ನೌಕರರ ಓಲೈಕೆ ಕಸರತ್ತು

7

ನೌಕರರ ಓಲೈಕೆ ಕಸರತ್ತು

Published:
Updated:

ಏಳನೇ ವೇತನ ಆಯೋಗ ರಚಿಸುವುದಾಗಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಕಟಿಸಿದ್ದಾರೆ. ಎಂಬತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ಪಾಲಿಗೆ ಇದು ಬಹು ದೊಡ್ಡ ಉಡುಗೊರೆ.ಮುಂದಿನ ವರ್ಷ ಲೋಕಸಭೆಗೆ ಮತ್ತು ಅದಕ್ಕೂ ಮೊದಲು ಐದು ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನೌಕರ ಸಮುದಾಯದ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೇಂದ್ರ  ಸರ್ಕಾರ ಕೈಹಾಕಿದೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಲಾಗಿದೆ.ಹೊಸ ವೇತನ ಆಯೋಗ ರಚನೆಗೆ ಇನ್ನೂ ಒಂದು ವರ್ಷ ಕಾಲಾವಕಾಶ ಇತ್ತು. ಅವಧಿಗೆ ಮೊದಲೇ ಆಯೋಗ ರಚಿಸುವಂತೆ ನೌಕರ ಸಂಘಟನೆಗಳು ಒತ್ತಾಯಿಸಿರಲಿಲ್ಲ. ಬೊಕ್ಕಸಕ್ಕೆ ಹೊರೆಯಾಗುವ ವೇತನ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿರುವುದು ನೌಕರರ ಮೇಲಿನ ಕಾಳಜಿಯಿಂದಲ್ಲ. ಮತದಾರರೂ ಆಗಿರುವ ಈ ನೌಕರ ಸಮುದಾಯ ತನ್ನ ಪರವಾದ ಸಹಾನುಭೂತಿ ನಿಲುವು ತಾಳಲಿ ಎಂಬ ಒಳಉದ್ದೇಶ ಇಟ್ಟುಕೊಂಡೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ ವೇತನ ಪರಿಷ್ಕರಣೆಗೆ ಮುಂದಾಗಿದೆ.ಹತ್ತು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ವಾಡಿಕೆ. ಅದು ನೌಕರರ ಹಕ್ಕು.  ಆದರೆ ಭ್ರಷ್ಟಾಚಾರದ ಹಗರಣಗಳು, ಕಳಂಕಿತ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರ ಇತ್ಯಾದಿಗಳಿಂದ ಕುಸಿದಿರುವ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ನೌಕರರ ವೇತನ ಪರಿಷ್ಕರಣೆಗೆ ಮುಂದಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹೆಚ್ಚಿನ ವೇತನ, ಭತ್ಯೆ ಇತ್ಯಾದಿಗಳನ್ನು ನೀಡುತ್ತಲೇ ಇದೆ. ಅದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಅಂತರ ಹೆಚ್ಚುತ್ತಲೇ ಇದೆ. ಕೇಂದ್ರದ ವೇತನ ಶ್ರೇಣಿಯನ್ನು ತಮಗೂ ಅನ್ವಯಿಸುವಂತೆ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಲೇ ಇದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು ಎಂಬ ಬೇಡಿಕೆ ನ್ಯಾಯಸಮ್ಮತವಾದರೂ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ವೇತನ ಮತ್ತು ಸೌಲಭ್ಯಗಳನ್ನು ನೀಡುವ ಸಾಮರ್ಥ್ಯ ರಾಜ್ಯ ಸರ್ಕಾರಗಳಿಗಿಲ್ಲ.ವೇತನ ತಾರತಮ್ಯದ ದುಷ್ಪರಿಣಾಮಗಳ ಬಗ್ಗೆ ಕೇಂದ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳ  ಆದಾಯದ ದೊಡ್ಡಪಾಲು ನೌಕರರ ವೇತನ ಮತ್ತು ಆಡಳಿತ ನಿರ್ವಹಣೆಗೆ ವೆಚ್ಚವಾಗುತ್ತಿದೆ. ಬಡವರು ಹಾಗೂ ನಿರ್ಗತಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆ ಸದಾ ಇದ್ದದ್ದೇ. ಇನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ಹಣದ ದೊಡ್ಡ ಪಾಲು ಭ್ರಷ್ಟರ ಕೈಸೇರುತ್ತಿದೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ. ಅಷ್ಟೇ ಅಲ್ಲ; ಸರ್ಕಾರಿ ಆಡಳಿತ ಬಿಗಿ ಕಳೆದುಕೊಂಡಿದೆ. ಅದಕ್ಷತೆ ತಾಂಡವವಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡುವುದರ ಜತೆಗೆ ಅವರಲ್ಲಿ  ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸುವತ್ತಲೂ ಗಮನ ಕೊಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry