ನೋಡೆಲ್ ಅಧಿಕಾರಿ ಏನು ಮಾಡ್ತಾರೆ?

ಭಾನುವಾರ, ಜೂಲೈ 21, 2019
23 °C

ನೋಡೆಲ್ ಅಧಿಕಾರಿ ಏನು ಮಾಡ್ತಾರೆ?

Published:
Updated:

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(ಎಂಜಿಎನ್‌ಆರ್‌ಇಜಿಎ) ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಸಮರ್ಪಕವಾಗಿ ಹಣ ಖರ್ಚೂ ಆಗಿಲ್ಲ, ಕೆಲಸ ಮಾಡಿದವರಿಗೆ ಹಣವನ್ನೂ ನೀಡಿಲ್ಲ ಎಂಬ ಗಂಭೀರ ವಿಚಾರ ಸೋಮವಾರ ಇಲ್ಲಿ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಯಿತು.ಬಂಟ್ವಾಳ ತಾಲ್ಲೂಕಿನಲ್ಲಿ ಮಾರ್ಚ್ ಅಂತ್ಯದವರೆಗೆ 744 ಲಕ್ಷ ರೂಪಾಯಿ ಅನುದಾನ ಲಭ್ಯವಿದ್ದರೂ, ರೂ. 583 ಲಕ್ಷವಷ್ಟೇ ವಿನಿಯೋಗವಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಲಭ್ಯವಿದ್ದ 679 ಲಕ್ಷ ರೂಪಾಯಿಯಲ್ಲಿ 480 ಲಕ್ಷ ಮಾತ್ರ ಖರ್ಚಾಗಿದೆ ಎಂಬ ಮಾಹಿತಿ ನೀಡುತ್ತಿದ್ದಾಗಲೇ, `ಫಲಾನುಭವಿಗಳಿಗೆ ಅವರು ಮಾಡಿದ ಕೆಲಸಕ್ಕೆ ಹಣವನ್ನೇ ನೀಡುತ್ತಿಲ್ಲ~ ಎಂಬ ಆಕ್ಷೇಪ ಕೇಳಿಬಂತು.

 

ಫಲಾನುಭವಿಗಳಿಗೆ ಬೆಳ್ತಂಗಡಿ ತಾಲ್ಲೂಕಿನಲ್ಲೇ ರೂ. 1.33 ಕೋಟಿ ಬಾಕಿ ಇದೆ ಎಂದು ಇಒ ತಿಳಿಸಿದರು.ಇಷ್ಟು ದೊಡ್ಡ ಮೊತ್ತ ಬಾಕಿಯಾಗಿದ್ದೇಕೆ? ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು. ನೋಡೆಲ್ ಅಧಿಕಾರಿ ವರದಿ ನೀಡದೆ ಇರುವುದರಿಂದ ಈ ವಿಳಂಬವಾಗಿದೆ ಎಂಬ ಉತ್ತರ ಬಂತು.ಇದರಿಂದ ಸಿಟ್ಟಿಗೆದ್ದ ಸಂಸದ, `ನೋಡೆಲ್ ಅಧಿಕಾರಿಗಳಿಗೆ ಎಷ್ಟು ಪಂಚಾಯಿತಿ ನೋಡಿಕೊಳ್ಳಲಿಕ್ಕಿದೆ? ಒಂದೆರಡು ಗ್ರಾ.ಪಂ. ಹೊಣೆಗಾರಿಕೆ ಮಾತ್ರ ಇರುವ ಅವರಿಗೆ ಬೇಗ ವರದಿ ಸಿದ್ಧಪಡಿಸುವುದು ಸಾಧ್ಯವಿಲ್ಲವೇ, ನಿಮಗೇನೋ ಬೇರೆ ಆದಾಯ ಇರಬಹುದು, ಉದ್ಯೋಗ ಖಾತರಿ ಫಲಾನುಭವಿಗಳು ನನ್ನಂತಹವರು.ಅವರಿಗೆ ಬೇರೆ ಯಾವ ಆದಾಯ ಇದೆ?~ ಎಂದು ಖಾರವಾಗಿ ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ವೇತನ ವಿಳಂಬ ಮಾಡಕೂಡದು ಎಂದು ತಾಕೀತು ಮಾಡಿದರು.ಇನ್ನು ಹತ್ತೇ ದಿನದೊಳಗೆ ಎಲ್ಲರಿಂದಲೂ ವರದಿ ತರಿಸಿಕೊಂಡು ಬಾಕಿ ವೇತನ ಬಟವಾಡೆ ಮಾಡಿಸುವುದಾಗಿ ಪ್ರಭಾರಿ ಸಿಇಒ ಶಿವರಾಮೇ ಗೌಡ ಭರವಸೆ ನೀಡಿದರು.ಉದ್ಯೋಗ ಖಾತರಿ ಕೆಲಸಗಳನ್ನು ಆಟದ ಮೈದಾನ ವಿಸ್ತರಣೆ, ಶಾಲಾ ಕಟ್ಟಡ, ಸಮುದಾಯ ಭವನದಂತಹ ಜನಪರ ಕಾರ್ಯಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಬೇಕು. ಆಗ ಊರವರ ಸಹಕಾರವೂ ಕಾಮಗಾರಿಗೆ ಸಿಗುತ್ತದೆ. ಊರವರ ಶ್ರಮದಾನದಿಂದ ಅದೆಷ್ಟೋ ಖರ್ಚು ಉಳಿಯುತ್ತದೆ. ಅಧಿಕಾರಿಗಳು ಈ ರೀತಿಯಿಂದ ಯೋಜನೆಗಳನ್ನು ಯಶಸ್ವಿಗೊಳಿಸಬೇಕು ಎಂದು ಸಂಸದರು ಸಲಹೆ ನೀಡಿದರು.ಪೆರ್ನೆ ಗ್ರಾ.ಪಂ. ಕಾರ್ಯದರ್ಶಿಯಿಂದ ಅಕ್ರಮ ನಡೆದ ಆರೋಪ ಇದ್ದು, ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ವಿಚಾರಣೆ ನಡೆಸಿದ ಬಳಿಕ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಬಗೆಗೆ ನಡೆದ ಚರ್ಚೆಯಲ್ಲಿ ಜಿ.ಪಂ. ನಾಮ ನಿರ್ದೇಶಿತ ಸದಸ್ಯ ರಾಜೀವ ರೈ, ಕೃಷ್ಣ ನಾಯ್ಕ ಪಾಲ್ಗೊಂಡಿದ್ದರು.ಗುಡಿಸಲು ಯೋಜನೆ: ಜಿಲ್ಲೆಯಲ್ಲಿ 5048 ಗುಡಿಸಲು ವಾಸಿಗಳಿದ್ದು, 1755 ಕುಟುಂಬಗಳು ನಿವೇಶನ ಹೊಂದಿವೆ. ಉಳಿದವರಿಗೆ ನಿವೇಶನ ಇಲ್ಲ. ಜಿಲ್ಲಾಡಳಿತ ಶೀಘ್ರ ನಿವೇಶನ ಗುರುತಿಸಿಕೊಟ್ಟರೆ ಯೋಜನೆ ಹಮ್ಮಿಕೊಳ್ಳುವುದು ಸುಲಭ ಎಂದು ಅಧಿಕಾರಿಗಳು ಹೇಳಿದರು.ಈ ಉದ್ದೇಶಕ್ಕಾಗಿ ಈಗಾಗಲೇ 185 ಎಕರೆ ಗುರುತಿಸಲಾಗಿದ್ದು, ಒಟ್ಟು 322.86 ಎಕರೆ ನಿವೇಶನ ಗುರುತಿಸುವ ಕಾರ್ಯ ಶೀಘ್ರ ಕೊನೆಗೊಳಿಸುವುದಾಗಿ ಉಪ ವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಭರವಸೆ ನೀಡಿದರು.ಇಂದಿರಾ ಅವಾಸ್ ಯೋಜನೆಯ ಫಲಾನುಭವಿಗಳು ಲಾಭಕ್ಕಾಗಿ ಮನೆಗಳನ್ನು ಮಾರಾಟ ಮಾಡುವ ವಿದ್ಯಮಾನವನ್ನು ಸಭೆಯ ಗಮನಕ್ಕೆ ತರಲಾಯಿತು.  ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಸದರು ಸೂಚಿಸಿದರು.

ಸಮವಸ್ತ್ರ ಇಲ್ಲ: ಶಾಲೆಗಳು ಆರಂಭವಾಗಿದ್ದರೂ ಜಿಲ್ಲೆಗೆ ಇನ್ನೂ ಪಠ್ಯ ಪುಸ್ತಕಗಳು, ಸಮವಸ್ತ್ರ ಬಂದಿಲ್ಲದೆ ಇರುವುದನ್ನು ತಿಳಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry