ಬುಧವಾರ, ಮಾರ್ಚ್ 3, 2021
26 °C

ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಪ್ರಯತ್ನ ಫಲ ಕೊಡುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಪ್ರಯತ್ನ ಫಲ ಕೊಡುವುದೇ?

ಕೇಂದ್ರ ಸರ್ಕಾರದ ನೌಕರರ ವಾರ್ಷಿಕ ವೇತನ ಬಡ್ತಿ ಇನ್ನು ಮುಂದೆ ಅವರ ಕಾರ್ಯಕ್ಷಮತೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಕಾರ್ಯಕ್ಷಮತೆ ‘ಅತ್ಯುತ್ತಮ’ ಎಂಬ ಪ್ರಮಾಣಪತ್ರ ಇಲ್ಲದೇ ಹೋದರೆ ವೇತನ ಬಡ್ತಿ ದೊರೆಯುವುದಿಲ್ಲ.ಸರ್ಕಾರಿ ನೌಕರರ ಕಾರ್ಯಕ್ಷಮತೆಯ ಗುಣಮಟ್ಟವನ್ನು ಖಾತರಿಪಡಿಸುವುದಕ್ಕೆ ವೇತನದೊಂದಿಗೆ ನೇರ ಸಂಬಂಧವಿರುವ ಮೌಲ್ಯಮಾಪನ ವ್ಯವಸ್ಥೆಯೊಂದಿರಬೇಕು ಎಂಬ ಬಹುಕಾಲದ ಬೇಡಿಕೆಗೆ ದೊರೆತ ಮನ್ನಣೆ ಇದು. ಏಳನೇ ವೇತನ ಆಯೋಗದ ಶಿಫಾರಸುಗಳಲ್ಲಿಯೂ ಇದು ಒಳಗೊಂಡಿತ್ತು. ಸರ್ಕಾರ ಅದನ್ನು ಒಪ್ಪಿಕೊಂಡು ಕಾರ್ಯಗತಗೊಳಿಸಿದೆ. ಸದ್ಯದ ಮಿತಿಗಳಲ್ಲಿ ಇದೊಂದು ಬಹುಮುಖ್ಯ ಮತ್ತು ಸ್ವಾಗತಾರ್ಹ ಹೆಜ್ಜೆ.ಆದರೆ ಸೂಕ್ಷ್ಮ ವಿಶ್ಲೇಷಣೆಗೆ ಹೊರಟರೆ ಇದು ಮತ್ತಷ್ಟು ನಿರುಪಯುಕ್ತ ದಾಖಲೆಗಳನ್ನು ಉತ್ಪಾದಿಸುವ ವ್ಯವಸ್ಥೆಯಾಗಿಯಷ್ಟೇ ಉಳಿಯುವ ಅಪಾಯ ಕಾಣಿಸುತ್ತದೆ. ಸರ್ಕಾರಿ ಆಡಳಿತ ಯಂತ್ರದ ಮಟ್ಟಿಗೆ ‘ಪ್ರಮಾಣಪತ್ರ’ ಎಂಬುದು ಒಂದು ಕಾಗದದ ಹುಲಿ ಮಾತ್ರ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ವೇತನ ಬಡ್ತಿ ಪಡೆಯುವುದಕ್ಕೆ ‘ಕಾರ್ಯಕ್ಷಮತೆ ಉತ್ತಮ’ ಎಂಬ ಪ್ರಮಾಣಪತ್ರ ಪಡೆಯುವುದು ಕಡ್ಡಾಯ.ಇದನ್ನು ‘ಅತ್ಯುತ್ತಮ’ ಎಂದು ಬದಲಾಯಿಸುವುದು ಕಷ್ಟದ ಸಂಗತಿಯೇನೂ ಅಲ್ಲ. ಅಂದರೆ ಸರ್ಕಾರವೆಂಬ ದಾಖಲೆ ಮತ್ತು ಪ್ರಮಾಣ ಪತ್ರಗಳ ಉತ್ಪಾದನಾ ಕಾರ್ಖಾನೆಗೆ ಹೊಸತೊಂದು ಪದಗುಚ್ಛ ಸೇರ್ಪಡೆಯಾಗುತ್ತಿದೆಯೇ ಹೊರತು ವ್ಯವಸ್ಥೆಯಲ್ಲಿ ಆಮೂಲಾಗ್ರ ಎನ್ನುವಂಥ ಬದಲಾವಣೆ ಆಗುವುದಿಲ್ಲ.ನೌಕರಶಾಹಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕೆ ಈ ಬಗೆಯ ‘ಪ್ರಮಾಣಪತ್ರ’ ಆಧಾರಿತ ಕ್ರಮಗಳಿಗಿಂತ ಹೆಚ್ಚು ಪ್ರಾಯೋಗಿಕವಾದ ಸುಧಾರಣೆಗಳಿಗೆ ಮುಂದಾಗುವ ಅಗತ್ಯವಿದೆ. ಉತ್ತರದಾಯಿತ್ವವನ್ನು ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಅಗತ್ಯವಿರುವ ನೀತಿಗಳು ಮತ್ತು ಕಾನೂನುಗಳಿಗೆ ನಮ್ಮಲ್ಲಿ ಕೊರತೆಯಿಲ್ಲ.ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವೇ ಆಗದಂಥ ತೊಂದರೆಗಳು ನಮ್ಮಲ್ಲಿವೆ. ಬಹುಮುಖ್ಯವಾದ ಇಲಾಖೆಗಳಲ್ಲೇ ಅಗತ್ಯ ಮಾನವ ಸಂಪನ್ಮೂಲವಿಲ್ಲ.ಒಂದು ವೇಳೆ ಇದ್ದರೂ ಅಗತ್ಯ ಮೂಲ ಸೌಕರ್ಯಗಳು ಇರುವುದಿಲ್ಲ. ಒಟ್ಟಿನಲ್ಲಿ ನೌಕರರ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕೆ ಅಗತ್ಯವಿರುವ ಒಂದು ವಾತಾವರಣವೇ ಇಲ್ಲಿಲ್ಲ.ಕಾರ್ಯಕ್ಷಮತೆಯ ಗುಣಮಟ್ಟವನ್ನು ಅವಲಂಬಿಸಿ ವೇತನ ಬಡ್ತಿ ನೀಡುವ ನಿಯಮವೇನೋ ಕಾರ್ಯರೂಪಕ್ಕೆ ಬರುತ್ತದೆ. ಆದರೆ ಅದರಿಂದ  ಸಕಾರಾತ್ಮಕ ಪರಿಣಾಮದ ಸಾಧ್ಯತೆ ಪ್ರಶ್ನಾರ್ಹ. ನೌಕರಶಾಹಿಯ ಕಾರ್ಯಕ್ಷಮತೆಯನ್ನು ನಿಜಕ್ಕೂ ಸುಧಾರಿಸುವ ಮನಸ್ಸು ಸರ್ಕಾರಕ್ಕಿದ್ದರೆ ಅದು ಮಾಡಬೇಕಿರುವುದು ಕಾಗದದ ಮೇಲಷ್ಟೇ ಉಳಿಯುವ, ಮತ್ತಷ್ಟು  ಪ್ರಮಾಣ ಪತ್ರಗಳನ್ನು ಉತ್ಪಾದಿಸುವ ನಿಯಮಗಳನ್ನಲ್ಲ.  ‘ಹೊರೆ’ಯಂತೆ ಕಾಣಿಸುವ ನೌಕರಶಾಹಿಯನ್ನು ‘ಮಾನವ ಸಂಪನ್ಮೂಲ’ವಾಗಿ ಬದಲಾಯಿಸುವುದು.