ, ಕಾರ್ಯನಿರ್ವಹಣಾಧಿಕಾರಿ ಪ್ರೇಮಸಿಂಗ ರಾಠೋಡ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ ಬಿರಾದಾರ ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)