ಮಂಗಳವಾರ, ಮೇ 11, 2021
19 °C

ನೌಕರರ ವರ್ಗಾವಣೆ: ಪರಿಷ್ಕೃತ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ಮಾರ್ಗಸೂಚಿಗಳನ್ನು ರಚಿಸಿದೆ. ಇದೇ 30ರೊಳಗೆ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.ಹಾರ‌್ನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನ್ವಯ 2001ರ ನವೆಂಬರ್ 22ರಂದು ಹೊರಡಿಸಿರುವ ವರ್ಗಾವಣೆ ಕುರಿತ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿದೆ.ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಸಾರ್ವತ್ರಿಕ ವರ್ಗಾವಣೆಗಳನ್ನು ಪ್ರತಿ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸಬೇಕು. ಈ ಅವಧಿ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ವರ್ಗಾವಣೆ ಅಥವಾ ನಿಯೋಜನೆ ಮಾಡುವಂತಿಲ್ಲ.ಇದುವರೆಗೂ ಆಯಾ ಇಲಾಖೆಯ ಒಟ್ಟು ವೃಂದ ಬಲದ ಶೇ 5ರಷ್ಟು ನೌಕರರ ವರ್ಗಾವಣೆಗೆ ಅವಕಾಶ ಇತ್ತು. ಪರಿಷ್ಕೃತ ಮಾರ್ಗಸೂಚಿಯಲ್ಲಿ ಅದನ್ನು ಶೇ 6ಕ್ಕೆ ಹೆಚ್ಚಿಸಲಾಗಿದೆ.ಗಂಭೀರ ಆರೋಪ, ಇಲಾಖಾ ಅಥವಾ ಕ್ರಿಮಿನಲ್ ವಿಚಾರಣೆ ಎದುರಿಸುವ ನೌಕರರನ್ನು ಸೂಕ್ಷ್ಮ ಹುದ್ದೆ ಅಥವಾ ಕಾರ್ಯಕಾರಿ (ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ನೇಮಿಸಬಾರದು. ತನಿಖೆ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲದಂತಹ ಹುದ್ದೆಗಳಿಗೆ ಅಂತಹ ನೌಕರರನ್ನು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ.ನೌಕರರ ವರ್ಗಾವಣೆ ಸಲುವಾಗಿ ಈ ಹಿಂದೆ ರಚಿಸಲಾಗಿದ್ದ ವೃಂದ ನಿರ್ವಹಣಾ ಪ್ರಾಧಿಕಾರಗಳನ್ನೂ ರದ್ದುಪಡಿಸಲಾಗಿದೆ. ಅವುಗಳ ಬದಲಿಗೆ, ಸಕ್ಷಮ ಪ್ರಾಧಿಕಾರಗಳು ಇನ್ನು ಮುಂದೆ ವರ್ಗಾವಣೆಯ ಜವಾಬ್ದಾರಿ ನಿರ್ವಹಿಸಲಿವೆ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಯಾವುದೇ ಒಂದು ಹುದ್ದೆಗೆ ಒಂದು ಸಂದರ್ಭದಲ್ಲಿ ಮಾಡುವ ನಿಯೋಜನೆಯ ಗರಿಷ್ಠ ಅವಧಿಯು ಐದು ವರ್ಷ ಮಾತ್ರ. ಈ ಅವಧಿ ನಂತರ ಮಾತೃ ಇಲಾಖೆಯಲ್ಲಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಬೇಕು. ಒಬ್ಬ ಸರ್ಕಾರಿ ನೌಕರರನ್ನು ಒಂದೇ ಹುದ್ದೆಗೆ ಪದೇ ಪದೇ ನಿಯೋಜಿಸುವುದನ್ನೂ ನಿಷೇಧಿಸಲಾಗಿದೆ.ಇಲಾಖೆಯಲ್ಲಿನ ಒಂದು ಹುದ್ದೆಯನ್ನು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ತುಂಬಲು ಆ ಇಲಾಖೆಯಲ್ಲಿ ಅರ್ಹ ಅಧಿಕಾರಿಗಳು ಲಭ್ಯ ಇಲ್ಲದಿದ್ದ ಸಂದರ್ಭವನ್ನು ಹೊರತುಪಡಿಸಿ, ಬೇರೆ ಸಂದರ್ಭಗಳಲ್ಲಿ ಆ ಹುದ್ದೆಗೆ ಇನ್ನೊಂದು ಇಲಾಖೆಯ ನೌಕರರನ್ನು ನಿಯೋಜಿಸುವಂತಿಲ್ಲ. ಒಂದು ವೇಳೆ ಈ ರೀತಿಯ ನಿಯೋಜನೆ ಮಾಡಿದರೂ ಪ್ರತಿ ವರ್ಷ ಅದನ್ನು ಪುನರ್‌ಪರಿಶೀಲಿಸಬೇಕು. ಅರ್ಹ ಅಧಿಕಾರಿಗಳು ಲಭ್ಯವಾದ ತಕ್ಷಣ ನಿಯೋಜಿತ ಅಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು ಎಂದು ಉಲ್ಲೇಖಿಸಲಾಗಿದೆ.ಕನಿಷ್ಠ ಅವಧಿ: ಒಂದು ಹುದ್ದೆಯಲ್ಲಿ ಕನಿಷ್ಠ ಮೂರು ವರ್ಷ ಕಾರ್ಯನಿರ್ವಹಿಸದ `ಎ' ಮತ್ತು `ಬಿ' ಗುಂಪಿನ ಅಧಿಕಾರಿಗಳನ್ನು ಸಾಧಾರಣವಾಗಿ ವರ್ಗಾವಣೆ ಮಾಡುವಂತಿಲ್ಲ. `ಸಿ' ಗುಂಪಿನ ನೌಕರರನ್ನು ನಾಲ್ಕು ವರ್ಷಗಳವರೆಗೆ ಹಾಗೂ `ಡಿ' ಗುಂಪಿನ ಸಿಬ್ಬಂದಿಯನ್ನು ಕನಿಷ್ಠ ಏಳು ವರ್ಷಗಳವರೆಗೆ ವರ್ಗಾವಣೆ ಮಾಡುವಂತಿಲ್ಲ ಎಂದು ಆದೇ ಶದಲ್ಲಿ ತಿಳಿಸಲಾಗಿದೆ. ಇದನ್ನು ಬದಲಿಸುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಗಿದೆ.ಸಾಮಾನ್ಯವಾಗಿ ಅವಧಿಪೂರ್ವ ವರ್ಗಾವಣೆಗಳನ್ನು ಮಾಡತಕ್ಕದಲ್ಲ. ಪತಿ-ಪತ್ನಿ ಪ್ರಕರಣದಲ್ಲಿ ಅವಧಿ ಪೂರ್ವ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಕನಿಷ್ಠ ಅವಧಿ ಪೂರ್ಣಗೊಳಿಸಿ, ವರ್ಗಾವಣೆಗೆ ಅರ್ಹ ಇರುವ ಸರ್ಕಾರಿ ನೌಕರನಿಗೆ ನಿವೃತ್ತಿಗೆ ಎರಡು ವರ್ಷಕ್ಕಿಂತ ಕಡಿಮೆ ಸೇವಾವಧಿ ಇದ್ದಲ್ಲಿ ಅಂತಹವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಬಹುದು.ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಪಾರದರ್ಶಕವಾಗಿ ವರ್ಗಾವಣೆಗಳನ್ನು ಮಾಡಬೇಕು. ಕೋರಿಕೆಯ ವರ್ಗಾವಣೆಗಳನ್ನು ಸಾಧ್ಯವಾದಷ್ಟು ಕೌನ್ಸೆಲಿಂಗ್ ಮೂಲಕ ಮಾಡಬೇಕು. ಒಬ್ಬ ಸರ್ಕಾರಿ ನೌಕರ ಒಂದು ನಿರ್ದಿಷ್ಟ ಹುದ್ದೆಯಲ್ಲಿ ಸಲ್ಲಿಸಿರುವ ಸೇವಾವಧಿಯನ್ನು ಪರಿಗಣಿಸಿಯೂ ವರ್ಗಾವಣೆ ಮಾಡಲು ಸಲಹೆ ನೀಡಲಾಗಿದೆ.ಸರ್ಕಾರಿ ನೌಕರರು, ವರ್ಗಾವಣೆಯನ್ನು ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ. ವರ್ಗಾವಣೆ ಕುರಿತು ರಾಜಕೀಯವಾಗಿ ಒತ್ತಡ ತರುವುದನ್ನು ನಿಷೇಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.