ಶನಿವಾರ, ಏಪ್ರಿಲ್ 17, 2021
32 °C

ನೋನಿ ಹಬ್ಬ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ತಾಲ್ಲೂಕಿನಾದ್ಯಂತ ದೀಪಾವಳಿ ಅಮಾವಾಸ್ಯೆ ಭೂದಿಯ ದಿನದಂದು ಪ್ರಾಣಿ ಬಲಿಯ ಭೂತಾರಾಧನೆಯ `ನೋನಿ~ ಹಬ್ಬವವನು ಸೋಮವಾರ ಹಾಗೂ ಮಂಗಳವಾರ ಭಕ್ತಿ ಭಾವದಿಂದ ಆಚರಿಸಿದರು.



ತಾವು ನಂಬಿದ ಕ್ಷುದ್ರ ದೇವತೆಗಳಾದ ಭೂತರಾಯ, ಚೌಡಿ, ಯಕ್ಷಿ, ರಣ, ನಾಗ, ಕಲ್ಲುಕುಟಿಕಾ ದೇವತೆಗಳ ಆರಾಧನೆಯಲ್ಲಿ ಹಣ್ಣು-ಕಾಯಿಯ ಜತೆಗೆ ಕುರಿ, ಕೋಳಿ ಪ್ರಾಣಿ ಬಲಿ ಮಾಡಿ ದೈವಗಳನ್ನು ಸಂತೃಪ್ತಿಗೊಳಿಸುವ ಸಂಪ್ರದಾಯವು ತಾಲ್ಲೂಕಿನಾದ್ಯಂತ ದೀಪಾವಳಿ ಹಾಗೂ ಮಳೆಗಾಲದ ಆರಿದ್ರಾ ಮಳೆಯಲ್ಲಿ ವರ್ಷಕ್ಕೆ 2 ಬಾರಿ ಹಬ್ಬ ಆಚರಿಸಲಾಗುತ್ತದೆ.



ಕ್ಷುದ್ರ ದೇವತೆಗಳು ಭೂತಪೂಜಾರಿಗಳ(ಗಣಮಗ) ಮೈಮೇಲೆ ಆಹ್ವಾನೆಯಾಗಿ ಗ್ರಾಮಸ್ಥರ ಕಷ್ಟ, ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶಿಷ್ಟ ಸಂಪ್ರದಾಯ ಇದೆ. ಇದರ ಜತೆಗೆ ಶಾಖಾಹಾರಿಗಳು ಸಹ ಹಣ್ಣು-ಕಾಯಿಯನ್ನು ಭೂತಗಳಿಗೆ ಸಲ್ಲಿಸುವ ರೂಢಿಯಲ್ಲಿದೆ. 



 ಸಜ್ಜುಗೊಂಡ ಪಟ್ಟಣ

ರಿಪ್ಪನ್‌ಪೇಟೆ:
ಬೆಳಕಿನ ಹಬ್ಬದಲ್ಲಿ ಆಗಮಿಸುವ ಲಕ್ಷ್ಮೀ ದೇವಿಯನ್ನು ಪಟ್ಟಣದಲ್ಲಿ ಮಂಗಳವಾರ ವರ್ತಕರು ಅತ್ಯಂತ ಸಡಗರ ಸಂಭ್ರಮದಿಂದ ಆರಾಧಿಸುವ ಮೂಲಕ ತಮ್ಮ ಜೀವನಕ್ಕೆ ಆಧಾರವಾದ ದೇವಿಗೆ ನಮನ ಸಲ್ಲಿಸಿದರು.



ಆಶ್ವಯುಜ ಬಹುಳ ಅಮಾವಾಸ್ಯೆಯ ದಿನ ಬರುವ ಧನ ಧಾನ್ಯ ಲಕ್ಷ್ಮಿಗೆ ವರ್ತಕರೂ ಅಲ್ಲದೇ ಮನೆ, ಮನೆಯಲ್ಲಿಯೂ ತಳಿರು ತೋರಣಗಳಿಂದ ಮಧುವಣಗಿತ್ತಿಯಂತೆ ಶೃಂಗರಿಸಿ, ರಂಗವಲ್ಲಿ ಹಾಕಿ ಲಕ್ಷ್ಮೀಯನ್ನು ಸ್ವಾಗತಿಸಲು ಕಾದಿರುವ ಮಾತೆಯರ ಸಂಭ್ರಮ ಹೇಳತೀರದು. ನಂತರದಲ್ಲಿ ಕುಟುಂಬದ ಸದಸ್ಯರೊಳಗೂಡಿ, ಬಿರುಸು, ಬಾಣ, ಪಟಾಕಿ ಸುಡುಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.



ವಿಶೇಷವಾಗಿ ಗೋಧೂಳಿ ಲಗ್ನ ಪ್ರಾರಂಭವಾದ ಸಂಜೆ 6ರಿಂದ ರಾತ್ರಿ 10ರವರೆಗೂ ಪೂಜೆ ಪುನಸ್ಕಾರಗಳು ನಡೆದವು. ಪಟ್ಟಣದ ಹೊರತಾಗಿ ಸುತ್ತಮುತ್ತಲಿನ ಹಳ್ಳಿಗಳಿಂದಲೂ ಬಂದ ಜನ ಈ ಪೂಜೆಗಳಲ್ಲಿ ಪಾಲ್ಗೊಂಡು ಅಂಗಡಿ ಮುಂಗಟ್ಟುಗಳಲ್ಲಿ ಪ್ರಸಾದ ಸ್ವೀಕರಿಸಿ ಪಾವನವಾದರು.



ಹೂವು- ಹಣ್ಣುಗಳ ಬೆಲೆ ದುಬಾರಿಯಾದರೂ ಕೊಳ್ಳುಗರ ಸಂಖ್ಯೆಗೇನು ಕೊರತೆ ಇರಲಿಲ್ಲ. ಮಳೆ ಇಲ್ಲದ ಕಾರಣ ಸಡಗರ-ಸಂಭ್ರಮ ಎಲ್ಲರಲ್ಲೂ ಮನೆ ಮಾಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.