ಇದಕ್ಕೆ ನೇಮಕಾತಿ, ತರಬೇತಿ ಮತ್ತು ಸೇವಾ ಅವಧಿಯಲ್ಲಿ ಕಾರ್ಯಕ್ಷಮತೆಯ ಮೌಲ್ಯಮಾಪನ ಎಂಬ ಮೂರು ಹಂತದ ಕ್ರಮಗಳ ಅಗತ್ಯವಿದೆ. ಮೊದಲೆರಡನ್ನೂ ಮರೆತು ಕೊನೆಯದನ್ನು ಮಾತ್ರ ಕಾರ್ಯರೂಪಕ್ಕೆ ತರುವುದು ಕೇವಲ ಕಣ್ಣೊರೆಸುವ ತಂತ್ರವಾಗಿಬಿಡುತ್ತದೆ. ಏಳನೇ ವೇತನ ಆಯೋಗದ ಶಿಫಾರಸು ಸರ್ಕಾರಿ ನೌಕರರ ಸಂಬಳವನ್ನು ಪ್ರತಿಷ್ಠಿತ ಖಾಸಗಿ ಕಂಪೆನಿಗಳ ನೌಕರರಿಗೆ ದೊರೆಯುವ ಸಂಬಳದ ಮಟ್ಟಕ್ಕೆ  ಹೆಚ್ಚಿಸಿದೆ.ಸರ್ಕಾರಿ ನೌಕರರು ಮಾನವ ಸಂಪನ್ಮೂಲವಾಗದೆ ಇನ್ನೂ ನೌಕರಶಾಹಿಯಾಗಿ ಉಳಿದಿರುವಾಗಲೇ ಅವರ ಸಂಬಳವನ್ನು ಹೆಚ್ಚಿಸುವ ಕ್ರಮ ವ್ಯವಸ್ಥೆಯೊಳಗೆ ಒಂದು ಬಗೆಯ ಅಪರಾಧಿ ಭಾವವನ್ನು ಹುಟ್ಟುಹಾಕಿದೆ. ಇದನ್ನು ನಿವಾರಿಸಿಕೊಳ್ಳಲು ಸುಲಭದ ಮಾರ್ಗವಾಗಿ ‘ಕಾರ್ಯಕ್ಷಮತೆ’ಯ ಮಾನದಂಡವೊಂದನ್ನು ಮುಂದಿಡಲಾಗಿದೆ.ಇದು  ತೋರುಗಾಣಿಕೆಯ ಕ್ರಮ ಮಾತ್ರ ಎಂದು ಹೇಳಲೇಬೇಕಾಗಿದೆ. ರಾಜಕೀಯ ನಾಯಕತ್ವಕ್ಕೂ ಈಗಿರುವ ನೌಕರಶಾಹಿ ವ್ಯವಸ್ಥೆಗೂ ನಡುವಣ ಸಂಬಂಧ ಹೇಗಿದೆಯೆಂದರೆ ಅದನ್ನು ಬದಲಾಯಿಸುವುದು ಬೇಡವಾಗಿರುವುದು ನೌಕರಶಾಹಿಗಷ್ಟೇ ಅಲ್ಲ.ಪರಿಣಾಮವಾಗಿಯೇ ಈ ಬಗೆಯ ಕಣ್ಣೊರೆಸುವ ತಂತ್ರಗಳಷ್ಟೇ ಹೊಸ ಹೊಸ ಹೆಸರಿನಲ್ಲಿ ಜಾರಿಯಾಗುತ್ತಿರುತ್ತವೆ. ಈಗ ಕೇಂದ್ರದಲ್ಲಿ ಇರುವ ಆಡಳಿತಾರೂಢ ಸರ್ಕಾರಕ್ಕೆ  ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಅವಕಾಶವಿದೆ.  ಸುಧಾರಣೆಯ ಹಾದಿಯಲ್ಲಿ ಈಗ ಇಟ್ಟಿರುವ ಹೆಜ್ಜೆ ಇಲ್ಲಿಗೇ ಕೊನೆಗೊಳ್ಳಬಾರದು.  ನೌಕರಶಾಹಿಯನ್ನು ‘ಮಾನವ ಸಂಪನ್ಮೂಲ’ವಾಗಿ ಪರಿವರ್ತಿಸುವ ಮಹತ್ವದ ಹೆಜ್ಜೆಯಾಗಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.