ಸೋಮವಾರ, ಜನವರಿ 27, 2020
26 °C

ನ್ಯಾಟೊ ಪಡೆಗೆ ಪಾಕ್ ರಸ್ತೆ ಮುಕ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ನ್ಯಾಟೊ ದಾಳಿಯ ನಂತರ ಕಳೆದ ನವೆಂಬರ್‌ನಿಂದ ಅಮೆರಿಕ ಮತ್ತು ಮಿತ್ರಪಡೆಗಳ ವಾಹನಗಳಿಗೆ ಮುಚ್ಚಲಾಗಿದ್ದ ಗಡಿ ಸಂಪರ್ಕ ರಸ್ತೆಗಳನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಆದರೆ, ಈ ಬಾರಿ ಪ್ರತಿ ವಾಹನದ ಮೇಲೆ ಸಾವಿರ ಡಾಲರ್ ಸುಂಕ ವಿಧಿಸುವ ಅಚ್ಚರಿಯ ನಿರ್ಧಾರ ಕೈಗೊಂಡಿದೆ.ಇದರ ಜೊತೆಗೆ, ಅಮೆರಿಕದ ಸೇನಾ ತರಬೇತುದಾರರು ದೇಶಕ್ಕೆ ಪುನಃ ವಾಪಸ್ ಬರಲು ಸಹ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದ್ದು, ಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅವರು ಇಲ್ಲಿಗೆ ಬರುವ ನಿರೀಕ್ಷೆ ಇದೆ.ಆದರೆ ಪಾಕಿಸ್ತಾನದ ಈ ನಿರ್ಧಾರದ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.`ಉಭಯ ರಾಷ್ಟ್ರಗಳ ನಡುವಿನ ಸೇನಾ ಸಂಬಂಧದ ಬಗ್ಗೆ ಕೈಗೊಳ್ಳುವ ತೀರ್ಮಾನ ಪಾಕಿಸ್ತಾನದ ಬದ್ಧತೆಯನ್ನು ನಿರ್ಧರಿಸಲಿದೆ. ಅದನ್ನು ನಾವು ಗೌರವಿಸುತ್ತೇವೆ~ ಎಂದು ಪೆಂಟಗನ್ ವಕ್ತಾರ ಕ್ಯಾಪ್ಟನ್ ಜಾನ್ ಕಿರ್ಬಿ ತಿಳಿಸಿದ್ದಾರೆ.

ನ್ಯಾಟೊ ಪಡೆ ವಾಹನಗಳಿಂದ ಪಾಕಿಸ್ತಾನ ಮೊದಲು ಯಾವುದೇ ಸುಂಕ ಅಥವಾ ಶುಲ್ಕ ವಸೂಲಿ ಮಾಡುತ್ತಿರಲಿಲ್ಲ. ನ್ಯಾಟೊ ದಾಳಿಯಲ್ಲಿ ತನ್ನ 24 ಯೋಧರನ್ನು ಕಳೆದುಕೊಂಡ ನಂತರದ ಬೆಳವಣಿಗೆಯಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯ ಹದಗೆಟ್ಟಿತ್ತು. ಮಿತ್ರಪಡೆಗಳ ಸೇನಾ ವಾಹನಗಳಿಗೆ ಸಂಪರ್ಕ ಮಾರ್ಗಗಳನ್ನು ಪಾಕಿಸ್ತಾನ ಮುಚ್ಚಿತ್ತು. ಅಲ್ಲದೆ ಶಂಷಿ ವಾಯುನೆಲೆ ತೆರವುಗೊಳಿಸುವಂತೆ ಅಮೆರಿಕದ ಸೈನಿಕರಿಗೆ ಸೂಚಿಸಿತ್ತು.ನ್ಯಾಟೊ ಸರಕು ಸಾಗಣೆ ವಾಹನಗಳಿಗೆ ಶುಲ್ಕ ವಿಧಿಸುವ ಕುರಿತು ಕಂದಾಯ ಮಂಡಳಿಯಿಂದ ಯಾವುದೇ ಪ್ರಸ್ತಾವ ಇಲ್ಲದಿದ್ದರೂ ಸರ್ಕಾರ ಈ ಕುರಿತು ಪರಿಶೀಲಿಸುತ್ತಿದೆ. ರಾಷ್ಟ್ರೀಯ ಸೇನಾ ತಂತ್ರಗಾರಿಕೆ ವಿಭಾಗಕ್ಕೆ ಶುಲ್ಕ ಸಂಗ್ರಹ ಕಾರ್ಯ ವಹಿಸಿಕೊಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.ಕಳೆದ ವರ್ಷ ಸಂಸತ್‌ನ ಒಪ್ಪಿಗೆ ಪಡೆದು ಕಂದಾಯ ಮಂಡಳಿ ಸುಂಕ ವಸೂಲಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಶುಲ್ಕದ ಮೊತ್ತ ಮತ್ತು ಕಾರ್ಯವೈಖರಿ ವಿಧಾನಗಳು ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗಿದೆ. ಮಾಜಿ ಸೇನಾ ಆಡಳಿತಗಾರ ಪರ್ವೇಜ್ ಮುಶರಫ್ ಅವರು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ನಂತರ ನ್ಯಾಟೊ ಪಡೆಗಳ ಯಾವುದೇ ವಾಹನಗಳಿಂದ ಸುಂಕ ಸಂಗ್ರಹಿಸುತ್ತಿರಲಿಲ್ಲ.ಮಾರ್ಗಗಳನ್ನು ಮುಚ್ಚುವ ಮೊದಲು ಪಾಕಿಸ್ತಾನದಿಂದ ಪ್ರತಿ ತಿಂಗಳು ಸುಮಾರು 4 ಸಾವಿರ ಸರಕು ಸಾಗಣೆ ಲಾರಿ ಮತ್ತು ಸಾವಿರ ತೈಲ ಸಾಗಣೆ ಲಾರಿಗಳು ಸಂಚರಿಸುತ್ತಿದ್ದವು. ನ್ಯಾಟೊ ಪಡೆ ವಾಹನಗಳ ಮಿತಿ ಮೀರಿದ ಸಂಚಾರದಿಂದ ಗಡಿಯಲ್ಲಿನ ಕರಾಚಿ-ತೊರ‌್ಕಾಹಾಮ್ ಸಂಪರ್ಕ ರಸ್ತೆ, ಸೇತುವೆ ಮತ್ತು ಇತರ ಮೂಲಸೌಕರ್ಯಗಳು ಹಾಳಾಗಿದ್ದವು ಎಂದು ಸರ್ಕಾರ ಹೇಳಿದೆ.

ಪ್ರತಿಕ್ರಿಯಿಸಿ (+)