ನೌಕರರಿಗೆ ವಸತಿಗೃಹ ನಿರ್ಮಿಸಲು ಮಾಲಕರಡ್ಡಿ ಆಗ್ರಹ

7

ನೌಕರರಿಗೆ ವಸತಿಗೃಹ ನಿರ್ಮಿಸಲು ಮಾಲಕರಡ್ಡಿ ಆಗ್ರಹ

Published:
Updated:

ಯಾದಗಿರಿ: ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ವಸತಿಗೆ ಗೃಹ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ತಿಳಿಸಿದ್ದಾರೆ.ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಶಾಸಕ ಡಾ. ಎ.ಬಿ. ಮಾಲಕರಡ್ಡಿಯವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿರುವ ಸಚಿವರು, ಸರ್ಕಾರದಿಂದ ಅಧಿಕಾರಿಗಳ ಹಾಗೂ ನೌಕರರ ವಸತಿ ಸೌಕರ್ಯಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಯಾದಗಿರಿ ಹೊಸ ಜಿಲ್ಲಾ ಕೇಂದ್ರವಾದ ನಂತರ ಸರ್ಕಾರಿ ನೌಕರರ ಸಂಖ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ಹಾಗೂ ನೌಕರರಿಗೆ ಸೂಕ್ತ ವಸತಿ ಸೌಲಭ್ಯವಿಲ್ಲ ಇಲ್ಲವಾದ್ದರಿಂದ ಜಿಲ್ಲೆಯಲ್ಲಿ ವಾಸಿಸದೇ ದೂರದ ಊರುಗಳಿಂದ ಬಂದು ಹೋಗುತ್ತಿದ್ದಾರೆ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತದೆಂಬ ಡಾ. ಮಾಲಕರಡ್ಡಿಯವರ ಕಳವಳ ಸರ್ಕಾರಕ್ಕೆ ಅರ್ಥವಾಗುತ್ತದೆ ಎಂದಿರುವ ಅವರು, ಅನುದಾನ ಲಭ್ಯತೆ ಅನುಸಾರ ಅನುಮೋದನೆಯಾದ ನಂತರ ಟೆಂಡರ್ ಕರೆದು ಕರಾರಿನಂತೆ ನೌಕರರ ವಸತಿಗೆ ಮನೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಎ ದರ್ಜೆ-15, ಬಿ ದರ್ಜೆ-20, ಸಿ ದರ್ಜೆ-50 ಮತ್ತು ಡಿ ದರ್ಜೆ-25 ಮನೆಗಳು ಅಗತ್ಯವಿದ್ದು, ಅನುದಾನ ಲಭ್ಯತೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉದಾಸಿ ತಿಳಿಸಿದ್ದಾರೆ.ನೌಕರರಿಗೆ ವಸತಿ ಗೃಹಗಳಿಲ್ಲದೆ ಸಾರ್ವಜನಿಕರಿಗೆ, ಅದರಲ್ಲೂ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು, ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಡಾ. ಮಾಲಕರಡ್ಡಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry