ಶನಿವಾರ, ಮೇ 21, 2022
27 °C

ನ್ಯಾಯಕ್ಕಾಗಿ ಸರ್ಕಾರಕ್ಕೆ ಮೊರೆ ಹೋದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಓರಿಯಂಟ್ ಸಿಮೆಂಟ್ ಕಂಪೆನಿಯು ಪ್ರತಿ ಎಕರೆ ಭೂಮಿಗೆ ಕೇವಲ ರೂ, 3.50 ಲಕ್ಷ ಬೆಲೆ ನೀಡಿ ಭೂಮಿ ಖರೀದಿಸುತ್ತಿದೆ. ಜಿಲ್ಲಾಧಿಕಾರಿ ರೈತರ ಒಪ್ಪಿಗೆ ಪಡೆಯದೆ ಸರ್ಕಾರಕ್ಕೆ ಕಂಪೆನಿ ಪರವಾಗಿ ವರದಿ ನೀಡಿದ್ದಾರೆ. ಆದ್ದರಿಂದ ನಮಗೆ ಜಿಲ್ಲಾಡಳಿತ ಮತ್ತು ಕಂಪೆನಿಯಿಂದ ಭಾರಿ ಹಾನಿಯಾಗುವಂತಾಗಿದೆ. ನ್ಯಾಯ ಒದಗಿಸಿಕೊಡಬೇಕು ಎಂದು ತಾಲ್ಲೂಕಿನ ಇಟಗಾ ಗ್ರಾಮದ ರೈತರು ಸರ್ಕಾರದ ಮೊರೆ ಹೋಗಿದ್ದಾರೆ.ಓರಿಯಂಟ್ ಕಂಪೆನಿಯು ಇಲ್ಲಿನ ರೈತರಿಂದ ಭೂಮಿ ಖರೀದಿಗೆ ಸರ್ಕಾರದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಥಳ ಪರಿಶೀಲನೆ ಮಾಡಿ, ರೈತರು ಒಪ್ಪುತ್ತಾರೋ ಇಲ್ಲವೋ ಎಂದು ವರದಿ ಕೇಳಿದ್ದಾರೆ. ಆದರೆ, ಜಿಲ್ಲಾಧಿಕಾರಿ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಅವರ ವರದಿ ಆಧರಿಸಿ ಅನುಮತಿ ನೀಡಲು ಸರ್ಕಾರಕ್ಕೆ ಪತ್ರ ಬರೆದು ರೈತರನ್ನು ಕಡೆಗಣಿಸಿದ್ದಾರೆ ಎಂದು ರೈತರು ನೀಡಿರುವ ದೂರಿನಲ್ಲಿ ನೇರವಾಗಿ ಆರೋಪಿಸಿದ್ದಾರೆ.ಜಿಲ್ಲಾಧಿಕಾರಿ ಪತ್ರದ ಪ್ರಕಾರ ಸೇಡಂ ಸಹಾಯಕ ಆಯುಕ್ತರು ಮತ್ತು ಇಲ್ಲಿನ ತಹಸೀಲ್ದಾರರು ಖುದ್ದಾಗಿ ಗ್ರಾಮಕ್ಕೆ ಬರದೆ ಕಂದಾಯ ನಿರೀಕ್ಷಕರ ವರದಿ ಪಡೆದು ರೈತ ವಿರೋಧಿ ನೀತಿ ಅನುಸರಿಸಿದ್ದಾರೆ. ಎಲ್ಲೋ ಕುಳಿತು ಪಂಚನಾಮೆ ಸಿದ್ದಪಡಿಸಿದ ಕಂದಾಯ ನಿರೀಕ್ಷಕರ ವರದಿ ಆಧಾರ ಮಾಡಿಕೊಂಡು ರೈತರಿಗೆ ಮೋಸ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ದೂರಿದ್ದಾರೆ.ಇಟಗಾ ಮತ್ತು ಮೊಗಲಾ ಗ್ರಾಮದ ರೈತರ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಚಿನ್ನಮಳ್ಳಿ, ಉಪಾಧ್ಯಕ್ಷರಾದ ಶರಣಗೌಡ ಮೊಗಲಾ, ಮಹಾದೇವ ಡಿಗ್ಗಿ, ಶಿವರಾಯ ಡಿಗ್ಗಿ, ಪ್ರಧಾನ ಕಾರ್ಯದರ್ಶಿ ಭೀಮಸಿಂಗ್ ಚವ್ಹಾಣ್, ಸಹ ಕಾರ್ಯದರ್ಶಿ ನಾಗೇಂದ್ರಪ್ಪ ಡಿಗ್ಗಿ, ಖಜಾಂಚಿ ಮಲ್ಲೇಶಿ ಬಡಿಗೇರ ನೇತೃತ್ವದಲ್ಲಿ ಸುಮಾರು 50 ರೈತರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉದ್ಯೋಗ ಮಿತ್ರ, ಕೈಗಾರಿಕೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರತಿ ಎಕರೆಗೆ ರೂ, 9 ಲಕ್ಷ ಬೆಲೆ ನೀಡಬೇಕು, ಭೂಮಿ ನೀಡಿದ ರೈತ ಕುಟುಂಬಕ್ಕೆ ಕಾಯಂ ನೌಕರಿ ಕೊಡಬೇಕು ಹಾಗೂ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ರೈತರೊಂದಿಗೆ ಒಪ್ಪಂದ ಮಾಡಿಸಬೇಕು. ರೈತರ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.