`ನೌಕರರ ಮೇಲಿನ ದೌರ್ಜನ್ಯಕ್ಕೆ ಅವಕಾಶ ಇಲ್ಲ'

ಶುಕ್ರವಾರ, ಜೂಲೈ 19, 2019
24 °C
ಸಮುದಾಯ ಭವನ ಉದ್ಘಾಟನೆಯಲ್ಲಿ ಶಾಸಕ ರಘುಮೂರ್ತಿ ಭರವಸೆ

`ನೌಕರರ ಮೇಲಿನ ದೌರ್ಜನ್ಯಕ್ಕೆ ಅವಕಾಶ ಇಲ್ಲ'

Published:
Updated:

ಚಳ್ಳಕೆರೆ: ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಾಗ ಅನೇಕ ಅಡ್ಡಿ ಆತಂಕಗಳು ಬಂದರೂ ಧೃತಿಗೆಡದೆ ಧೈರ್ಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ನೌಕರರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಟೀಕೆ, ನಿಂದನೆ, ಆಪಾದನೆಗಳನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ನೌಕರರು ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು. ತಾಲ್ಲೂಕಿನಲ್ಲಿ ನೌಕರರ ಮೇಲೆ ಯಾವುದೇ ರೀತಿಯ ಹಲ್ಲೆ, ದೌರ್ಜನ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.ಎಲ್ಲಾ ನೌಕರರು ಕೆಟ್ಟವರಲ್ಲ. ಅದೇ ರೀತಿ ಎಲ್ಲಾ ರಾಜಕಾರಣಿಗಳೂ ಕೂಡ ಕೆಟ್ಟವರಲ್ಲ. ಪ್ರತಿಯೊಬ್ಬರಲ್ಲೂ ಗುಣ, ಅವಗುಣಗಳು ಇರುತ್ತವೆ. ಆಡಳಿತ ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಂಡು ಕೆಲಸ ಮಾಡಬೇಕಿದೆ. ನೌಕರರ ಸಮುದಾಯ ಭವನದ ಬಾಕಿ ಇರುವ ಕಾಮಗಾರಿ ಸಂಪೂರ್ಣ ಆಗಲಿಕ್ಕೆ ಅಗತ್ಯ ನೆರವು ನೀಡುವುದಾಗಿ ಹೇಳಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಜೆ.ಜಗದೀಶ್ ಮಾತನಾಡಿ, ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯ ತುರುವನೂರು ಪಿಡಿಒ ಚೈತ್ರಾ ಎಂಬುವರ ಮೇಲೆ ಈಚೆಗೆ ರೈತ ಮುಖಂಡ ಎಂದು ಹೇಳಿಕೊಂಡು ಓಡಾಡುವ ನಾಯಕ ಕಿರುಕುಳ ನೀಡಿದ್ದಕ್ಕೆ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸುವ ಮೂಲಕ ನೌಕರರ ಹಿತ ಕಾಪಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ನೌಕರ ವರ್ಗದ ಮೇಲಿನ ದೌರ್ಜನ್ಯವನ್ನು ಸಂಘ ಸಹಿಸುವುದಿಲ್ಲ ಎಂದರು.ದಿನನಿತ್ಯ ಬೆಲೆ ಏರಿಕೆ ಆಗುತ್ತಿರುವುದರಿಂದ ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಎಂಬ ತಾರತಮ್ಯ ನೀತಿಯನ್ನು ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ, ತಹಶೀಲ್ದಾರ್ ವಿಜಯರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸಣ್ಣಸೂರಮ್ಮ, ಟಿಎಪಿಎಂಸಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪುರಸಭೆ ಸದಸ್ಯ ಪೊಲೀಸ್ ಈರಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಂಘದ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಸಂಘದ ಖಜಾಂಚಿ ಸಿ.ಗುರುಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಜಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry