ನೋವಿಗದ್ದಿದ ಕುಂಚ ಕೆಳಗಿಟ್ಟ ಕುಪ್ಪಾಚಾರಿ

7

ನೋವಿಗದ್ದಿದ ಕುಂಚ ಕೆಳಗಿಟ್ಟ ಕುಪ್ಪಾಚಾರಿ

Published:
Updated:

ಮೈಸೂರು: ಅದು ಮೈಸೂರು ಅರಸರ ಆಳ್ವಿಕೆ ಮುಕ್ತಾಯವಾಗಿದ್ದ ಕಾಲ. ಕೆಲ ರೇಖಾಚಿತ್ರಗಳು ಜಯಚಾಮರಾಜೇಂದ್ರ ಒಡೆಯರ ಮನಸೂರೆಗೊಂಡವು. ಪೆನ್ಸಿಲ್‌ನಿಂದ ಅರಳಿದ ಚಿತ್ರದ ಕೌಶಲ, ಸಾವಿರಾರು ರೇಖೆಗಳಿಂದ ರೂಪುಗೊಂಡ ಕಲಾಕೃತಿಯನ್ನು ನೋಡಿ ಅರಸರು ಭಾವುಕರಾದರು. ಕೈ ಬೆರಳಿನಲ್ಲಿದ್ದ 9 ಹರಳುಗಳ ಚಿನ್ನದ ಉಂಗುರವನ್ನು ತೆಗೆದು ಎದುರಿಗೆ ಇದ್ದ ಯುವ ಕಲಾವಿದ ಸಿ.ಕುಪ್ಪಾಚಾರಿ ಅವರಿಗೆ ಉಡುಗೊರೆ ನೀಡಿದರು!ಮೈಸೂರು ಶೈಲಿಯ ರೇಖಾಚಿತ್ರ, ಜಲವರ್ಣ, ತೈಲವರ್ಣಗಳಿಂದ ಖ್ಯಾತಿ ಗಳಿಸಿದ್ದ ಸಿ.ಕುಪ್ಪಾಚಾರಿ ಭಾನುವಾರ ಮುಂಜಾನೆ ಅಗಲಿದ್ದು, ಚಿತ್ರಕಲಾ ಕ್ಷೇತ್ರದ ಕೊಂಡಿಯೊಂದು ಕಳಚಿದೆ. ದೇವರು, ವ್ಯಕ್ತಿಚಿತ್ರ, ನಿಸರ್ಗ, ಜಂಬೂಸವಾರಿ, ಗ್ರಾಮೀಣ ಪರಿಸರ ಸೇರಿದಂತೆ ಅವರ ಹತ್ತು ಹಲವು ಕಲಾಕೃತಿಗಳು ವಿದೇಶಿ ಕಲಾ ಗ್ಯಾಲರಿಗಳಲ್ಲಿ ಸ್ಥಾನ ಪಡೆದಿವೆ.ಮೂಲತಃ ಮೈಸೂರಿನವರೇ ಆದ ಕುಪ್ಪಾಚಾರಿ, ಚಂದ್ರಶೇಖರಯ್ಯ, ಜಯಲಕ್ಷ್ಮಿ ದಂಪತಿಗೆ 1933ರ ಮಾರ್ಚ್ 4ರಂದು ಜನಿಸಿದರು. ಅರಮನೆಯ ಕಲಾವಿದರಾಗಿದ್ದ ಸಿದ್ಧಲಿಂಗ ಸ್ವಾಮಿ, ಕೇಶವಯ್ಯ, ನಾಗರಾಜು, ಸುಬ್ರಹ್ಮಣ್ಯರಾಜು ಅವರಲ್ಲಿ ಚಿತ್ರಕಲೆ ಅಭ್ಯಾಸ ಮಾಡಿದ ಬಳಿಕ ಕಲೆಯನ್ನೇ ಉಸಿರಾಗಿಸಿ ಕೊಂಡರು. ಒಡೆಯರ ಕಣ್ಣಿಗೆ ಬಿದ್ದ ಬಳಿಕ ಅರಮನೆ ಕಲಾವಿದರಾಗಿ ಬಡ್ತಿ ಪಡೆದದ್ದು ಇವರ ಹೆಗ್ಗಳಿಕೆ.1952ರಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ಹಲವು ಪ್ರಶಸ್ತಿ, ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ. ಕಪ್ಪು ಮಸಿಯಿಂದ ಬಿಡಿಸಿದ್ದ ಚಿತ್ರ, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಯುವ ಕಲಾವಿದರಾಗಿ ಹೊರಹೊಮ್ಮಿದರು. ಇವರ ಪ್ರತಿಭೆಯನ್ನು ಗುರುತಿಸಿ 37ನೇ ಅಖಿಲ ಭಾರತ ಕರಕುಶಲ ಸಪ್ತಾಹ, 60ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿದೆ.ದಿನದ ಬಹುಪಾಲು ಸಮಯವನ್ನು ಚಿತ್ರಕಲೆ ರಚನೆಯಲ್ಲೇ ಕಳೆಯುತ್ತಿದ್ದ ಕುಪ್ಪಾಚಾರಿ, ಹಲವು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಯ ಮೋಡಿಗೆ ಒಳಗಾದ ನಟ ಡಾ.ರಾಜ್‌ಕುಮಾರ್ ಕುಪ್ಪಾಚಾರಿಗಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದರು. ರಸಾನುಸ್ವಾದ ಇದ್ದರೆ ಮಾತ್ರ ಅವರ ಚಿತ್ರಕಲೆಯನ್ನು ಆಸ್ವಾಧಿಸಲು ಸಾಧ್ಯವಾಗುತ್ತದೆ.

