ನೋವು ನುಂಗಿ ಮಕ್ಕಳ ಮನಗೆದ್ದ ಶಿಕ್ಷಕಿ

7

ನೋವು ನುಂಗಿ ಮಕ್ಕಳ ಮನಗೆದ್ದ ಶಿಕ್ಷಕಿ

Published:
Updated:

ಗಜೇಂದ್ರಗಡ: ಇಲ್ಲಿನ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂಬರ್ ಒಂದರಲ್ಲಿ ಸೇವೆ ಸಲ್ಲಿಸುತ್ತಿರುವ 47 ವರ್ಷದ ಶಿಕ್ಷಕಿ ಸುನಂದಾ ಬದಾಮಿ ತಮಗಿರುವ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಪರಿಶ್ರಮದ ಮೂಲಕ ಮಕ್ಕಳ ಮನ ಗೆಲ್ಲುವ ಜತೆಗೆ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.1996ರಲ್ಲಿ ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಮಾದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಆರಂಭಿಸಿದ ಸುನಂದಾ ಬದಾಮಿ ಅವರಿಗೆ ಬೆನ್ನಿನ ಮೇಲೆ ದೊಡ್ಡ ಗಂಟಾಗಿದ್ದು (ಗೂನು ಬೆನ್ನು) ಇತರರಂತೆ ಸರಿಯಾಗಿ ನಿಲ್ಲಲು ಆಗದು. ಆದರೆ ಅವರು ಕಲಿಕಾ ವಿಧಾನದಲ್ಲಿ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ಮಕ್ಕಳ ಮೆಚ್ಚುಗೆ ಶಿಕ್ಷಕರಾಗಿದ್ದಾರೆ. ಇವರ ಕಾರ್ಯವೈಖರಿಗೆ ಮನಸೋಲದ ಮಕ್ಕಳಿಲ್ಲ. ಪಾಲಕರಿಲ್ಲ. ಅಷ್ಟೊಂದು ಅಚ್ಚುಕಟ್ಟಾದ ಸೇವೆ ಇವರದ್ದು.ಸುನಂದಾ ಶಾಲಾ ಮಕ್ಕಳಲ್ಲಿ ವರ್ಣಭೇದ, ಜಾಣ-ದಡ್ಡ ಎಂಬ ಭೇದ ಭಾವ ಮಾಡದೇ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಂಡು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ.ವಿಜ್ಞಾನ, ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಬೋಧಿಸುವ ಅವರು ನಿರ್ದಿಷ್ಟತೆಯಿಂದ ಸಾಮಾನ್ಯೀಕರಣದೆಡೆಗೆ, ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ ಸಾಗುವ ಬೋಧನಾ ಪದ್ಧತಿಯಿಂದ ಅಚ್ಚುಕಟ್ಟಾದ ಬೋಧನೆ ಅಳವಡಿಸಿಕೊಂಡಿದ್ದಾರೆ.ವಿಷಯ ಪರಿಕಲ್ಪನೆಗೆ ಸಂಬಂಧಿಸಿದಂತೆ ವಿವಿಧ ಗ್ರಂಥಗಳಿಂದ ದೃಷ್ಟಾಂತಗಳನ್ನು ಸಂಗ್ರಹಿಸಿಕೊಳ್ಳುವ ಜತೆಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಗೊತ್ತಿರುವ ತತ್ವ, ಅಥವಾ ಅಂಶಕ್ಕೆ ಸಂಬಂಧಿಸಿದ ನಿರ್ದಿಷ್ಟ ತತ್ವಗಳನ್ನು ಪರೀಕ್ಷಿಸಿ ತಾಳೆ ನೋಡುವ ಮೂಲಕ ಪರಿಪಕ್ವ ಬೋಧನೆಯಲ್ಲಿ ತೊಡಗುವುದೇ ಪಾಠ ಬೋಧನೆಯತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದಾರೆ. ಪಾಠಕ್ಕೆ ಸಂಬಂಧಿಸಿದಂತೆ ವಾಸ್ತವಿಕ ಘಟನೆ ಹಾಗೂ ಕಥೆಗಳನ್ನೊಳಗೊಂಡ ಸುನಂದಾ ಅವರ ಪರಿಣಾಮಕಾರಿ ಬೋಧನೆಗೆ ಮನಸೋಲದ ವಿದ್ಯಾರ್ಥಿಗಳೇ ಇಲ್ಲ!ಸಾಂಪ್ರದಾಯಿಕ ಅವಶೇಷಗಳು ಜೀವಂತ!: ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಉದ್ದೇಶ ಪೂರ್ವಕವಾಗಿ ವರ್ಗಾವಣೆ ಆದ ಆಚಾರ-ವಿಚಾರಗಳು, ರೀತಿ-ನೀತಿಗಳು, ನಡೆ-ನುಡಿಗಳು ಇವರ ಬೋಧಕಾ ಕೌಶಲ್ಯದಲ್ಲಿ ಜೀವಂತವಾಗಿವೆ. ಜಾನಪದ ಗೀತೆಗಳು, ಲಾವಣಿ ಪದಗಳು, ಕಥೆಗಳು, ಸಂಗ್ರಾಮ ಗೀತೆಗಳು, ಚಿತ್ರಪಟಗಳು, ನಕ್ಷೆಗಳು, ರಾಜ್ಯಗಳ ವಿಸ್ತಾರ ಚಿತ್ರಣ ಸಾಹಿತ್ಯಿಕ ಬರಹಳನ್ನು ಮಕ್ಕಳ ಮನದಾಳದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದಾರೆ.ಕೇವಲ ಪಠ್ಯಪುಸ್ತಕಗಳಿಗೆ ಮಕ್ಕಳ ಕಲಿಕೆಯನ್ನು ಸೀಮಿತಗೊಳಿಸದೆ, ವಾಸ್ತವಿಕ ಜ್ಞಾನ, ತಾರ್ಕಿಕ ಸಾಮರ್ಥ್ಯ ಹೆಚ್ಚಳಕ್ಕೆ ಸೂಕ್ತ ವಾತಾವಣ ಕಲ್ಪಿಸುವಲ್ಲಿ ಶಿಕ್ಷಕಿ ಸುನಂದಾ ಯಶಸ್ವಿಯಾಗಿದ್ದಾರೆ.  ಇವರ ಸಾಧನೆ  ಗುರುತಿಸಿ  ಸಂಘ-ಸಂಸ್ಥೆಗಳು, ಪ್ರಗತಿಪರ ಸ್ವಾಮೀಜಿಗಳು ಹಾಗೂ ಶಿಕ್ಷಣ ಇಲಾಖೆ ಹತ್ತಾರು ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.`ಶಿಕ್ಷಣದ ಸಾರ್ವತ್ರೀಕರಣದ ಗುರಿ ಸಾಧನೆಗಾಗಿ ನಡೆದಿರುವ ಹೊಸ ಪ್ರಯೋಗಗಳಲ್ಲಿ ನಲಿ-ಕಲಿ ವಿಧಾನ/ ಯೋಜನೆಯೂ ಒಂದು. ಈ ವಿಧಾನವು ವಿಶೇಷವಾಗಿ ಬಹುವರ್ಗ ಹಾಗೂ ಬಹು ಹಂತದ ಕಲಿಕಾ ಸನ್ನಿವೇಶದ ನಿರ್ವಹಣೆಯ ಸವಾಲಿಗೆ ಕಾರಣವಾದ ಅದೇ ಅಂಶಗಳನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸಾಧನವನ್ನಾಗಿ ಪರಿವರ್ತಿಸಿಕೊಂಡು ಪರಿಣಾಮಕಾರಿಯಾಗಿ ಬೋಧನೆಯಲ್ಲಿ ತೊಡಗಿಸಿದರೆ ಮಕ್ಕಳ ಸ್ವಯಂಪ್ರೇರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಯಶಸ್ಸು ದೊರಕುತ್ತದೆ ಎಂದು ಸುನಂದಾ ಬದಾಮಿ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry