ಶನಿವಾರ, ಫೆಬ್ರವರಿ 27, 2021
31 °C
ನೆರವಿಗೆ ಬಾರದ ಅಧಿಕಾರಿಗಳು

ನೋವಿನಲ್ಲಿ ಕೈ ತೊಳೆಯುತ್ತಿರುವ ರೈತ ಕುಟುಂಬ...!

ನಾಗರಾಜ ಹಣಗಿ Updated:

ಅಕ್ಷರ ಗಾತ್ರ : | |

ನೋವಿನಲ್ಲಿ ಕೈ ತೊಳೆಯುತ್ತಿರುವ ರೈತ ಕುಟುಂಬ...!

ಲಕ್ಷ್ಮೇಶ್ವರ: ಸಮೀಪದ ಬಾಳೇಹೊಸೂರಿ ನಲ್ಲಿ ಈಚೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದಾಗಿ ಹೊಲದಲ್ಲಿ ನಿರ್ಮಿಸಿದ್ದ ಶೆಡ್‌ ಬೆಂಕಿಗೆ ಆಹುತಿ ಆಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿ ಒಂದು ತಿಂಗಳಾದರೂ ರೈತನ ನೋವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ.ಹೀಗಾಗಿ ನಷ್ಟಕ್ಕೆ ಒಳಗಾದ ರೈತ ನೋವಿನಲ್ಲಿಯೇ ನಿತ್ಯ ದಿನಗಳನ್ನು ದೂಡುತ್ತಿದ್ದಾನೆ. ಹೌದು. ಬಾಳೇಹೊಸೂರಿನ ಚೌಡಪ್ಪ ಉರ್ಪ್‌ ಕಲ್ಲಪ್ಪ ಹನಮಂತಪ್ಪ ಸಾಂದ್ಲಿ ಅವರ ನೋವಿನ ಕಥೆ ಇದು. ನೀರಾವರಿ ಸೌಲಭ್ಯ ಇರುವ ತಮ್ಮ ಹೊಲದಲ್ಲಿ ಚೌಡಪ್ಪ ತಗಡಿನ ಶೆಡ್‌ ಹಾಕಿಕೊಂಡು ಕುಟುಂಬ ಸಹಿತ ವಾಸವಾಗಿದ್ದರು. ಆದರೆ ಫೆ.10ರ ರಾತ್ರಿ ವಿದ್ಯುತ್‌ ಅಪಘಾತ ಉಂಟಾಗಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಶೆಡ್‌ನಲ್ಲಿ ಇದ್ದ ರೈತ ಚೌಡಪ್ಪ ಬೆಂಕಿಯ ಕೆನ್ನಾಲಿಗೆಗೆ ಸಿಲು ಕಿದ್ದರಿಂದ ಅವರ ತಲೆ ಹಾಗೂ ಎಡ ಗಡೆಯ ಮುಂಗೈ ಸಂಪೂರ್ಣ ಸುಟ್ಟು ಕರಕಲಾಗಿತ್ತು.ಅಲ್ಲದೆ ಇದರೊಂದಿಗೆ ಶೆಡ್‌ನಲ್ಲಿದ್ದ ₨ 1.20 ಲಕ್ಷ  ನಗದು, ಒಂದು ಆಕಳು, ಒಂದು ಹೋರಿ, 2 ಟಗರು, 1 ಟಗರಿನ ಮರಿ, ಒಂದು ಚೀಲ   ಅಲಸಂದಿ, ಮೂರು ಹತ್ತಿ ಅಂಡಿಗೆ, ಒಂದು ಕ್ವಿಂಟಲ್‌ ಒಣ ಮೆಣಸಿನಕಾಯಿ ಹಾಗೂ 2 ತೊಲಿ ಬಂಗಾರ, ಗೃಹೋಪ ಯೋಗಿ ವಸ್ತುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಆಗ ಕಂದಾಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು ಚೌಡಪ್ಪನ ಶೆಡ್‌ಗೆ ಭೇಟಿ ನೀಡಿದ್ದರು. ಆದರೆ ಘಟನೆ ನಡೆದು ಒಂದು ತಿಂಗಳಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಬಡ ರೈತ ಚೌಡಪ್ಪ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ.‘ನನ್ನ ಗುಡಸಲಾ ಸುಟ್ಟು ಒಂದ ತಿಂಗಳಾತ್ರಿ. ಆದರೂ ಯಾವುದ ಪರಿಹಾರ ಬಂದಿಲ್ಲ. ಸಾಕಿದ್ದ ಆಕಳಾ, ಹೋರಿ, ಆಡು, ಕುರಿ ಬೆಂಕ್ಯಾಗ ಸುಟ್ಟು ಹೋಗ್ಯಾವ್ರೀ. ಅಲ್ದ ಕಷ್ಟಪಟ್ಟ ಬೆಳಿದಿದ್ದ ಹತ್ತಿ, ಮೆಣಸಿನಕಾಯಿ, ಅಲಸಂದಿನೂ ಸುಟ್ಟಾವ್ರೀ.   ದಯಮಾಡಿ ನೀವ ಏನರ ಬರಂಗ ಮಾಡ್ರೀ’ ಎಂದು ರವಿವಾರ ಪ್ರಜಾವಾಣಿ ಎದುರು ತಮ್ಮ ಅಳಲು ತೋಡಿಕೊಂಡರು.‘ರೈತ ಚೌಡಪ್ಪಗ ಭಾಳ ಲುಕ್ಷಾನ್‌ ಆಗೇತಿ. ಆತ ಮದ್ಲ ಬಡವ. ಹಿಂಗಾಗಿ ಅಧಿಕಾರಿಗಳು ಆತನ ನೆರವಿಗೆ ಧಾವಿಸಬೇಕು’ ಎಂದು ಬಾಳೇ ಹೊಸೂರು ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಸ್ವಾಮಿಗಳು ಮನವಿ ಮಾಡುತ್ತಾರೆ.ಯಾವುದೇ ಒಂದು ಉದ್ದಿಮೆ ಬೆಂಕಿಗೆ ಆಹುತಿ ಆದಾಗ ಹೆಚ್ಚಿನ ಮುತುವರ್ಜಿ ವಹಿಸಿ ನಷ್ಟ ಭರಿಸಲು ಸಹಾಯ ಮಾಡುವ ಅಧಿಕಾರಿಗಳು ನಿರಕ್ಷರಿ ರೈತನ ನೆರವಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಹೇಗಾದರೂ ರೈತ. ಈತನ ಪರವಾಗಿ ಯಾರೂ ಬರುವುದಿಲ್ಲ ಎಂಬ ಧೋರಣೆ ಅಧಿಕಾರಿಗಳಲ್ಲಿ ಇದ್ದಂತೆ ತೋರುತ್ತದೆ. ಕಾರಣ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಬೆಂಕಿ ಅನಾಹುತದಲ್ಲಿ ನಷ್ಟ ಅನುಭವಿಸಿ ನೋವಿನಿಂದ ನರಳುತ್ತಿರುವ ರೈತನಿಗೆ ಸೂಕ್ತ ಪರಿಹಾರ ಒದಗಿಸಿಕೊಡ ಬೇಕಾದ ಅಗತ್ಯ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.