ನೋವು-ನಗು ತುಂಬಿರುವ ಕಥನ

ಸೋಮವಾರ, ಮೇ 20, 2019
32 °C

ನೋವು-ನಗು ತುಂಬಿರುವ ಕಥನ

Published:
Updated:
ನೋವು-ನಗು ತುಂಬಿರುವ ಕಥನ

ವಿಮರ್ಶೆ

ಉತ್ತರ ಕರ್ನಾಟಕದಲ್ಲಿ ಗೊಂದಲಿಗ ಎಂಬ ಸಮುದಾಯವಿದೆ. ಈ ಸಮುದಾಯದವರು ತುಳುಜಾಪುರದ ಅಂಬಾಭವಾನಿ, ಕೊಲ್ಹಾಪುರದ ಮಹಾಲಕ್ಷ್ಮಿ ಮುಂತಾದ ಶಕ್ತಿದೇವತೆಗಳಿಗೆ ಗೊಂದಲ ಹಾಕುವವರು.ಗೊಂದಲವೆಂದರೆ ದೇವೀ ಆರಾಧನೆಯ ಭಾಗವಾಗಿ ಮಾಡುವ ಆಚರಣೆ. ಮೈಲಾರ ಪರಂಪರೆಯ ಗೊರವಪ್ಪಗಳ ಹಾಗೆ, ಮಂಟೆಸ್ವಾಮಿಯ ನೀಲಗಾರರ ಹಾಗೆ, ತಿರುಪತಿ ತಿಮ್ಮಪ್ಪನ ದಾಸಪ್ಪಗಳ ಹಾಗೆ ಅಥವಾ ಎಲ್ಲಮ್ಮನ ಜೋಗಪ್ಪಗಳ ಹಾಗೆ ಇವರನ್ನು ಜನಪದ ಧರ್ಮಗಳ `ಪುರೋಹಿತ~ರು ಎಂದೂ ಕರೆಯಬಹುದು.ತಮ್ಮನ್ನು ಆಹ್ವಾನಿಸಿದ ಸವರ್ಣೀಯ ಭಕ್ತರ ಮನೆಗೆ ಗೊಂದಲ ಹಾಕಲು ಹೋದಾಗ ಕಾಲಿಗೆ ಬೀಳಿಸಿಕೊಳ್ಳುವಷ್ಟು ಪೂಜನೀಯರಾಗುವ ಇವರು, ಗೊಂದಲ ಮುಗಿದ ಮರುಕ್ಷಣವೇ ಅಸ್ಪೃಶ್ಯರಾಗಿ ಸಾಮಾಜಿಕವಾಗಿ ನಿಕೃಷ್ಟತೆಗೆ ಈಡಾಗಿ ಬದುಕುತ್ತಾರೆ.ಇದೊಂದು ವೈರುಧ್ಯ. ಗೊಂದಲಿಗರು ಗೊಂದಲದ ಜತೆಗೆ, ಭಿಕ್ಷೆ ಬೇಡುವುದು, ಮೀನು ಹಿಡಿಯುವುದು, ಜೋತಿಷ್ಯ ಹೇಳುವುದು, ಭಾಂಡೆ ಪಾತ್ರೆ ಮಾರುವುದು, ಕನ್ನಡಿ ಬಾಚಣಿಕೆಯಂತಹ ಸ್ಟೇಶನರಿ ಮಾರುವುದು, ಬುಡುಬುಡಿಕೆ ಮಾಡುವುದು- ಹೀಗೆ ನಾನಾ ಕಸುಬುಗಳಲ್ಲಿ ತೊಡಗಿಸಿಕೊಂಡಿರುವರು.ಸಂಬಾಳ ಬಾರಿಸುತ್ತ ಚೌಡಿಕೆ ನುಡಿಸುತ್ತ ಹಾಡು ಮತ್ತು ಕಥೆಗಳ ಮೂಲಕ ಗೊಂದಲ ಹಾಕುವ ಗೊಂದಲಿಗರು ಅದ್ಭುತ ಕಲಾವಿದರು. ಬಡತನ ಅಪಮಾನಗಳ ಹಾಸುಹೊದ್ದುವ ಸಮುದಾಯಗಳೇ ಹಾಡುವ ಕಥಿಸುವ ಕುಣಿವ ಸೃಜನಶೀಲತೆ ಪ್ರಕಟಿಸುವುದು ಇನ್ನೊಂದು ವೈರುಧ್ಯವಾಗಿದೆ.ಮರಾಠಿ ಮನೆಮಾತಿನ ಗೊಂದಲಿಗರು, ಚರಿತ್ರೆಯ ಯಾವುದೋ ಘಟ್ಟದಲ್ಲಿ ಯಾವ್ಯಾವೋ ಕಾರಣಗಳಿಂದ ಮರಾಠಿ ಸೀಮೆಯಿಂದ ವಲಸೆ ಬಂದವರು. ಆದರೆ ಅವರು ಗೊಂದಲ ಹಾಕುವಾಗ ಮಾಡುವ ಕಥೆ ಮಾತ್ರ ಕನ್ನಡದಲ್ಲಿಯೆ ಇರುತ್ತದೆ.ಬಹುತೇಕ ಅಲೆಮಾರಿಗಳಾದ ಗೊಂದಲಿಗರು ಸಾಮಾಜಿಕವಾಗಿ ತೀರಾ ಹಿಂದುಳಿದವರು. ಇಂತಹ ಸಮುದಾಯದಿಂದ ಬಂದವರೊಬ್ಬರು ಬರೆದ ಮೊದಲ ಆತ್ಮಕಥೆಯಿದು.`ಗೊಂದಲಿಗ್ಯಾ~ ಎನ್ನುವುದು `ಹೊಲ್ಯಾ~ದಂತೆ ಮೇಲಜಾತಿಯವರು ತುಚ್ಛೀಕರಣದ ದನಿಯಲ್ಲಿ ಕರೆಯುವ ಪರಿಭಾಷೆ. ಅದನ್ನು ತಲೆಬರೆಹ ಮಾಡಿಕೊಳ್ಳುವಲ್ಲಿ ಬಹುಶಃ ಎರಡು ಉದ್ದೇಶಗಳಿಂತಿವೆ.1. ಅಪಮಾನಿತ ಸನ್ನಿವೇಶವನ್ನೇ ಮುಂಚಲನೆಗೆ ಸ್ವಾಭಿಮಾನಕ್ಕೆ ಪ್ರೇರಣೆ ಮಾಡಿಕೊಳ್ಳುವುದು.2. ತನ್ನ ಸಮುದಾಯದ ದುರ್ಭರ ಬದುಕನ್ನು ಲೋಕದೆದುರು ಮಂಡಿಸುವುದು: “ಬದುಕಲೂ ಆಗದ ಸಾಯಲೂ ಆಗದ ಕೊಳಗೇರಿ ಗುಡಿಸಲುಗಳಲ್ಲಿ ಬದುಕು ಸವೆಸುತ್ತಿರುವ ನನ್ನ ಜನಾಂಗದ ಅಸಹಾಯಕರಿಗೆ” ಎಂದಿರುವ ಇಲ್ಲಿನ ಅರ್ಪಣೆ ಕೂಡ ಈ ಉದ್ದೇಶವನ್ನು ಸ್ಪಷ್ಟಮಾಡುತ್ತದೆ.ಕೆಲವರಿಗೆ ಆತ್ಮಕಥೆ ಬರೆಯುವುದು ತಮ್ಮ ಬದುಕಿನ ಸಾಹಸಗಾಥೆಯನ್ನು ಬಣ್ಣಿಸುವ ಅವಕಾಶವಾದರೆ, ದಮನಿತ ಸಮುದಾಯಗಳಿಂದ ಬಂದವರಿಗೆ ಅದು ತಮ್ಮ ಸಮುದಾಯಗಳ ವರ್ತಮಾನದ ಚರಿತ್ರೆ ಬರೆದು, ಘನತೆಯ ಬದುಕಿಗಾಗಿ ಹಂಬಲಿಸುವ ಹೊಣೆಗಾರಿಕೆ. `ಗೊಂದಲಿಗ್ಯಾ~ ಎರಡನೇ ಮಾದರಿಯ ಕೃತಿ.ಈ ಕೃತಿಯಲ್ಲಿ ನಿರ್ದಿಷ್ಟ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೇ ಜನ ಅನುಭವಿಸುವ ಅಪಮಾನ, ಮುಜುಗರ ಮತ್ತು ಬವಣೆಗಳ ಹಲವಾರು ಘಟನೆಗಳ ಚಿತ್ರಣವಿದೆ. ಲೇಖಕ ತನ್ನ ಸಹಪಾಠಿಗಳ ಮನೆಗೆ ರೊಟ್ಟಿ ಭಿಕ್ಷಕ್ಕೆ ಹೋಗುವುದು, ಜಾತಿ ಕಾರಣಕ್ಕೆ ಗೆಳೆಯರ ಮನೆಗಳಲ್ಲಿ ಅಪಮಾನ ಅನುಭವಿಸುವುದು, ವೃತ್ತಿಯಿಂದ ಶಿಕ್ಷಕರಾದ ಲೇಖಕರು ಗೆಳೆಯರ ಜತೆಗೆ ವಾಯುವಿಹಾರಕ್ಕೆ ಹೋಗಿದ್ದಾಗ, ಅವರ ತಂಗಿಯ ಮಗನೇ ಭಿಕ್ಷೆ ಬೇಡಿಕೊಂಡು ಇವರ ಮುಂದೆ ಬರುವುದು; ವ್ಯಾಪಾರಕ್ಕೆ ಹಳ್ಳಿಗಳ ಮೇಲೆ ಅಡ್ಡಾಡಲು ಹೋದ ಲೇಖಕರ ತಾಯಿ ಗರ್ಭಪಾತವಾದರೂ ಹಲವಾರು ಮೈಲು ನಡೆದು ಮನೆಗೆ ಬರುವುದು- ಮುಂತಾದ ಚಿತ್ರಗಳು ಕಲಕುತ್ತವೆ.ಇವನ್ನೆಲ್ಲ ಓದುತ್ತಿದ್ದರೆ, ನಮ್ಮ ಸಮಾಜ ಇಷ್ಟೊಂದು ಅಮಾನುಷವಾಗಿದೆಯೇ; ಇದೇ ಕರ್ನಾಟಕವೇನು ನಾವೆಲ್ಲ ನಿತ್ಯವೂ ಸರ್ವ ಜನಾಂಗದ ಶಾಂತಿಯ ತೋಟವೆಂದು ಕೊಂಡಾಡುವುದು; ಇದೇ ಹಳ್ಳಿಗಳೇನು ನಮ್ಮ ಜನಪದ ಸಂಸ್ಕೃತಿಯ ತಾಣಗಳಾಗಿರುವುದು ಎಂದು ಗಾಬರಿಯಾಗುತ್ತದೆ.ಆದರೆ ಅಮಾನುಷವಾದ ಈ ಸಮಾಜದಲ್ಲೇ ಗೊಂದಲಿಗರ ಹುಡುಗನ ಪ್ರತಿಭೆಯನ್ನು ಗುರುತಿಸುವ ಮತ್ತು ಬೆಳೆಸುವ ಜೀವಗಳೂ ಇವೆ ಎಂಬ ಇನ್ನೊಂದು ಮಗ್ಗುಲಿನ ಚಿತ್ರಗಳನ್ನು ಕೃತಿ ಮರೆಮಾಚುವುದಿಲ್ಲ.

 

ತನ್ನ ಮನೆಗೆ ರೊಟ್ಟಿ ಬೇಡಲು ಬಂದ ಸಹಪಾಠಿಯನ್ನು ಆಡಿಕೊಂಡು ಶಾಲೆಯಲ್ಲಿ ನಗುವ ಗೆಳೆಯನೇ, ಆ ಸಹಪಾಠಿ ಶಾಲೆಗೆ ಮೊದಲಿಗನಾಗಿ ಬಂದಾಗ, ಹೆಗಲಮೇಲೆ ಹೊತ್ತು ಊರಲ್ಲಿ ಮೆರವಣಿಗೆ ಮಾಡುತ್ತಾನೆ.ನಿಷ್ಠುರವಾಗಿ ದಂಡಿಸಿದ ಗುರುಗಳೇ ಶಿಷ್ಯನನ್ನು ಪ್ರೀತಿಯಿಂದ ಬೆಳೆಸುತ್ತಾರೆ. ಕರ್ನಾಟಕದ ಗ್ರಾಮೀಣ ಸಮಾಜವನ್ನು ತನ್ನ ಸಮುದಾಯದ ಸಂವೇದನೆಯ ಕಣ್ಣಲ್ಲಿ ನೋಡುತ್ತ ಲೇಖಕರು ಅನುಭವಗಳನ್ನು ಸಿನಿಕತೆ, ಉತ್ಪ್ರೇಕ್ಷೆ ಹುಸಿ ಉದಾರತೆಯಿಲ್ಲದೆ, ಮಾಗಿದ ತಾಳ್ಮೆಯಲ್ಲಿ ಕಾಣಿಸುತ್ತ ಹೋಗುತ್ತಾರೆ.ಈ ಅರ್ಥದಲ್ಲಿ ಈ ಕೃತಿ, ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜಾತಿವ್ಯವಸ್ಥೆಯ ಕ್ರೌರ್ಯ ಮತ್ತು ಮಾನವೀಯತೆಗಳ ಚರಿತ್ರೆಯೂ ಹೌದು; ಅಸಾಧ್ಯತೆಗಳ ನಡುವೆ ಇರುವ ಸಾಧ್ಯತೆಗಳ ಹುಡುಕಾಟವೂ ಹೌದು.ಅಪಮಾನಿತ ಸಮುದಾಯಗಳಿಂದ ಅಥವಾ ಕೆಟ್ಟ ಬಡತನದಿಂದ ಬಂದವರು ತಮ್ಮ ಜೀವನವನ್ನು ಕುರಿತು ಬರೆಯುವಾಗ, ದಾರುಣತೆಯನ್ನೇ ಬಿಂಬಿಸುತ್ತ ಸ್ವಮರುಕದಲ್ಲಿ ಅದ್ದಿದ ಗೋಳುಕಥನವನ್ನಾಗಿ ಮಾಡುವುದುಂಟು: ಇನ್ನೂ ಕೆಲವರು ತಮ್ಮ ಮತ್ತು ತಮ್ಮ ಸಮುದಾಯದ ಚೈತನ್ಯಶೀಲತೆಯನ್ನು ಪ್ರಕಟಿಸುವ ವಿನೋದ ಪ್ರಜ್ಞೆಯಲ್ಲಿ ವಾಸ್ತವಿಕತೆಯ ದಾರುಣತೆಯನ್ನು ಮರೆಸುವುದುಂಟು: ಈ ಹಿನ್ನೆಲೆಯಲ್ಲಿ ಮದರಿಯವರದು ಮಧ್ಯಮಮಾರ್ಗಿ ಮಾದರಿ ಎನ್ನಬಹುದು.ಹೀಗಾಗಿ ಈ ಆತ್ಮಕಥೆಯಲ್ಲಿ ಕೇವಲ ರೋದನದ ಕಥೆಯಿಲ್ಲ; ಸಮುದಾಯದ ಅದಮ್ಯ ಚೈತನ್ಯಶೀಲತೆ ಹೊಮ್ಮುವ ಚಿತ್ರಗಳೂ ಇವೆ. ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿ ಗೊಂದಲ ಹಾಕಿಬರುವ ಅಜ್ಜಿಯು `ಒಡಲಾಳ~ದ ಸಾಕವ್ವನನ್ನು ನೆನಪಿಸುತ್ತಾಳೆ: ಕುವೆಂಪು ಕಾದಂಬರಿಗಳಲ್ಲಿ ಬರುವ ಅನೇಕ ಕಿಲಾಡಿ ನಾಯಕರು ಇಲ್ಲಿ ಬರುತ್ತಾರೆ; ಊರಾಡಲು ಹೋದಾಗ ಗೊಂದಲಿಗರು ಜನರನ್ನು ಯಾಮಾರಿಸುವ ಅನೇಕ ಘಟನೆಗಳನ್ನು ಮದರಿ ಭಿಡೆಯಿಲ್ಲದೆ ಬರೆಯುತ್ತಾರೆ. ಜಾತಿ ಮತ್ತು ಆಸ್ತಿ ಬಲವಿಲ್ಲದ ಸಮುದಾಯಗಳು ಅಸ್ತಿತ್ವಕ್ಕಾಗಿ ಸೆಣಸುವಾಗ, ಬದುಕಿನ ಹೋರಾಟದ ಭಾಗವಾಗಿಯೇ ಬಂದಂತಹ ಸುಳ್ಳು ಮೋಸದ ಚಾಲಾಕಿತನಗಳಿವು.ಈ ಆತ್ಮಕಥೆಯು ಬಾಲ್ಯದ ದಿನಗಳ ಘಟ್ಟಕ್ಕೆ ತನ್ನನ್ನು ಹೆಚ್ಚು ಮೀಸಲಿರಿಸಿಕೊಂಡಿದೆ. ಶಾಲಾಕಲಿಕೆಯ ದಿನಗಳ ಚಿತ್ರಗಳು ಲೇಖಕರ ವಿನೋದ ಪ್ರಜ್ಞೆಯನ್ನು ಹೆಚ್ಚು ಹೊಮ್ಮಿಸಿದಂತಿವೆ.

 

ಮಿಸಾಲಿಗೆ ಹೇಳುವುದಾದರೆ, ಯಾರಿಗೆ ಯಾಕಾಗಿ ಯಾವಾಗ ಬಡಿಯುತ್ತಾರೆ ಎಂಬುದನ್ನು ಊಹಿಸಲು ಅಸಾಧ್ಯವಾದ ಉಕ್ಕಲಿ ಮೇಷ್ಟರ ವರ್ತನೆಗಳು. ಅವರೊಮ್ಮೆ ಬೀಡಿಕಟ್ಟನ್ನು ಮನೆಯಲ್ಲಿ ಮರೆತುಬಂದು “ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ.

 

ಎಲ್ಲಿ ಹೋಯ್ತು? ಸ್ವಲ್ಪಾದರೂ ಜವಾಬ್ದರಿ ಐತ್ಯಾ?” ಎಂದು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸುವರು; ಉಕ್ಕಲಿಯವರ ಪತ್ರಿಕೆ ಪ್ರಕರಣವೂ ಸ್ವಾರಸ್ಯಕರವಾಗಿದೆ: “ಪ್ರಾರ್ಥನೆ ಮುಗಿದೊಡನೆ ಓದಲು ದಿನಪತ್ರಿಕೆಯನ್ನು ಉಕ್ಕಲಿ ಮಾಸ್ತರರು ಮನೆಯಲ್ಲಿ ಮರೆತು ಬಂದಿದ್ದರು. ಪತ್ರಿಕೆ ಇಲ್ಲವೆಂದು ಎಲ್ಲ ವಿದ್ಯಾರ್ಥಿಗಳು ತಮ್ಮ ತರಗತಿಗೆ ಹೋದರು.

 

ನಾನೂ ತರಗತಿಯಲ್ಲಿ ಹೋಗಿ ಕುಳಿತೆ. ಒಳಗೆ ಬಂದವರೇ `ಲೇ ಮದರಿ ಮನಿಗಿ ಬಂದಿದ್ದಿ. ಪೇಪರ್ ತರೂ ಖಬರ ಇಲ್ಲ ನಿನಗ~ ಎಂದು ಹಲ್ಲುಕಡಿಯುತ್ತಲೇ ಕೈಯಿಂದ ಮುಖಕ್ಕೆ ಹೊಡೆದರು. ಮೂಗಿನಿಂದ ರಕ್ತ ಸೋರಲು ಹತ್ತಿತು. ನನ್ನ ಮಗ್ಗುಲು ಕುಳಿತ ಹುಡುಗನಿಗೆ `ಅವನ ಮೂಗು ದೆಚ್ಚೈತಿ ನೋಡಕೋಂತ ಸುಮ್ಮನ ಕುಂತಿ. ದವಾಖಾನಿಗಿ ಕರಕೊಂಡ ಹೋಗಾಕ ಬರುದಿಲ್ಲ~ ಎಂದು ಅವನ್ನು ಹೊಡೆಯಲು ಶುರುಮಾಡಿದರು.ಭಯದಿಂದ ಆ ಸಾಲಿನಲ್ಲಿ ಕುಳಿತವರೆಲ್ಲ ನನ್ನನ್ನು ಕರೆದುಕೊಂಡು ದವಾಖಾನೆಗೆ ಓಡಿದರು.

ಈ ಆತ್ಮಕಥೆ ಅತ್ಯುತ್ತಮವಾದ ಕಾದಂಬರಿಯಂತಿದೆ. ಇದಕ್ಕೆ ಮೂರು ಕಾರಣಗಳಿವೆ.

 

1. ಸಮುದಾಯ ವಿಶಿಷ್ಟವಾದ ಅನುಭವಲೋಕವನ್ನು ಹಿಡಿದುಕೊಡುವ ಅದರ ಗುಣ. ಗೊಂದಲಿಗರು `ಮುಸಾಫರ~ಕ್ಕೆ ಹೋಗುವ, ವಲಸೆಯಲ್ಲಿ ಪಯಣ ಮಾಡುವ, ಪರವೂರುಗಳಲ್ಲಿ ವಸತಿ ಮಾಡುವ, ಸಮುದಾಯ ವಿಶಿಷ್ಟವಾದ ನ್ಯಾಯ ಪಂಚಾಯಿತಿ ನಡೆಸುವ ಚಿತ್ರಗಳು ಇಲ್ಲಿ ಬರುತ್ತವೆ.

 

2. ಭಾಷೆಯನ್ನು ಸಂಕ್ಷಿಪ್ತವಾಗಿಯೂ ಧ್ವನಿಪೂರ್ಣವಾಗಿಯೂ ಬಳಸುತ್ತ ಹುಟ್ಟುವ ಇಲ್ಲಿನ ಪರಿಣಾಮಕಾರಿ ಕಥನಕ್ರಮ. (ಕೆಲವೊಮ್ಮೆ ವಿಸ್ತರಣೆಗೆ ಕಸುವುಳ್ಳ ಪ್ರಸಂಗಗಳನ್ನು ಲೇಖಕರು ಚುಟುಕಾಗಿ ಮುಗಿಸಿ ಮುಂದೆ ಹೋಗಿಬಿಡುತ್ತಾರೆ ಅನಿಸುವುದುಂಟು).

 

3. ಜೀವಂತವಾದ ನಾಟಕೀಯ ಸಂಭಾಷಣೆಗಳು. ಪಾತ್ರಗಳನ್ನು ಅವು ಆಡುವ ಮಾತುಗಳಿಂದಲೇ ಕಟ್ಟಿಕೊಡುವ ಇಲ್ಲಿನ ಪರಿ ಬಹಳ ಶಕ್ತವಾಗಿದೆ. ನಾಟಕಕಾರನಾದ ತಮ್ಮ ಅಪ್ಪನ ಪ್ರಭಾವವೊ, ಕಥೆಯನ್ನು ನಾಟಕೀಯವಾಗಿ ಅಭಿವ್ಯಕ್ತಿಸುವ ಗೊಂದಲಿಗರ ಕಥನ ಪ್ರತಿಭೆ ಕಾರಣವೊ, ಸ್ವತಃ ನಾಟಕಗಳನ್ನು ಬರೆದ ಲೇಖಕರ ಅನುಭವದ ಕಾರಣದಿಂದಲೊ, ಇಲ್ಲಿನ ಡೈಲಾಗುಗಳು ಶಕ್ತವಾಗಿದ್ದು, ಘಟನೆ ಕಣ್ಣಮುಂದೆ ನಡೆಯುತ್ತಿರುವಂತೆ ಚಿತ್ರಿಸುತ್ತವೆ.ಬೇರೆಬೇರೆ ವೃತ್ತಿ ಮತ್ತು ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಬರೆಹಗಾರಿಕೆಯ ಹಿನ್ನೆಲೆಯಿಲ್ಲದೆ ಬರೆದಿರುವ ಆತ್ಮಕಥೆಗಳು ಕನ್ನಡದಲ್ಲಿ ಸಂಚಲನ ಹುಟ್ಟಿಸುತ್ತಿವೆ. ಅವನ್ನು ಅಲ್ಲಿರುವ ವೃತ್ತಿ ಇಲ್ಲವೇ ಸಾಮುದಾಯಿಕ ವಿಶಿಷ್ಟವಾದ ಅನುಭವ ಲೋಕಕ್ಕಾಗಿ ಮಾತ್ರವಲ್ಲದೆ, ಅವುಗಳ ಜೀವಂತ ಗದ್ಯಕ್ಕಾಗಿ ಕೂಡ ಓದಬಹುದು.ಡಾ. ರಮಾನಂದರ `ವೈದ್ಯನ ಶಿಕಾರಿ~ ನಾಗಲೋಟಿಮಠ ಅವರ `ಬಿಚ್ಚಿದ ಜೋಳಿಗೆ~ ಇಲ್ಲಿ ನೆನಪಾಗುತ್ತಿವೆ. ಸಮಸ್ಯೆಯೆಂದರೆ, `ಗೊಂದಲಿಗ್ಯಾ~ದಂತಹ ಆತ್ಮಕಥೆಗಳನ್ನು ಅವುಗಳ ಅನುಭವ ವಿಶಿಷ್ಟತೆಗಾಗಿ ಬೆರಗುಗೊಳ್ಳುವಾಗ ಅಥವಾ ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ಆಕರಗಳೆಂದು ಭಾವಿಸುವಾಗ, ನಮ್ಮ ಸಮಾಜವು ಇನ್ನೂ ಎಂತಹ ದುರವಸ್ಥೆಗಳಲ್ಲಿ ಇದೆಯಲ್ಲ ಎಂಬ ಕಟುವಾಸ್ತವವು ಮುಖಕ್ಕೆ ಬಡಿಯುವುದು.

 

ತಮ್ಮ ಸಮುದಾಯಕ್ಕೆ ಸೇರಿದ ತಾಲ್ಲೂಕು ಪಂಚಾಯಿತಿ ಸದಸ್ಯನೊಬ್ಬ ಉಳಿದ ಸದಸ್ಯರಿಗೆ ಚಹ ತಂದುಕೊಡುವ ಚಪ್ರಾಸಿ ಕೆಲಸ ಮಾಡುವುದನ್ನು ಕಂಡು ಒಮ್ಮೆ ಲೇಖಕರು, `ನೀನೂ ಅವರಿಗೆ ಸಮಾನ ಅಧಿಕಾರವುಳ್ಳವನು ಹೀಗೆ ಮಾಡಬೇಡ~ ಎಂದು ಬುದ್ಧಿ ಹೇಳುವ ಪ್ರಸಂಗವೊಂದು ಬರುತ್ತದೆ.ಆಗವನು “ಹೇಳಾಕ ಭಾಳ ಹಗರೈತಪ್ಪ. ಎಷ್ಟ ಇದ್ರೂ ಊರಾನ್ನ ಮಂದಿವ ಅವರು. ನಿನಗ ಗೊತ್ತಾಗೂ ಮಾತಲ್ಲ” ಎಂದು ತಣ್ಣಗೆ ಉತ್ತರಿಸುತ್ತಾನೆ.ಆಧುನಿಕ ಶಿಕ್ಷಣ ವೈಚಾರಿಕತೆಗೆ ತೆರೆದುಕೊಂಡ ಪ್ರಜ್ಞಾವಂತರಿಗೆ ಸರಿತಪ್ಪು ಅರಿವು ಇರುತ್ತದೆ. ಆದರೆ ಆ ವಾಸ್ತವದ ಸನ್ನಿವೇಶದಲ್ಲಿ ಬದುಕುವರಿಗೆ ಯಾವುದು ಸಾಧ್ಯ ಮತ್ತು ಅಸಾಧ್ಯ ಎಂಬುದು ಗೊತ್ತಿರುತ್ತದೆ. ಹೇಳುವುದು ಹಗುರವಾಗಿ ಬದುಕುವುದು ಭಾರವಾಗಿರುವ ಇಕ್ಕಟ್ಟುಗಳನ್ನು, ಅನೇಕ ಕನಸು ಕನವರಿಕೆಗಳ ಸಮೇತ ಮುಂದಿಡುತ್ತ ಹೋಗುವ ಕಾರಣದಿಂದ, ಸದರಿ ಆತ್ಮಕಥೆ ಕೇವಲ ಆತ್ಮಕಥೆಯಾಗಿಲ್ಲ.

 

 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry