ನ್ಯಾಯಕ್ಕಾಗಿ ವಿಶ್ವಸಂಸ್ಥೆಗೆ ಒ್ತಾಯ

7
ಐರ್ಲೆಂಡ್‌ನಲ್ಲಿ ಸವಿತಾ ಸಾವು, ಮಹಿಳಾ ಆಯೋಗದಿಂದ ಪ್ರತಿಭಟನೆ

ನ್ಯಾಯಕ್ಕಾಗಿ ವಿಶ್ವಸಂಸ್ಥೆಗೆ ಒ್ತಾಯ

Published:
Updated:
ನ್ಯಾಯಕ್ಕಾಗಿ ವಿಶ್ವಸಂಸ್ಥೆಗೆ ಒ್ತಾಯ

ಬೆಂಗಳೂರು: ಈಚೆಗೆ ಐರ್ಲೆಂಡ್ ದೇಶದಲ್ಲಿ ಅಮಾನವೀಯವಾಗಿ ಸಾವಿಗೀಡಾದ ಸವಿತಾ ಹಾಲಪ್ಪನವರ ಪ್ರಕರಣಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ವಿಶ್ವಸಂಸ್ಥೆಯನ್ನು ಒತ್ತಾಯಿಸಿ ಸವಿತಾಳ ಪೋಷಕರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸೇರಿದಂತೆ ವಿವಿಧ ಮಹಿಳಾ ಪರ ಚಿಂತಕರು, ವಕೀಲರು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಪ್ರತಿಭಟನಾ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸವಿತಾ ಅವರ ತಂದೆ ಅಂದಾನಪ್ಪ ಯಾಳಗಿ, `ನನ್ನ ಮಗಳು ಇನ್ನೂ ಸಣ್ಣಾಕಿ, ಅವಳನ್ನು ಕಳೆದುಕೊಂಡು ನಾನು ಮತ್ತು ನನ್ನ ಹೆಂಡತಿ ಅನಾಥರಾಗಿದ್ದೇವೆ. ಅವಳು ಸಾಯುವ ಮೂರು ದಿನದ ಮುನ್ನ ನಾವು ಭಾರತಕ್ಕೆ ಹಿಂತಿರುಗಿದ್ದೆವು. ಅವಳ ಸಾವು ನಮಗೆ ಅಘಾತ ಉಂಟುಮಾಡಿದೆ' ಎಂದು ಕಂಬನಿ ಮಿಡಿದರು.`ಅಳಿಯ ಐರ್ಲೆಂಡ್‌ನಲ್ಲೇ ಇದ್ದುಕೊಂಡು ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಐರ್ಲೆಂಡ್‌ನ ಆಸ್ಪತ್ರೆಯ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಯುರೋಪಿಯನ್ ನ್ಯಾಯಾಲಯದಲ್ಲಿ ಪ್ರಕರಣದ ಸಂಬಂಧ ಮೊಕದ್ದಮೆ ದಾಖಲಾಗಿದೆ. ಮಗಳಂತೂ ವಾಪಸ್ಸು ಬರಲಾರಳು, ಆದರೆ ಇಂತಹ ಸ್ಥಿತಿ ಯಾವ ಹೆಣ್ಣು ಮಗುವಿಗೂ ಬರವುದು ಬೇಡ ಎಂಬ ಕಳಕಳಿಯಿಂದಲೇ ಹೋರಾಟ ಪ್ರಾರಂಭಿಸಿದ್ದೇವೆ' ಎಂದು ತಿಳಿಸಿದರು.`ಈ ದೇಶದ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿವೆ. ಹೆರಿಗೆಯಾದ ತಕ್ಷಣವೇ ಭಾರತಕ್ಕೆ ಮರುಳುತ್ತೇನೆ' ಎಂದು ಮಗಳು ತಿಳಿಸಿದ್ದಳು. ನವೆಂಬರ್‌ನಲ್ಲಿ ಐರ್ಲೆಂಡ್‌ಗೆ ಹೋಗಿದ್ದಾಗ ಕಾರಿನಲ್ಲಿ ಕೂರಿಸಿಕೊಂಡು ಇಡೀ ದೇಶವನ್ನು ತೋರಿಸಿದ್ದಳು.ಸದಾ ಪುಟಿಯುವ ಚಿಲುಮೆಯಂತಿದ್ದ ಮಗಳನ್ನು ಕಳೆದುಕೊಂಡು ಬದುಕು ಬರಡಾಗಿದೆ.  ನಮಗಾಗಿರುವ ಅನ್ಯಾಯಕ್ಕೆ ಉಭಯ ದೇಶಗಳು ಬೆಂಬಲ ನೀಡಿವೆ. ಆದರೆ ಅಲ್ಲಿನ ಆಸ್ಪತ್ರೆಯಲ್ಲಿ ಸಾರ್ವಜನಿಕ ವಿಚಾರಣೆಗೆ ಅವಕಾಶ ನೀಡಿಲ್ಲ. ಆದರೆ, ಈ ಹೋರಾಟ ಮುಗಿಯುವುದಿಲ್ಲ' ಎಂದು ಹೇಳಿದರು.ಸವಿತಾ ಅವರ ತಾಯಿ ಅಕ್ಕಮಹಾದೇವಿ ಅಂದಾನಪ್ಪ ಮಾತನಾಡಿ, `ಮಾರ್ಚ್ 31ಕ್ಕೆ ಹೆರಿಗೆಗೆ ದಿನ ನಿಗದಿಯಾಗಿತ್ತು. 15ಕ್ಕೆ ಮತ್ತೆ ಐರ್ಲೆಂಡ್‌ಗೆ ಮರಳುವುದಾಗಿ ಮಗಳಿಗೆ ಭರವಸೆ ನೀಡಿದ್ದೆ. ಬರುವಾಗ ಅವಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ತರುವುದಾಗಿ ತಿಳಿಸಿದ್ದೆ. ಆದರೆ ಇವೆಲ್ಲ ಇನ್ನೆಲ್ಲಿ, ಅವಳು ಇನ್ನು ಬರೀ ಕನಸು' ಎಂದು ನಿಟ್ಟುಸಿರು ಬಿಟ್ಟರು.`ಗರ್ಭಪಾತ ಮಾಡದಿದ್ದರೆ ತಾನು ಉಳಿಯುವುದಿಲ್ಲ ಎಂಬುದನ್ನು ಸವಿತಾ ವೈದ್ಯರಿಗೆ ವಿವರಿಸಿ ಹೇಳಿದ್ದಳು. ಆದರೆ ಗರ್ಭಪಾತ ನಿಷೇಧದ ಕಾಯ್ದೆಯನ್ನು ಸಮರ್ಪಕವಾಗಿ ತಿಳಿಸದ ವೈದ್ಯರು ಮಗುವಿನ ಪ್ರಾಣ ಹೋಗುವವರೆಗೂ, ಮಗಳ ದೇಹ ವಿಷಗಟ್ಟುವವರೆಗೂ ಸುಮ್ಮನಾಗಿ, ನಂತರ ಕೈಚೆಲ್ಲಿದ್ದಾರೆ. ಧರ್ಮಾಂಧತೆಯಲ್ಲಿ ಮುಳುಗಿದವರ ನಡುವೆ ನನ್ನ ಮಗಳು ಅನ್ಯಾಯವಾಗಿ ಪ್ರಾಣಬಿಟ್ಟಳು' ಎಂದು ಕಣ್ಣೀರು ಹಾಕಿದರು.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ,    `ವಿಶ್ವದಾದ್ಯಂತ ನೆಲೆಸಿರುವ ಭಾರತೀಯ ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದಕ್ಕೆ ಸೂಕ್ತ ವೇದಿಕೆ ಒದಗಿಸಬೇಕು ಮತ್ತು ಅನ್ಯಾಯದ ವಿರುದ್ಧ ಶಿಕ್ಷೆ ನೀಡಲು ಸಮರ್ಪಕ ಕಾಯ್ದೆಯೊಂದು ಜಾರಿಯಾಗುವ ಬಗ್ಗೆ ವಿಶ್ವಸಂಸ್ಥೆಗೆ ಪತ್ರ ಬರೆಯಲಾಗುವುದು' ಎಂದು ತಿಳಿಸಿದರು.ಅಂತರರಾಷ್ಟ್ರೀಯ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಕೆ.ಶೀಲಾ ಅನೀಶ್, `ವಿವಿಧ ಕಾರಣಗಳಿಗಾಗಿ ಗರ್ಭಪಾತ ಮಾಡಿಸಿಕೊಳ್ಳಲು ಏಳು ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರು ಐರ್ಲೆಂಡ್‌ನಿಂದ ಇಂಗ್ಲೆಂಡ್‌ಗೆ ತೆರಳುತ್ತಾರೆ. ಈ ಅಂಕಿ ಅಂಶಗಳನ್ನು ಲೆಕ್ಕ ಹಾಕಿದರೆ ಈ ದೇಶದ ಹೆಣ್ಣುಮಕ್ಕಳ ಸ್ಥಿತಿಯೇನೆಂಬುದು ತಿಳಿಯುತ್ತದೆ' ಎಂದು ಹೇಳಿದರು.ಕಾನೂನು ಹೋರಾಟ ಮುಂದುವರಿಕೆ

`ಮಗಳಿಗೆ ನ್ಯಾಯ ದೊರಕಿಸಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಈಚೆಗೆಷ್ಟೆ ಕೇಂದ್ರ ಸಚಿವ ವಯಲಾರ್ ರವಿ ಅವರು ಐರಿಷ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಪತ್ರದ ಪ್ರತಿಯನ್ನು ನನಗೆ ಕಳುಹಿಸಿದ್ದಾರೆ' ಎಂದು ಅಂದಾನಪ್ಪ ಯಾಳಗಿ ತಿಳಿಸಿದರು.ಕಾರ್ಯಕ್ರಮದ ನಂತರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ಈ ಪ್ರಕರಣ ದೇಶವ್ಯಾಪಿ ಗಮನ ಸೆಳೆದು ಐರಿಷ್ ಸರ್ಕಾರ ಗರ್ಭಪಾತ ನಿಷೇಧದಂತಹ ಅನಿಷ್ಟ ಕಾಯ್ದೆಯನ್ನು ಕಿತ್ತೊಗೆದು, ಹಲವು ಹೆಣ್ಣುಮಕ್ಕಳ ಜೀವವನ್ನು ಉಳಿಸಬೇಕು. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟ ಕಾನೂನಿನ ಹೋರಾಟ ಮುಂದುವರೆಯಲಿದೆ' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry