ಭಾನುವಾರ, ಮೇ 9, 2021
23 °C

ನ್ಯಾಟೊ ಸರಬರಾಜು ಮಾರ್ಗ: ಪಾಕ್ ಸಂಸತ್ತಿನ ನಿರ್ಣಯಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಆಫ್ಘಾನಿಸ್ತಾನದಲ್ಲಿಯ ನ್ಯಾಟೊ ಪಡೆಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾರ್ಗವನ್ನು ಪುನರಾರಂಭಿಸುವ ನಿರ್ಧಾರದ ಪಾಕಿಸ್ತಾನ ಸಂಸತ್ತಿನ ಗೊತ್ತುವಳಿಯನ್ನು ಎಲ್‌ಇಟಿ ಸ್ಥಾಪಕ ಹಫೀಜ್ ಸಯೀದ್  ಸೇರಿದಂತೆ 40 ಮಂದಿ ಉಗ್ರವಾದಿಗಳು ವಿರೋಧಿಸಿದ್ದು, ತೀವ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.ಪೇಶಾವರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಡೆಪಾ-ಎ-ಪಾಕಿಸ್ತಾನ ಮಂಡಲಿಯ ಮುಖಂಡರು ಸಂಸತ್ತಿನ ಗೊತ್ತುವಳಿಯನ್ನು ವಿರೋಧಿಸುವ ನಿರ್ಧಾರ ಪ್ರಕಟಿಸಿದರು. ಅಪಾಯಕಾರಿ ವಸ್ತುಗಳನ್ನು ಹೊರತುಪಡಿಸಿ ಇತರ ಸರಕುಗಳನ್ನು ಆಫ್ಘಾನಿಸ್ತಾನದಲ್ಲಿಯ ನ್ಯಾಟೊ ಪಡೆಗಳಿಗೆ ಸರಬರಾಜು ಮಾಡುವ ಪಾಕಿಸ್ತಾನದ ಮೂಲಕದ ಮಾರ್ಗವನ್ನು ಪುನಃ ತೆರೆಯಲು ಪಾಕ್ ನಿರ್ಧರಿಸಿದೆ. ಕಳೆದ ವಾರ ಪಾಕಿಸ್ತಾನದ ಜಂಟಿ ಸದನವು ಈ ಸಂಬಂಧ ಗೊತ್ತುವಳಿ ಅಂಗೀಕರಿಸಿದೆ.ಈ ನಿರ್ಧಾರದಿಂದ ವಿದೇಶಿ ಪಡೆಗಳು ಆಫ್ಘಾನಿಸ್ತಾನದಲ್ಲಿ ಇನ್ನಷ್ಟು ಕಾಲ ಉಳಿಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಸಭೆಯಲ್ಲಿ ಮಾತನಾಡಿದ ಸಯೀದ್ ತಿಳಿಸಿದ್ದಾರೆ. ಸಯೀದ್ ಸುಳಿವು ನೀಡಿದವರಿಗೆ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಸಂಸತ್ತಿನ ಈ ಗೊತ್ತುವಳಿಯು ಪಾಕಿಸ್ತಾನ ಜನತೆಯ ಆಶೋತ್ತರಗಳಿಗೆ ವಿರುದ್ಧವಾದುದು ಎಂಬುದನ್ನು ಜಗತ್ತಿಗೆ ತೋರಿಸಿಕೊಡುವುದಾಗಿ  ಸಯೀದ್ ತಿಳಿಸಿದ್ದಾರೆ.

 

ಏಷ್ಯಾದ ಈ ಭಾಗದಲ್ಲಿಯ ಅಸ್ಥಿರತೆ ಹೋಗಬೇಕಾದರೆ ಆಫ್ಘಾನಿಸ್ತಾನದಲ್ಲಿಯ ನ್ಯಾಟೊ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ತಿಳಿಸಿರುವ ಅವರು, ಸಂಸತ್ತಿನ ನಿರ್ಣಯ ವಿರೋಧಿಸಿ ಎಂದಿನಿಂದ ಪ್ರತಿಭಟನೆ ಆರಂಭಿಸಲಾಗುವುದು ಎಂಬುದನ್ನು ತಿಳಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.