ನೌಕರರ ಮುಷ್ಕರ; ಬ್ಯಾಂಕ್ ವಹಿವಾಟು ಸ್ಥಗಿತ

ಸೋಮವಾರ, ಮೇ 27, 2019
29 °C

ನೌಕರರ ಮುಷ್ಕರ; ಬ್ಯಾಂಕ್ ವಹಿವಾಟು ಸ್ಥಗಿತ

Published:
Updated:

ಚಿತ್ರದುರ್ಗ: ಕೇಂದ್ರ ಸರ್ಕಾರದ ಬ್ಯಾಂಕಿಂಗ್ ವಿರೋಧಿ ನೀತಿ ವಿರೋಧಿಸಿ ಬುಧವಾರ ನಗರದಲ್ಲೂ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು. ಇದರಿಂದ ಎಲ್ಲ ಬ್ಯಾಂಕ್‌ಗಳು ಮುಚ್ಚಿದ್ದರಿಂದ ಗ್ರಾಹಕರ ವಹಿವಾಟಿಗೆ ತೀವ್ರ ತೊಂದರೆಯಾಯಿತು.ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮುಂಭಾಗದಲ್ಲಿ ಬ್ಯಾಂಕ್ ನೌಕರರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ದೇಶ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಆರ್ಥಿಕ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಹಾಕಿದರು.ಸ್ಟೇಟ್ ಬ್ಯಾಂಕ್ ನೌಕರರ ಸಂಘದ ರಾಜಪ್ಪ, ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ಜೆ.ಎಸ್. ವಿಶ್ವನಾಥ್, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ವಿರೂಪಾಕ್ಷಪ್ಪ, ಸದಾಶಿವ, ವೀರೇಶ್, ದಿವಾಕರ್, ಗಿರೀಶ್, ಎಂ. ಪಾಷಾ, ಎಂ.ಎಸ್. ರಾವ್, ಎಂ.ಎಸ್. ಕಿಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ವಿಶ್ವಬ್ಯಾಂಕ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ತಾಳಕ್ಕೆ ಕುಣಿದು ಕೇಂದ್ರ ಸರ್ಕಾರ ಹೊಸ ಆರ್ಥಿಕ ನೀತಿ ತರಲು ಉದ್ದೇಶಿಸಿರುವುದು ದುರದೃಷ್ಟಕರ ಸಂಗತಿ. ರಾಷ್ಟ್ರೀಕೃತ ಬ್ಯಾಂಕ್‌ಗಳು ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದರೂ, ಹೊಸ ಆರ್ಥಿಕ ನೀತಿ ನೆಪದಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ಮಾಡಿ ಬಂಡವಾಳ ಶಾಹಿಗಳಿಗೆ ಬ್ಯಾಂಕ್‌ಗಳ ಸ್ಥಾಪನೆಗೆ ಅವಕಾಶ ನೀಡಲು ಮುಂದಾಗಿದೆ. ಇದರ ಪರಿಣಾಮ ಸಣ್ಣ ಬ್ಯಾಂಕ್‌ಗಳನ್ನು ಅದರಲ್ಲಿ ವಿಲೀನ ಮಾಡಲು ಹವಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಸಂಪೂರ್ಣ ಆರ್ಥಿಕ ಸೇರ್ಪಡೆ ನೀತಿ ಅಡಿಯಲ್ಲಿ ಹಳ್ಳಿಗಳಲ್ಲಿ ಸಮಂಜಸವಲ್ಲದ ಕಿರು ಶಾಖೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರನ್ನು ವಾಣಿಜ್ಯ ಪ್ರತಿನಿಧಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಯುವಕರನ್ನು ಕಡಿಮೆ ವೇತನದಲ್ಲಿ ದುಡಿಸಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಜತೆಗೆ, ಬ್ಯಾಂಕಿಂಗ್ ಸುಧಾರಣೆ ನೀತಿ ಹೆಸರಿನಲ್ಲಿ ಸರ್ಕಾರ ಖಂಡೇಲವಾಲ ವರದಿಯ ಶಿಫಾರಸುಗಳನ್ನು ಏಕಪಕ್ಷೀಯವಾಗಿ ಜಾರಿಗೆ ತರಲು ಮುಂದಾಗುತ್ತಿದೆ ಎಂದು ಖಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry