ನ್ಯಾಯದೇವತೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದಾಳೆ

7

ನ್ಯಾಯದೇವತೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದಾಳೆ

Published:
Updated:

ದೇಶದ ಜನಸಾಮಾನ್ಯರು ಇನ್ನೂ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು ಎಂದರೆ ನ್ಯಾಯಮೂರ್ತಿಗಳು ತಾವು ನಿರ್ದಿಷ್ಟ ಪ್ರಕರಣದಿಂದ ಹಿಂದೆ ಸರಿಯಲು ಕಾರಣವಾದ ಅಂಶಗಳನ್ನು ಜನರಿಗೆ ತಿಳಿಸಬೇಕು.

ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ಕೋರ್ಟ್‌ ಒಂದರಲ್ಲಿ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಂ.ಹಿದಾಯತ್‌ ಉಲ್ಲಾ ಹಾಗೂ ಗ್ರಿಲ್ಸ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು.ವಿಚಾರಣೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಸಂಬಂಧಪಟ್ಟ ವಕೀಲರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಆದ್ದರಿಂದ ಆ ಪ್ರಕರಣವನ್ನು ಅಮಾನತು ಮಾಡುವುದಾಗಿ ಗ್ರಿಲ್ಸ್‌ ಅವರು ಘೋಷಿಸಿ, ಕಡತಕ್ಕೆ ಸಹಿ ಮಾಡಿ, ಹಿದಾಯತ್‌ ಉಲ್ಲಾ ಅವರಿಗೆ ನೀಡಿದರು. ಅಷ್ಟರಲ್ಲೇ ವಕೀಲರು ಕಲಾಪಕ್ಕೆ ಹಾಜರಾದರು. ತಡವಾಗಿ ಹಾಜರಾದ ವಕೀಲರ ಕ್ರಮದ ಬಗ್ಗೆ ಗ್ರಿಲ್ಸ್‌ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಪ್ರಕರಣ ಅಮಾನತುಗೊಳಿಸಲು ಒಪ್ಪದ ಹಿದಾಯತ್‌ ಉಲ್ಲಾ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದರು.ಅದಾಗಲೇ, ಪ್ರಕರಣವನ್ನು ಅಮಾನತಿನಲ್ಲಿ ಇಡುವ ನಿರ್ಧಾರ ಕೈಗೊಂಡಿದ್ದ ಗ್ರಿಲ್ಸ್‌, ಮುಂದಿನ ವಿಚಾರಣೆಯನ್ನು ನಡೆಸುವುದಕ್ಕೆ ನಿರಾಕರಿಸಿ ಹಿಂದೆ ಸರಿದರು.ಇದೊಂದು ಅತ್ಯಂತ ಸೂಕ್ಷ್ಮವಾದ ಪ್ರಕರಣ. ತಾವು, ವಿಚಾರಣೆಯನ್ನೇ ಅಮಾನತಿ­ನಲ್ಲಿಡುವ ನಿರ್ಧಾರ ಕೈಗೊಂಡಿದ್ದರಿಂದ, ತಮ್ಮ ನೇತೃತ್ವದಲ್ಲಿ ನಡೆಯುವ ವಿಚಾರಣೆ ಸಮಯದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಲು ಅಸಾಧ್ಯ ಎಂದು ತಿಳಿದು,  ಅವರು ಸೂಕ್ತ ನಿರ್ಧಾರವನ್ನೇ ಕೈಗೊಂಡಿದ್ದರು. ತಾವು ಹಿಂದೆ ಸರಿಯುವುದಕ್ಕೆ ಕಾರಣವಾದ ಅಂಶವನ್ನು ಹಿದಾಯತ್‌ ಉಲ್ಲಾ ಅವರಿಗೂ ತಿಳಿಸಿದ್ದರು. ಹಾಗಾಗಿ, ಇಲ್ಲಿ ಆ ನ್ಯಾಯಮೂರ್ತಿ ಅವರನ್ನು ಸಂಶಯದಿಂದ ಕಾಣುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ಇದೇ ಸಂಪ್ರದಾಯ ಎಲ್ಲ ಪ್ರಕರಣಗಳಲ್ಲೂ ರೂಢಿಯಲ್ಲಿ ಬರಬೇಕು. ಆದರೆ, ಕೆಲವು ಪ್ರಕರಣಗಳಲ್ಲಿ ಹಿಂದೆ ಸರಿಯುವ ನ್ಯಾಯಮೂರ್ತಿಗಳು ತಮ್ಮ ನಿರ್ಧಾರಕ್ಕೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸುವುದೇ ಇಲ್ಲ. ಆಧುನಿಕ ಜಗತ್ತು ಸಾಮಾಜಿಕ ಜಾಲತಾಣಗಳ ಜಗತ್ತು. ವಿಚಾರಣೆ ಎದುರಿಸುತ್ತಿರುವವರು ನ್ಯಾಯಮೂರ್ತಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಹೊಂದಿರಬಹುದು. ಆದರೆ, ಅದೇ ಕಾರಣವನ್ನಿಟ್ಟುಕೊಂಡು ವಿಚಾರಣೆಯಿಂದ ಹಿಂದೆ ಸರಿಯುತ್ತಾ ಹೋದರೆ ನ್ಯಾಯದಾನ ವ್ಯವಸ್ಥೆ ಬೇರೆಯದೇ ಆದ ಸ್ವರೂಪ ಪಡೆದುಕೊಂಡರೂ ಅಚ್ಚರಿಯಿಲ್ಲ.ನ್ಯಾಯದೇವತೆ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡಿದ್ದಾಳೆ. ಕೋರ್ಟ್‌ನ ಕಟಕಟೆಯಲ್ಲಿ ಯಾರೇ ಇದ್ದರೂ ನ್ಯಾಯ ನಿೀಡುವವರು ಯಾವುದೇ ಪ್ರಭಾವಕ್ಕೆ ಒಳಗಾಗದೆ, ಕೇವಲ ಸಾಕ್ಷ್ಯ, ಪುರಾವೆಗಳ ಆಧಾರದ ಮೇಲೇ ತೀರ್ಪು ನೀಡಬೇಕು ಎಂಬುದು ಅದರ ಅರ್ಥ.

–ಬಿ.ಡಿ.ಹಿರೇಮಠ, ಅಧ್ಯಕ್ಷರು, ಹೈಕೋರ್ಟ್‌ ವಕೀಲರ ಸಂಘ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry