ನೌಕರಿಗಾಗಿ ಶಿಕ್ಷಣವೇ?

7

ನೌಕರಿಗಾಗಿ ಶಿಕ್ಷಣವೇ?

Published:
Updated:

ವಿಜಾಪುರದಲ್ಲಿರುವುದು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ. ಇಲ್ಲಿ ಸುಸಜ್ಜಿತವಾದ ಮಹಿಳಾ ಅಧ್ಯಯನ ವಿಭಾಗವಿದ್ದರೂ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿಲ್ಲ. ಎಂ.ಎ. ಮಹಿಳಾ ಅಧ್ಯಯನ ವಿಭಾಗದಲ್ಲಿ ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ 15.ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯ ಸೂಕ್ಷ್ಮತೆಯನ್ನು ಸಮಾಜದಲ್ಲಿ ಬೆಳೆಸುವುದು ಮಹಿಳಾ ಅಧ್ಯಯನದ ಮುಖ್ಯ ಧ್ಯೇಯ. ಪ್ರತ್ಯೇಕವಾಗಿ ಇದರ ಅಧ್ಯಯನಕ್ಕೆ ಹೆಚ್ಚಿನವರು ಆಸಕ್ತಿ ವಹಿಸದಿದ್ದರೂ, ಮಹಿಳಾ ಅಧ್ಯಯನದ ಪ್ರಮುಖ ಅಂಶಗಳನ್ನು ತನ್ನ ಎಲ್ಲ 32 ವಿಭಾಗಗಳ 2,100 ವಿದ್ಯಾರ್ಥಿನಿಯರಿಗೂ ಬೋಧಿಸುತ್ತಿರುವುದು ಮಹಿಳಾ ವಿವಿಯ ಹೆಗ್ಗಳಿಕೆ. ಮಹಿಳಾ ವಿವಿಯೊಂದಿಗೆ ಸಂಲಗ್ನತೆ ಹೊಂದಿರುವ ಮಹಿಳಾ ಪದವಿ ಕಾಲೇಜುಗಳಲ್ಲಿಯೂ ಮಹಿಳಾ ಅಧ್ಯಯನ ವಿಷಯ ಪರಿಚಯಿಸಲಾಗುತ್ತಿದೆ.ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಆರಂಭಗೊಂಡಿದ್ದು 2003ರಲ್ಲಿ. ಪ್ರಥಮ ಹಂತದಲ್ಲಿ ಆರಂಭಿಸಿದ ಆರು ಸ್ನಾತಕೋತ್ತರ ವಿಭಾಗಗಳಲ್ಲಿ ಮಹಿಳಾ ಅಧ್ಯಯನವೂ ಒಂದು. ವಿಶಿಷ್ಟ ಪಠ್ಯಕ್ರಮ, ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ, ಉತ್ತಮ ಗ್ರಂಥಾಲಯ, ಲಾಂಗ್ವೇಜ್‌ ಲ್ಯಾಬ್‌, ಕಂಪ್ಯೂಟರ್‌ ಲ್ಯಾಬ್‌ ಮತ್ತಿತರ ಸೌಲಭ್ಯಗಳಿದ್ದು, ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಲಾಗುತ್ತಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುದಾನವನ್ನೂ ನೀಡುತ್ತಿದೆ.ಪ್ರತಿ ವರ್ಷ 45 ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಅವಕಾಶವಿದೆ. ಈಗ ಈ ವಿಭಾಗದಲ್ಲಿ 15 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮಹಿಳಾ ಅಧ್ಯಯನ ಪೂರೈಸಿದವರಿಗೆ ಸರ್ಕಾರಿ ನೌಕರಿ ದೊರೆಯುವುದಿಲ್ಲ ಎಂಬ ವ್ಯಾಪಕ ಪ್ರಚಾರ, ಅಪಪ್ರಚಾರದಿಂದಾಗಿ 2011–12ನೇ ಶೈಕ್ಷಣಿಕ ಸಾಲಿನಲ್ಲಿ ಈ ವಿಭಾಗಕ್ಕೆ ಒಬ್ಬ ವಿದ್ಯಾರ್ಥಿನಿಯೂ ಪ್ರವೇಶ ಪಡೆದಿರಲಿಲ್ಲ!ಮಹಿಳಾ ವಿವಿಯ ಮಹಿಳಾ ಅಧ್ಯಯನ ವಿಭಾಗದಿಂದ ಈ ವರೆಗೆ 175 ವಿದ್ಯಾರ್ಥಿನಿಯರು ಎಂ.ಎ. (ಮಹಿಳಾ ಅಧ್ಯಯನ) ಪೂರೈಸಿದ್ದಾರೆ. ಅವರಲ್ಲಿ 18 ವಿದ್ಯಾರ್ಥಿನಿಯರು ಇದೇ ವಿವಿಯಲ್ಲಿ ಸಂಶೋಧನೆ (ಪಿಎಚ್‌.ಡಿ.)ಯಲ್ಲಿ ತೊಡಗಿದ್ದು, ಮೂವರು ಪಿಎಚ್‌.ಡಿ. ಪೂರೈಸಿದ್ದಾರೆ. ನಾಲ್ವರು ಎಂ.ಫಿಲ್‌. ಅಧ್ಯಯನದಲ್ಲಿ ತೊಡಗಿದ್ದು, ಇಬ್ಬರು ಎಂ.ಫಿಲ್‌ ಪೂರೈಸಿದ್ದಾರೆ.‘ಮಹಿಳಾ ಅಧ್ಯಯನ ಪೂರೈಸಿದವರಿಗೆ ನೌಕರಿಯ ಕೊರತೆ ಇಲ್ಲ. ನಮ್ಮಲ್ಲಿ ಎಂ.ಎ. ಮಹಿಳಾ ಅಧ್ಯಯನ ಪೂರೈಸಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಒಬ್ಬ ವಿದ್ಯಾರ್ಥಿನಿ ಹೈದರಾಬಾದ್‌ನ ಕೇಂದ್ರೀಯ ವಿದ್ಯಾಲಯದಲ್ಲಿ, ಇನ್ನೊಬ್ಬ ವಿದ್ಯಾರ್ಥಿನಿ ನಮ್ಮ ವಿವಿಯಲ್ಲಿ ಪೂರ್ಣಾವಧಿಯ ಬೋಧಕರಾಗಿ ನೇಮಕ ಹೊಂದಿದ್ದಾರೆ. ಇತರ ಕೋರ್ಸ್‌ ಪೂರೈಸಿದ ಎಲ್ಲರಿಗೂ ನೌಕರಿ ದೊರೆಯುತ್ತದೆ. ನೌಕರಿಯನ್ನೇ ಮಾನದಂಡವಾಗಿ ನೋಡುವ ಬದಲು ಪರಿಪೂರ್ಣ ಮಹಿಳೆಯಾಗಲಿಕ್ಕಾದರೂ ಈ ಕೋರ್ಸ್‌ನ ಅಧ್ಯಯನ ಅವಶ್ಯ’ ಎಂಬುದು ವಿಭಾಗದ ಮುಖ್ಯಸ್ಥ ಡಾ.ಎಂ.ಬಿ. ದಿಲ್‌ಷಾದ್‌ ಅವರ ಅನಿಸಿಕೆ.

ಮಹಿಳಾ ಅಧ್ಯಯನ ಕಡ್ಡಾಯ

ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ವಾಣಿಜ್ಯ ಹೀಗೆ ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ತಮ್ಮ ಕೋರ್ಸ್‌ಗಳ ಜೊತೆಗೆ ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದ ‘ಸ್ತ್ರೀವಾದಿ ನ್ಯಾಯ ಶಾಸ್ತ್ರ’, ‘ಮಹಿಳೆ ಮತ್ತು ಆರೋಗ್ಯ’ ವಿಷಯಗಳನ್ನು ವ್ಯಾಸಂಗ ಮಾಡುವುದು ಕಡ್ಡಾಯ. ತಲಾ 100 ಅಂಕಗಳ ಈ ವಿಷಯಗಳನ್ನು ಪ್ರಥಮ ಹಾಗೂ ದ್ವಿತೀಯ ಸೆಮ್‌ಗಳಲ್ಲಿ ಅವರು ಪೂರೈಸಬೇಕಾಗುತ್ತದೆ. ಈ ವಿಷಯಗಳ ಅಂಕಗಳು ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಯಲ್ಲಿ ಪತ್ಯೇಕವಾಗಿ ಸೇರುತ್ತವೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಈ ತರಹದ ವ್ಯವಸ್ಥೆ ಇರುವುದು ನಮ್ಮಲ್ಲಿ ಮಾತ್ರ. ಆ ಮೂಲಕ ಮಹಿಳಾ ವಿವಿಯ ಮತ್ತು ಮಹಿಳಾ ಅಧ್ಯಯನದ ಧ್ಯೇಯವನ್ನು ನಾವು ಎಲ್ಲ ವಿದ್ಯಾರ್ಥಿನಿಯರಿಗೆ ತಲುಪಿಸುತ್ತಿದ್ದೇವೆ.

–ಡಾ.ಎಂ.ಬಿ. ದಿಲ್‌ಷಾದ್‌

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರು. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ.

ಸ್ವಾಭಿಮಾನ ಹೆಚ್ಚಿಸುವ ಕಾರ್ಯ

ಮಹಿಳಾ ಮನೋವಿಜ್ಞಾನ, ಮಹಿಳೆ ಮತ್ತು ರಾಜಕೀಯ, ಮಹಿಳೆ ಮತ್ತು ಕಾನೂನು, ಮಹಿಳೆ ಮತ್ತು ಪರಿಸರ, ಮಹಿಳೆ ಮತ್ತು ಮಾಧ್ಯಮ, ಮಹಿಳೆ ಮತ್ತು ಆರೋಗ್ಯ... ಹೀಗೆ ನಮ್ಮ ಮಹಿಳಾ ಅಧ್ಯಯನದ ಪಠ್ಯಕ್ರಮ ಮಹಿಳಾ ಸಂಬಂಧಿ ಸಮಗ್ರ ವಿಷಯಗಳನ್ನು ಒಳಗೊಂಡಿದೆ. ಮಹಿಳೆ ಪರಿಪೂರ್ಣವಾಗಿ ರೂಪಗೊಳ್ಳಲು ಬೇಕಿರುವ ಎಲ್ಲ ಮಾಹಿತಿ ಇಲ್ಲಿ ದೊರೆಯುತ್ತದೆ. ಸಾಧಕಿಯರ ಬಗೆಗೆ ಮಾಹಿತಿ ನೀಡಿ ಮಹಿಳೆಯರಿಗೆ ತಮ್ಮ ಸಾಮರ್ಥ್ಯದ ಅರಿವು, ಸ್ವಾಭಿಮಾನ ಹೆಚ್ಚಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ.

–ಡಾ.ಆರ್‌. ಸುನಂದಮ್ಮ. ನಿರ್ದೇಶಕಿ,

ಮಹಿಳಾ ಅಧ್ಯಯನ ಕೇಂದ್ರ. ಮಹಿಳಾ ವಿಶ್ವವಿದ್ಯಾಲಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry