ಶನಿವಾರ, ನವೆಂಬರ್ 16, 2019
21 °C

ನೋಟು ಕೊಟ್ಟು, ಓಟು ಕೊಟ್ಟು ಗೆಲ್ಲಿಸ್ತಿದ್ರು..!

Published:
Updated:

ತೀರ್ಥಹಳ್ಳಿ: `ಒಂದು ಓಟು; ಒಂದು ನೋಟು ಕೊಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾಲ ಮುಗಿದು ಹೋಯ್ತು. ಅಂಥ ಚುನಾವಣೆಯನ್ನು ಶಾಂತವೇರಿ ಗೋಪಾಲಗೌಡರ ಕಾಲದಲ್ಲಿ ಮಾಡಿದ್ದೆವು. ಅದು ಕೋಣಂದೂರು ಲಿಂಗಪ್ಪ ಚುನಾವಣೆಗೆ ನಿಂತಾಗಲೂ ಮುಂದುವರಿಯಿತು. ಆದರೆ, ಈಗ ಹಾಗಲ್ಲ. ಮನೆ ಬಾಗಿಲಿಗೆ ದುಡ್ಡು-ಕಾಸು, ಸೀರೆ, ಬಟ್ಟೆ, ಪಾತ್ರೆ ತಂದು ಹಾಕಿ ಮತ ಕೇಳುವ ಕಾಲ ಬಂದಿದೆ' ಎಂದು ಹಿರಿಯ ಸಮಾಜವಾದಿಗಳು ಗತ ನೆನಪುಗಳನ್ನು ಮೆಲುಕು ಹಾಕುತ್ತಾರೆ.ಪ್ರಜ್ಞಾವಂತರ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವ ಇದೆ.

`ಊಳುವವನೇ ಹೊಲದೊಡೆಯ' ಚಳವಳಿ ಮೂಲಕ ಕಾವು ಪಡೆದ ಸಮಾಜವಾದಿ ಚಳವಳಿ ಈ ನೆಲದಲ್ಲಿ ಬೇರು ಬಿಟ್ಟಿತ್ತು. ಸಮ ಸಮಾಜದ ನಿರ್ಮಾಣಕ್ಕೆ ಹಿರಿಯ ಸಮಾಜವಾದಿಗಳು ಹೋರಾಟ ನಡೆಸಿದ್ದರು. ಉಳ್ಳವರು, ಇಲ್ಲದವರ ನಡುವೆ ಸಂಘರ್ಷ ಏರ್ಪಟ್ಟ ಕಾಲದಲ್ಲೂ ಬಡವ-ಶ್ರೀಮಂತರ ನಡುವೆ ಸೌಹಾರ್ದ ಮನೆಮಾಡಿತ್ತು. ಭೂಮಾಲೀಕರೂ ಕೂಡ ಕಾನೂನು ಮುರಿಯಲು ಗೇಣಿದಾರರ ಪರ ಹೋರಾಟಕ್ಕೆ ಕೈ ಜೋಡಿಸಿದ್ದರು. ಸ್ವಇಚ್ಛೆಯಿಂದ ಗೇಣಿದಾರರಿಗೆ ಭೂಮಿಯ ಒಡೆತನ ನೀಡಿ ಸಹಕರಿಸಿದ್ದರು.ಹೊಸ ಇತಿಹಾಸಕ್ಕೆ ಭಾಷ್ಯ ಬರೆದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಮಾಜವಾದಿ ಚಿಂತಕ, ಹೋರಾಟಗಾರ ಶಾಂತವೇರಿ ಗೋಪಾಲಗೌಡ ಪ್ರತಿನಿಧಿಯಾಗಬೇಕು ಎಂಬ ಬಯಕೆ ವ್ಯಕ್ತಪಡಿಸಿದ ಜನರು 'ಒಂದು ರೂಪಾಯಿ ನೋಟು' ಕೊಟ್ಟು, ಮತ ನೀಡಿ ಗೆಲ್ಲಿಸಿದ್ದರು. ಜನತೆ ನೀಡಿದ ಅಮೂಲ್ಯ ಮತಗಳ ಹಿಂದಿರುವ ಶಕ್ತಿ  ಅರಿತು ಅವರ ಆಶೋತ್ತರಗಳಿಗೆ ಧಕ್ಕೆಯಾಗದಂತೆ ಶಾಸಕ ಸ್ಥಾನ ನಿಭಾಯಿಸುವ ಮೂಲಕ ತೀರ್ಥಹಳ್ಳಿ ಹೋರಾಟದ ನೆಲೆ ಎಂಬುದನ್ನು ಸಾಬೀತುಪಡಿಸಿದ್ದರು.ಈಗ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅಂಥ ವಾತಾವರಣ ಇಲ್ಲವಾಗಿದೆ. ಗೋಪಾಲಗೌಡ, ಕಡಿದಾಳ್ ಮಂಜಪ್ಪ ಹೆಸರನ್ನು ಹೇಳುವ ನಾಯಕರು ಮತ ಪಡೆದು ಅವರ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಆರೋಪಗಳಿವೆ.1952ರಿಂದ ಇಲ್ಲಿವರೆಗೆ ಬದರಿ ನಾರಾಯಣ್, ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ಕಡಿದಾಳ್ ದಿವಾಕರ್, ಪಟಮಕ್ಕಿ ರತ್ನಾಕರ್, ಡಿ.ಬಿ. ಚಂದ್ರೇಗೌಡ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಇವರಲ್ಲಿ ಅನೇಕ ಶಾಸಕರು ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ಬೆಳೆದವರು. ಈಚಿನ ವರ್ಷಗಳಲ್ಲಿ ಸಮಾಜವಾದಿ ಚಿಂತನೆಯ ಜಾಗದಲ್ಲಿ ಬೇರೆ ಬೇರೆ ಸಿದ್ಧಾಂತಗಳು ಬಂದು ಕೂತಿವೆ. `ಈ ಬಾರಿಯ ಚುನಾವಣೆಯಲ್ಲಿ  ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಒಂದಲ್ಲಾ ಒಂದು ಬಗೆಯಲ್ಲಿ ಹಣ ವ್ಯಯಿಸುತ್ತಿದ್ದಾರೆ. ಗೋಪಾಲಗೌಡ ಅವರು ಚುನಾವಣೆಗೆ ಕೇವಲ ರೂ.5000 ಖರ್ಚು ಮಾಡಿದ್ದರು ಎಂಬುದನ್ನು ಈಗ ನಂಬಲಾಗುತ್ತಿಲ್ಲ. ಈಗ ಕಾಲ ಬದಲಾಗಿದೆ. ಇವತ್ತಿನ ದೃಷ್ಟಿಕೋನದಲ್ಲಿ ಜನ ಹಣ ಕೇಳುತ್ತಾರೆ. ನಾನು ಚುನಾವಣೆಗೆ ನಿಂತಾಗ ರೂ.8,300 ಖರ್ಚಾಗಿತ್ತು. ಮಾಡಿದ ಕಲೆಕ್ಷನ್‌ನಲ್ಲಿ ರೂ. 3 ಸಾವಿರ ಉಳಿದಿತ್ತು.ಸೋಷಲಿಸ್ಟ್ ಪಾರ್ಟಿಗೆ ಹಣ ವಾಪಸ್ ಮಾಡಲು ಹೋಗಿದ್ದೆವು. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಪಾಲಗೌಡ ಅವರ ಮಂಚದ ಮೇಲಿನ ದಿಂಬಿನ ಕೆಳಗೆ ಆ ಹಣವನ್ನು ಇಟ್ಟು ನಮಸ್ಕರಿಸಿ ಬಂದಿದ್ದೆ. ಬಹಳ ಕಾಲ ಈ ದರ್ಬಾರು ನಿಲ್ಲುವುದಿಲ್ಲ. ನಾನು ಈಗ ಬೆಕ್ಕಸ ಬೆರಗಾಗಿ ಹೋಗಿದ್ದೇನೆ. ನಮಗೆ ದುಡ್ಡು ಜಾತಿ ಗೊತ್ತಿರಲಿಲ್ಲ. ಈಗ ಜನ ನೋಟು ತಗೋಬೇಕು. ಓಟು ಕೊಡಬಾರದು' ಎಂದು ಸಮಾಜವಾದಿ ಹೋರಾಟಗಾರ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)