 

ಮನೆಗೆ ಬರುತ್ತಿದ್ದ ಕಲಾರಸಿಕರಿಗೆ ಆಸಕ್ತಿಯಿಂದಲೇ ಆಲ್ಬಂಗಳನ್ನು ಕೊಡುತ್ತಿದ್ದ ಕುಪ್ಪಾಚಾರಿ, ಚಿತ್ರಗಳನ್ನು ಆಸ್ವಾಧಿಸುವ ರೀತಿಯನ್ನು ಸೂಕ್ಷ್ಮವಾಗಿ ವೀಕ್ಷಿ ಸುತ್ತಿದ್ದರು. ಆಸಕ್ತಿಯಿಂದ ಕಲಾಕೃತಿಗಳನ್ನು ನೋಡುತ್ತಿಲ್ಲ ಎಂದು ಖಚಿತವಾದರೆ ಅವರನ್ನು ನಯವಾಗಿ ಸಾಗುಹಾಕುತ್ತಿದ್ದರು.ಶಂಕರಮಠ ರಸ್ತೆಯಲ್ಲಿರುವ ಕುಪ್ಪಾಚಾರಿಗಳ ಮನೆಯೇ ಪಾಠಶಾಲೆಯಾಗಿತ್ತು. ಹಲವು ಶಿಷ್ಯರು ಇಲ್ಲಿಯೇ ಚಿತ್ರಕಲೆ ಅಭ್ಯಾಸ ಮಾಡಿದ್ದಾರೆ. ರೇಖಾಚಿತ್ರ ಕಲಿಯುವ ವಿದ್ಯಾರ್ಥಿಗಳಿಗೆ ಮೊದಲು ಪೆನ್ಸಿಲ್ ಹರಿತಗೊಳಿಸುವ ಕಲೆಯನ್ನು ಕರಗತ ಮಾಡಿಸುತ್ತಿದ್ದರು. ಬಳಿಕ ರೇಖೆ ಎಳೆಯುವ ಪರಿ, ಪರಿಪಕ್ವತೆ ಮೂಡಿಸುತ್ತಿದ್ದರು.

ಅರಮನೆ ಕಲಾವಿದರಾಗಿದ್ದ ಕುಪ್ಪಾಚಾರಿಗಳು ವೃದ್ಧಾಪ್ಯದಲ್ಲಿ ಜೀವನ ಸಾಗಿಸಲು ಸಾಕಷ್ಟು ಹೆಣಗಾಡಿದರು. ವೃದ್ಧಾಪ್ಯ ವೇತನ ಕ್ಕಾಗಿ ಹಲವು ಬಾರಿ ಸರ್ಕಾರಕ್ಕೆ ನೀಡಿದ ಮನವಿ ಮೂಲೆ ಸೇರಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry