ನೋಟಿಸ್ಗೂ ಜಗ್ಗದ 54 ಅಕ್ಕಿ ಗಿರಣಿಗಳು!
ದಾವಣಗೆರೆ: ಸರ್ಕಾರದ ನಿಯಮದಂತೆ ನಿಗದಿಪಡಿಸಿದ `ಲೆವಿ~ ಅಕ್ಕಿ ಸಲ್ಲಿಸದಿರುವ ಜಿಲ್ಲೆಯ 54 ಅಕ್ಕಿ ಗಿರಣಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನೋಟಿಸ್ಗಳಿಗೂ ಜಗ್ಗುತ್ತಿಲ್ಲ!
2011-12ನೇ ಸಾಲಿಗೆ ಸರ್ಕಾರ ಜಿಲ್ಲೆಗೆ 41,158 ಮೆಟ್ರಿಕ್ ಟನ್ `ಲೆವಿ~ ಗುರಿ ನಿಗದಿಪಡಿಸಿದೆ. ಈವರೆಗೆ, ಅಕ್ಕಿ ಗಿರಣಿ ಮಾಲೀಕರು 27,442 ಮೆಟ್ರಿಕ್ ಟನ್ನಷ್ಟು `ಲೆವಿ~ ಮಾತ್ರ ಸಲ್ಲಿಸಿದ್ದಾರೆ. ಇನ್ನೂ 13,716 ಮೆಟ್ರಿಕ್ ಟನ್ ಲೆವಿ ಬಾಕಿ ಇದೆ.
ಜೂನ್ 1ರವರೆಗೆ ಜಿಲ್ಲೆಯಲ್ಲಿ 54 ಅಕ್ಕಿ ಗಿರಣಿಗಳು ಯಾವುದೇ ಲೆವಿ ಸಲ್ಲಿಸಿಲ್ಲ. ಯಾವುದೇ ಲೆವಿ ಸಲ್ಲಿಸದ ಹಾಗೂ ಭಾಗಶಃ ಸಲ್ಲಿಸಿರುವ ಅಕ್ಕಿ ಗಿರಣಿಗಳಿಗೆ 2ನೇ ಬಾರಿಗೆ ನೋಟಿಸ್ ಜಾರಿಮಾಡಲಾಗಿದೆ. 2011 ಫೆ. 8ರಂದು ಮೊದಲ ನೋಟಿಸ್ ನೀಡಲಾಗಿತ್ತು. ಇದಕ್ಕೆ ಮಾಲೀಕರಿಂದ ಸ್ಪಂದನೆ ಸಿಕ್ಕಿಲ್ಲ.
ಮುಂದಿನ ಕ್ರಮವೇನು?: ಪೂರ್ಣ ಪ್ರಮಾಣದಲ್ಲಿ ಹಾಗೂ ಭಾಗಶಃ `ಲೆವಿ~ ಸಲ್ಲಿಸಿರುವ ಅಕ್ಕಿ ಗಿರಣಿಗಳ ಮಾಲೀಕರು ಜೂನ್ 30ರ ಒಳಗೆ ಶೇ 100ರಷ್ಟು `ಲೆವಿ~ ಅಕ್ಕಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ಗಿರಣಿ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ರೈಸ್ ಮಿಲ್ಲಿಂಗ್ ನಿಯಂತ್ರಣ ಹಾಗೂ ಅಕ್ಕಿ ಮತ್ತು ಬತ್ತ ಸಂಗ್ರಹಣೆ ಆದೇಶ 1999ರ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ಜಿಲ್ಲೆಯಲ್ಲಿ 140 ರೈಸ್ಮಿಲ್ಗಳಿವೆ. ಇವುಗಳ ಪೈಕಿ, ಪ್ರಸ್ತುತ 120 ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ನಿಯಮದ ಪ್ರಕಾರ, ರೈಸ್ಮಿಲ್ಗಳು ಬಳಸುವ ವಿದ್ಯುತ್ ಪ್ರಮಾಣ ಹಾಗೂ ಉತ್ಪಾದನೆಯ ಆಧಾರದ ಮೆಲೆ `ಲೆವಿ~ ನಿಗದಿ ಮಾಡಲಾಗುತ್ತದೆ. ನಿಯಮದಂತೆ, ಶೇ 33.33ರಷ್ಟು `ಲೆವಿ~ ನೀಡಬೇಕು. ಆದರೆ, ಪ್ರಸ್ತುತ ಶೇ 10ರಷ್ಟನ್ನು ಮಾತ್ರವೇ ಸಂಗ್ರಹಿಸಲಾಗುತ್ತಿದೆ. ಹೀಗಿರುವಾಗ, ನಿಗದಿಗಿಂತ ಕಡಿಮೆ `ಲೆವಿ~ ಸಲ್ಲಿಸುವುದಕ್ಕೂ ರೈಸ್ಮಿಲ್ ಮಾಲೀಕರು ಮುಂದಾಗಿಲ್ಲ ಎಂದು ಮಾಹಿತಿ ನೀಡಿದರು.
`ಲೆವಿ~ ಸಲ್ಲಿಸದೆ ಇರುವ 8 ರೈಸ್ಮಿಲ್ಗಳ ವಿರುದ್ಧ ಕಳೆದ ವರ್ಷ ಮೊಕದ್ದಮೆ ದಾಖಲಿಸಲಾಗಿತ್ತು. ನಂತರ ಅವರು ಲೆವಿ ಸಲ್ಲಿಸಿದರು. ಜೂನ್ 30ರ ಒಳಗೆ ನಿಗದಿಪಡಿಸಿದಷ್ಟು `ಲೆವಿ~ ಸಲ್ಲಿಸದಿದ್ದಲ್ಲಿ ಅಂತಹ ಅಕ್ಕಿ ಗಿರಣಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ನಿಗದಿಯಾದ `ಲೆವಿ~ಯಷ್ಟು ಅಕ್ಕಿ ಅಥವಾ ಹಣವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.
ಯಾವ್ಯಾವ ಗಿರಣಿಗಳು?
ದಾವಣಗೆರೆ ತಾಲ್ಲೂಕಿನ ರಾಮಗೊಂಡನಹಳ್ಳಿಯ ಮರುಳಸಿದ್ದೇಶ್ವರ ಇಂಡಸ್ಟ್ರೀಸ್, ಆನೆಕೊಂಡ (ಅಂಕಳಕೋಟೆ) ಮಹಾದೇವಮ್ಮ, ವೀರಭದ್ರೇಶ್ವರ ರೈಸ್ಮಿಲ್, ಕೆ. ಅಬ್ದುಲ್ ಜಬ್ಬಾರ್ ಸಾಬ್ ಇಂಡಸ್ಟ್ರಿಯಲ್ ಏರಿಯಾ ರೈಸ್ಮಿಲ್, ಎಂ.ಎನ್.ವಿ., ಹದಡಿ ರಸ್ತೆಯ ಮಾಗನೂರು ರೈಸ್ ಇಂಡಸ್ಟ್ರೀಸ್, ಪಿ.ಬಿ. ರಸ್ತೆಯ ಆರಾಧ್ಯ ರೈಸ್ ಇಂಡಸ್ಟ್ರೀಸ್, ಬಿಸಲೇರಿಯ ಬಸವೇಶ್ವರ ರೈಸ್ಮಿಲ್, ಬೆಳವನೂರು ರಂಗನಾಥ ಇಂಡಸ್ಟ್ರೀಸ್, ಕಕ್ಕರಗೊಳ್ಳ ಕೊಂಡಮರುಳಸಿದ್ದೇಶ್ವರ ರೈಸ್ ಮಿಲ್, ಮಳಲಕೆರೆಯ ಮರುಳಸಿದ್ದೇಶ್ವರ ಇಂಡಸ್ಟ್ರೀಸ್, ಆನೆಕೊಂಡದ ಮಾಲತೇಶ ರೈಸ್ಮಿಲ್, ಅತ್ತಿಗೆರೆಯ ತರಳಬಾಳು ರೈಸ್ ಇಂಡಸ್ಟ್ರೀಸ್.
ಹರಿಹರ ತಾಲ್ಲೂಕಿನ ಮಹಜೇನಹಳ್ಳಿಯ ಉಮ್ಮರ್ ಇಂಡಸ್ಟ್ರೀಸ್, ಮಿಟ್ಲಕಟ್ಟೆಯ ಪೂಜಾ ಇಂಡಸ್ಟ್ರೀಸ್, ಕುಂಬಳೂರಿನ ಎಸ್.ಎಚ್ ರೈಸ್ಮಿಲ್, ಟಿಎಪಿಸಿಎಂಎಸ್ ಅಕ್ಕಿಗಿರಣಿ, ಮಹೇನಹಳ್ಳಿ ಸಿದ್ದೇಶ್ವರ ರೈಸ್ಮಿಲ್, ಮಹಜೇನಗಳ್ಳಿ ಹರಿಹರೇಶ್ವರ ಡ್ರೈಯರ್ಸ್, ಹಾಲಿವಾಣದ ರೇವಣಸಿದ್ದೇಶ್ವರ ಅಕ್ಕಿಗಿರಣಿ, ಕೊಮಾರನಹಳ್ಳಿಯ ಮಂಜುನಾಥ ರೈಸ್ಮಿಲ್, ಹೊಳೆಸಿರಿಗೆರೆಯ ರೇವಣಪ್ಪ ಮಿನಿ ರೈಸ್ಮಿಲ್.
ಹೊನ್ನಾಳಿ ತಾಲ್ಲೂಕು ಕುಂದೂರಿನ ವೆಂಕಟೇಶ್ವರ ಅಕ್ಕಿ ಗಿರಣಿ, ಜಿ.ಕೆ. ರೈಸ್ಮಿಲ್, ನಂದಿ ಅಕ್ಕಿ ಗಿರಣಿ, ಬನ್ನಿಕೋಡದ ಟಿ. ಪರಮೇಶ್ವರಪ್ಪ ಅಕ್ಕಿ ಗಿರಣಿ, ಸಾಸ್ವೆಹಳ್ಳಿಯ ಮಜಿದ್ಖಾನ್ ಅಕ್ಕಿಗಿರಣಿ, ಸಿದ್ದೇಶ್ವರ ಅಕ್ಕಿಗಿರಣಿ, ಮಾರುತಿ ರೈಸ್ಮಿಲ್, ಲಿಂಗಾಪುರದ ಆಂಜನೇಯ ಹಾಗೂ ಸತೀಶ್ ಅಕ್ಕಿಗಿರಣಿ, ದೇವನಾಯ್ಕಹಳ್ಳಿಯ ಮಂಜುನಾಥ ಗಿರಣಿ, ಹೊನ್ನಾಳಿಯ ಟಿಎಪಿಸಿಎಂಎಸ್ ಗಿರಣಿ, ಸವಳಂಗದ ಜಯದೇವ ಮರುಳರಾಜೇಂದ್ರ ಅಕ್ಕಿಗಿರಣಿ, ನ್ಯಾಮತಿಯ ಶ್ರೀಶೈಲ ಮಲ್ಲಿಕಾರ್ಜುನ, ಚೀಲೂರಿನ ಗಿರಿಜೇಶ್ವರ ಅಕ್ಕಿಗಿರಣಿ.
ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು, ತಣಿಗೆರೆ, ಕೆರೆಕಟ್ಟೆ, ಕೆಂಪನಹಳ್ಳಿ, ಕಾರಿಗನೂರು, ಕತ್ತಲಗೆರೆ, ತ್ಯಾವಣಗಿ, ಬಸವಾಪಟ್ಟಣ, ಚಿರಡೋಣಿಯ 3, ಕಣಿವೆಬಿಳಚಿ, ಮರಬನಹಳ್ಳಿ, ಕೋಟಿಹಾಳ್, ನಲ್ಲೂರು, ತಣಿಗೆರೆ, ಸಾಗರಪೇಟೆ, ಕಾಶೀಪುರ ಕ್ಯಾಂಪ್, ನಲ್ಲೂರು ಶಂಕರನಾರಾಯಣಶೆಟ್ಟಿ ಅಕ್ಕಿಗಿರಣಿಗಳು `ಲೆವಿ~ ಸಲ್ಲಿಸಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.