ಸೋಮವಾರ, ಮೇ 17, 2021
28 °C

ನೌಕಾಪಡೆಗೆ ಇಂದು ಹೊಸ ಜಲಾಂತರ್ಗಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ಎರಡು ದಶಕಗಳ ನಂತರ ಭಾರತೀಯ ನೌಕಾಪಡೆಗೆ ರಷ್ಯಾ ಮೂಲದ `ನೆರ್ಪಾ~ ಜಲಾಂತರ್ಗಾಮಿ ಹಡಗು ಸೇರ್ಪಡೆ ಆಗುತ್ತಿದೆ. ಬುಧವಾರ ವಿಧ್ಯುಕ್ತವಾಗಿ ನೌಕಾಪಡೆ ಸೇವೆಗೆ ಉಪಲಬ್ಧವಾಗುವ ಈ ಜಲಾಂತರ್ಗಾಮಿಯು ಪರಮಾಣು ಇಂಧನದಿಂದ ಚಾಲನೆಗೊಳ್ಳುತ್ತದೆ.

ಗುತ್ತಿಗೆ ಆಧಾರದ ಮೇಲೆ ರಷ್ಯಾದಿಂದ ಪಡೆಯಲಾಗಿರುವ `ನೆರ್ಪಾ~ ಜಲಾಂತರ್ಗಾಮಿಗೆ `ಐಎನ್‌ಎಸ್ ಚಕ್ರ~ ಎಂದು ಪುನರ್ನಾಮಕರಣ ಮಾಡಲಾಗಿದ್ದು, ಇದನ್ನು ನೌಕಾಪಡೆಗೆ ಸೇರಿಸಿಕೊಳ್ಳುವ ಕಾರ್ಯಕ್ಕೆ ರಕ್ಷಣಾ ಸಚಿವ ಎ.ಕೆ. ಆಂಟನಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮ ಇಲ್ಲಿನ ಹಡಗು ಕಟ್ಟೆ ಸಂಕೀರ್ಣದಲ್ಲಿ ಜರುಗಲಿದೆ.

`ನೆರ್ಪಾ~ವನ್ನು ಹತ್ತು ವರ್ಷಗಳ ಗುತ್ತಿಗೆ ಕರಾರಿನ ಮೇಲೆ ಪಡೆಯಲಾಗಿದ್ದು, ನೌಕಾಪಡೆಯ ಸಿಬ್ಬಂದಿಗೆ ಪರಮಾಣು ಇಂಧನದಿಂದ ಚಾಲನೆಗೊಳ್ಳುವ ಜಲಾಂತರ್ಗಾಮಿಯ ಬಗ್ಗೆ ತರಬೇತಿ ನೀಡುವ ಉದ್ದೇಶವೂ ಇದೆ.

`ಪರಮಾಣು ಇಂಧನದಿಂದ ಚಾಲಿತ ಈ ಜಲಾಂತರ್ಗಾಮಿ ಸೇರ್ಪಡೆಯಿಂದಾಗಿ ನಮ್ಮ ಸಿಬ್ಬಂದಿ ಹಲವು ತಿಂಗಳ ಕಾಲ ಸಮುದ್ರದಾಳದಲ್ಲೇ ಇರಬಹುದು. ಈ ಮೊದಲು ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿಗಳಲ್ಲಿ ನೌಕಾಪಡೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು. ಆದರೆ ಈ ಹಡಗುಗಳಿಗೆ ಅನೇಕ ತಿಂಗಳುಗಳ ಕಾಲ ಕಡಲಾಳದಲ್ಲಿರುವ ಸಾಮರ್ಥ್ಯ ಇರಲಿಲ್ಲ. ಇವು ನಿಯಮಿತ ಕಾಲಕ್ಕೆ ಕಡಲಾಳದಿಂದ ಮೇಲೆಕ್ಕೆ ಬರಬೇಕಿತ್ತು~ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಈ ಹಿಂದೆ ಕೂಡ ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶಕ್ಕಾಗಿ ರಷ್ಯಾದ `ಚಾರ್ಲಿ ಕ್ಲಾಸ್~ ಜಲಾಂತರ್ಗಾಮಿಯನ್ನು  1988ರಿಂದ ಗುತ್ತಿಗೆ ಪಡೆದು ಚಾಲನೆ ಮಾಡುತ್ತಿತ್ತು. ಈ ಹಡಗು ಸಹ ಪರಮಾಣು ಇಂಧನದಿಂದಲೇ ಚಾಲನೆ ಆಗುತ್ತಿತ್ತು.

ದೇಶೀಯವಾಗಿ ನಿರ್ಮಿಸಲಾದ  `ಐಎನ್‌ಎಸ್ ಅರಿಹಂತ್~ ಜಲಾಂತರ್ಗಾಮಿ ಕೂಡ ಶೀಘ್ರದಲ್ಲೇ ಕಾರ್ಯೋನ್ಮುಖವಾಗಲಿದೆ. ಪರಮಾಣು ಇಂಧನದಿಂದ ಚಾಲನೆಗೊಳ್ಳುವ `ಐಎನ್‌ಎಸ್ ಚಕ್ರ~ ಮತ್ತು `ಐಎನ್‌ಎಸ್ ಅರಿಹಂತ್~ ಜಲಾಂತರ್ಗಾಮಿಗಳು ದೇಶದ ವಿಸ್ತಾರ ಕಡಲಗಡಿಯಲ್ಲಿ ಕಾವಲು ಕಾಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.