ನೌಕರರ ಮುಷ್ಕರ: ಬ್ಯಾಂಕ್ ವಹಿವಾಟು ಸ್ಥಗಿತ

7

ನೌಕರರ ಮುಷ್ಕರ: ಬ್ಯಾಂಕ್ ವಹಿವಾಟು ಸ್ಥಗಿತ

Published:
Updated:
ನೌಕರರ ಮುಷ್ಕರ: ಬ್ಯಾಂಕ್ ವಹಿವಾಟು ಸ್ಥಗಿತ

ನವದೆಹಲಿ(ಪಿಟಿಐ): ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ ಮತ್ತು ಬ್ಯಾಂಕ್‌ಗಳ ವಿಲೀನ ಕ್ರಮ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ 4 ಸಂಘಟನೆಗಳ ನೌಕರರು ಗುರುವಾರ ನಡೆಸಿದ ಮುಷ್ಕರ ದೇಶದಾದ್ಯಂತ ಹಲವು ಬ್ಯಾಂಕ್ ಶಾಖೆಗಳಲ್ಲಿನ ವಹಿವಾಟಿನ ಮೇಲೆ ಪರಿಣಾಮ ಬೀರಿತು.


`ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ'(ಎಐಬಿಇಎ), ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ(ಬಿಇಎಫ್‌ಐ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ(ಎಐಬಿಒಎ) ಮತ್ತು ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಸ್ಥೆ(ಎನ್‌ಯುಬಿಇ) ಸಂಘಟನೆಗಳ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಎಂದು `ಎಐಬಿಇಎ' ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.

 

ನಾಲ್ಕು ಸಂಘಟನೆಗಳು ಪ್ರಬಲವಾಗಿರುವ ಬ್ಯಾಂಕ್‌ಗಳ ಶಾಖೆಗಳಲ್ಲಿ ಗ್ರಾಹಕರ ವಹಿವಾಟು ನಡೆಯಲಿಲ್ಲ. ಬ್ಯಾಂಕಿಂಗ್ ಕಾನೂನು(ತಿದ್ದುಪಡಿ) ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದ ಬೆನ್ನಲ್ಲೇ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದವು.

ಮುಷ್ಕರದ ಪರಿಣಾಮ ವಹಿವಾಟಿನಲ್ಲಿ ವ್ಯತ್ಯಯವಾಗಲಿದೆ ಎಂದು ಇಂಡಿಯನ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್‌ಗಳು ಮುಂಚಿತವಾಗಿಯೇ ಗ್ರಾಹಕರ ಗಮನ ಸೆಳೆದಿದ್ದವು.

 

ಚೆನ್ನೈ ವರದಿ: ವಿವಿಧ ಬ್ಯಾಂಕ್‌ಗಳ 35 ಸಾವಿರ ನೌಕರರು ಪಾಲ್ಗೊಂಡಿದ್ದ ಮುಷ್ಕರ ತಮಿಳುನಾಡಿನಾದ್ಯಂತ ಬ್ಯಾಂಕಿಂಗ್ ಚಟುವಟಿಕೆ ಮೇಲೆ ಗುರುವಾರ ಪರಿಣಾಮ ಬೀರಿತ್ತು. ಚೆನ್ನೈನಲ್ಲಿ 9000 ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಮುಂದಿನ ಹೆಜ್ಜೆಯನ್ನು ಶೀಘ್ರವೇ ನಿರ್ಧರಿಸಲಾಗುವುದು  ಎಂದು ಸಿ.ಎಚ್.ವೆಂಕಟಾಚಲಂ ಹೇಳಿದ್ದಾರೆ.

 

`ರಾಜ್ಯದಲ್ಲಿ ಪೂರ್ಣ ಯಶಸ್ವಿ'

ಪ್ರಜಾವಾಣಿ ವಾರ್ತೆ


ಬೆಂಗಳೂರು: ರಾಜ್ಯದ ವಿವಿಧೆಡೆ ಬ್ಯಾಂಕ್ ಶಾಖೆ ಗಳಲ್ಲಿ 50 ಸಾವಿರ ನೌಕರ ವರ್ಗದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಮುಷ್ಕರ ಯಶಸ್ವಿಯಾಗಿದೆ ಎಂದು `ಎಐಬಿಇಎ' ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ವಸಂತ ರೈ ಹೇಳಿದರು.

 


ರಾಜ್ಯದಲ್ಲಿನ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು 72 ಸಾವಿರ ಸಿಬ್ಬಂದಿ ಇದ್ದಾರೆ. ಮುಷ್ಕರಕ್ಕೆ ಕರೆ ನೀಡಿದ ನಾಲ್ಕು ಸಂಘಟನೆಗಳಲ್ಲಿ 50 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಎಲ್ಲರೂ ಗುರುವಾರದ ಮುಷ್ಕರದಲ್ಲಿ ಭಾಗವಹಿಸಿದ್ದರು ಎಂದು ರೈ `ಪ್ರಜಾವಾಣಿ'ಗೆ ವಿವರಿಸಿದರು.

 


ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಮತ್ತು ಐಎನ್‌ಜಿ ವೈಶ್ಯ ಬ್ಯಾಂಕ್ ಎಲ್ಲ ಸಿಬ್ಬಂದಿ ಹಾಗೂ `ಎನ್‌ಯುಬಿಇ' ಸಂಘಟನೆ ಸದಸ್ಯರಾಗಿರುವ `ಇಂಡಿಯನ್ ಓವರ್‌ಸೀಸ್ ಬ್ಯಾಂಕ್'ನ ಎಲ್ಲರೂ ಮುಷ್ಕರದಲ್ಲಿ ತೊಡಗಿದ್ದರು ಎಂದು ವಿವರ ನೀಡಿದರು.

 


ಬೆಂಗಳೂರಿನಲ್ಲಿ ಐದು ಸಾವಿರ ಬ್ಯಾಂಕ್ ಸಿಬ್ಬಂದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್(ಎಸ್‌ಬಿಎಂ) ಪ್ರಧಾನ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು ಎಂದು ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘಟನೆಯ ಉಪಾಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದರು.

 


ಎಐಬಿಇಎ, ಬಿಇಎಫ್‌ಐ, ಎಐಬಿಒಎ ಮತ್ತು ಎನ್‌ಯುಬಿಇ ಸಂಘಟನೆಗಳ ಸದಸ್ಯರು ಇರುವ ಬ್ಯಾಂಕ್‌ಗಳ ನೌಕರ ವರ್ಗದವರು ಮುಷ್ಕರದಲ್ಲಿದ್ದುದರಿಂದ ಆ ಶಾಖೆಗಳಲ್ಲಿ ನಗದು-ಚೆಕ್ ವಹಿವಾಟು ಸ್ಥಗಿತಗೊಂಡಿತ್ತು ಎಂದರು.

 


ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಭಾರತೀಯ ಮಜ್ದೂರ್ ಸಂಘ ಬೆಂಬಲಿತ `ಎಐಬಿಒಎ'ನ ಸದಸ್ಯರಲ್ಲದ ಅಧಿಕಾರಿ ವರ್ಗದವರು ಮಾತ್ರ ಕಚೇರಿಗೆ ಹಾಜರಾಗಿದ್ದರು ಎಂದರು.

 


ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್‌ನ ಕೆಲವು ಶಾಖೆಗಳಲ್ಲಿ ಅಧಿಕಾರಿಗಳು ಹಾಜರಿದ್ದರು. ಮುಷ್ಕರಕ್ಕೆ ಕರೆ ನೀಡಿದ್ದ ನಾಲ್ಕು ಸಂಘಟನೆಗಳ ಸಂಪರ್ಕದಲ್ಲಿರದ ನೌಕರ ವರ್ಗದವರೂ ಕೆಲವು ಶಾಖೆಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry