ಭಾನುವಾರ, ಮೇ 16, 2021
27 °C

ನ್ಯಾಯದಾನದ ವಿಕೇಂದ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ತರ ಕರ್ನಾಟಕದ ಜನರಲ್ಲಿ ಮುಗುಳ್ನಗೆ ಮೂಡಿಸುವ ನಿರ್ಧಾರವೊಂದನ್ನು ಕೇಂದ್ರದ ಯು.ಪಿ.ಎ ಸರ್ಕಾರ ಪ್ರಕಟಿಸಿದೆ. ಧಾರವಾಡ ಮತ್ತು ಗುಲ್ಬರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿ, ಈ ಪ್ರದೇಶದ ಜನರ ಮತ್ತೊಂದು ಪ್ರಮುಖ ಬೇಡಿಕೆಯನ್ನು ಈಡೇರಿಸಿದೆ.ರಾಜ್ಯ ವಿಧಾನಸಭಾ ಚುನಾವಣೆಗೂ ಮೊದಲು ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಉಡುಗೊರೆ ನೀಡಿದ ಯುಪಿಎ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುಕ್ಕಾಣಿ ಹಿಡಿಯುತ್ತಲೇ ಇನ್ನೊಂದು ಕೊಡುಗೆ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಗುಮಾನಿ ಹೊರತಾಗಿಯೂ ಇದು ಸ್ವಾಗತಾರ್ಹ ಕ್ರಮ. ಈ ಎರಡೂ ಸಂಚಾರಿ ಪೀಠಗಳು 2008ರ ಜುಲೈನಲ್ಲಿ ಕಾರ್ಯ ಆರಂಭಿಸಿವೆ. ಈ ಪೀಠಗಳು ಕಾಯಂ ಸ್ವರೂಪ ಪಡೆಯುವುದರಿಂದ ಈ ಪ್ರದೇಶದ ಸಿವಿಲ್, ಕ್ರಿಮಿನಲ್ ಒಳಗೊಂಡಂತೆ ಎಲ್ಲ ಬಗೆಯ ದಾವೆಗಳು ತ್ವರಿತವಾಗಿ ವಿಲೇವಾರಿ ಆಗಲಿವೆ.ಸಂಚಾರಿ ಪೀಠದಲ್ಲಿ ಕಾಯಂ ನ್ಯಾಯಮೂರ್ತಿಗಳು ಇರುವುದಿಲ್ಲ. ಹೈಕೋರ್ಟ್‌ನಿಂದ ನಿಯೋಜಿತಗೊಂಡ ನ್ಯಾಯಮೂರ್ತಿಗಳು ಸರದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪೀಠ ಕಾಯಂ ಆಗುವುದರಿಂದ ಕಾಯಂ ನ್ಯಾಯಮೂರ್ತಿಗಳ ನೇಮಕವೂ ಸಾಧ್ಯವಾಗಲಿದೆ. ನ್ಯಾಯಮೂರ್ತಿಗಳು ಅದೇ ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸುತ್ತಾರೆ. ವ್ಯಾಜ್ಯಗಳ ವಿಲೇವಾರಿ ಮತ್ತಷ್ಟು ತ್ವರಿತಗೊಳ್ಳಲಿದೆ.ನ್ಯಾಯಮೂರ್ತಿಗಳ ಸಂಖ್ಯೆಯೂ ಅಗತ್ಯಕ್ಕೆ ತಕ್ಕಂತೆ ಹೆಚ್ಚುವ ಸಂಭವ ಇದೆ. ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳ ವಿಚಾರಣೆಗೆ ಪ್ರತ್ಯೇಕ ಪೀಠಗಳ ರಚನೆ ಆಗಲಿದೆ ಎಂಬುದು ಹಿರಿಯ ವಕೀಲರ ಅಭಿಮತ. ಕಂಪೆನಿ ವ್ಯವಹಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲು ಸಂಚಾರಿ ಪೀಠ ವ್ಯವಸ್ಥೆಯಲ್ಲಿ ಅವಕಾಶ ಇರಲಿಲ್ಲ. ಕಾಯಂ ಪೀಠ ಸ್ಥಾಪನೆಯಿಂದ ಈ ಎಲ್ಲ ಅನುಕೂಲಗಳು ಗುಲ್ಬರ್ಗ ಮತ್ತು ಧಾರವಾಡಕ್ಕೆ ಒದಗಿಬರಲಿವೆ.ಸಂಚಾರಿ ಪೀಠವಾದ ಕಾರಣ ಇಲ್ಲಿ ವಾದ ಮಂಡಿಸುವ ವಕೀಲರಿಗೆ ಹಿರಿತನವಿದ್ದರೂ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳಿಗೆ ನೇಮಕ ಮಾಡಲು ಈವರೆಗೆ ಪರಿಗಣಿಸುತ್ತಿರಲಿಲ್ಲ. ಪೀಠ ಕಾಯಂ ಆಗುವುದರಿಂದ ಅವರೂ ಅರ್ಹತೆ ಗಳಿಸಲಿದ್ದಾರೆ. ಭಾಗಶಃ ನ್ಯಾಯಾಂಗ ಅಧಿಕಾರವುಳ್ಳ ವಿವಿಧ ಮೇಲ್ಮನವಿ ಪ್ರಾಧಿಕಾರಗಳು ಹಾಗೂ ನ್ಯಾಯಮಂಡಳಿಗಳ ಪೀಠಕೂಡ ಹೈಕೋರ್ಟ್ ಕಾಯಂ ಪೀಠ ಇರುವ ಸ್ಥಳದಲ್ಲೇ ಸ್ಥಾಪನೆಗೊಂಡರೆ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣ ಪ್ರಕ್ರಿಯೆ ಮತ್ತಷ್ಟು ಅರ್ಥಪೂರ್ಣವಾಗಲಿದೆ.

ಉತ್ತರ ಕರ್ನಾಟಕದ ಜನರು, ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣಗಳ ವಿಚಾರಣೆ ಮತ್ತು ಸಂಬಂಧಿತ ವಿಚಾರಗಳಿಗೆ ದೂರದ ಬೆಂಗಳೂರಿಗೆ ಬರಬೇಕಿತ್ತು. ಹಲವು ವರ್ಷಗಳ ಹೋರಾಟದ ಫಲವಾಗಿ ದಕ್ಕಿದ ಸಂಚಾರಿ ಪೀಠಗಳು ಈಗ ಕಾಯಂ ಪೀಠಗಳಾಗಿ ಪರಿವರ್ತನೆ ಆಗಲಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.