ಮಂಗಳವಾರ, ಅಕ್ಟೋಬರ್ 15, 2019
29 °C

ನ್ಯಾಯಮೂರ್ತಿಗಳನ್ನೂ ಮುಸುಕಿದ ಮಾಯೆ

Published:
Updated:

ತೋಳುಗಳು, ತೊಡೆಗಳನ್ನು ಸ್ವಲ್ಪ ಹೆಚ್ಚೇ ಪ್ರದರ್ಶಿಸುವ  ಹೆಣ್ಣುಮಕ್ಕಳು ಅನಗತ್ಯವಾದ ಪುರುಷ ದೃಷ್ಟಿಯನ್ನು ಸ್ವತಃ ತಾವೇ ಆಹ್ವಾನಿಸಿಕೊಳ್ಳುತ್ತಾರೆ. ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಅಪರಾಧಗಳಿಗೆ ಪ್ರೇರಕರಾಗುವ ಹೆಣ್ಣೆಂಬ ಮಾಯೆಯಾಗುತ್ತಾರೆ ಎಂಬ ಭಾವನೆ ನಮ್ಮ ನ್ಯಾಯಾಧೀಶರುಗಳನ್ನೂ ಬಿಟ್ಟಿಲ್ಲ. ಈ ಕುರಿತು ದೆಹಲಿ ಮೂಲದ  `ಸಾಕ್ಷಿ~  ಸಂಸ್ಥೆ 2003ರಲ್ಲಿ ಅಧ್ಯಯನ ನಡೆಸಿತ್ತು. 109 ನ್ಯಾಯಾಧೀಶರುಗಳ ಪೈಕಿ ಶೇಕಡಾ 68ರಷ್ಟು ಮಂದಿ, ಪ್ರಚೋದನಾತ್ಮಕ ವೇಷಭೂಷಣ ಲೈಂಗಿಕ ಆಕ್ರಮಣಗಳಿಗೆ ಆಹ್ವಾನವಿತ್ತಂತೆ ಎಂದಿದ್ದರು. 25 ವರ್ಷಗಳಿಗೂ ಹಿಂದೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರೊಬ್ಬರು ಕೆಲಸಕ್ಕೆ ಜೀನ್ಸ್ ಧರಿಸಿ ಬರುವುದನ್ನು ನಿಲ್ಲಿಸಬೇಕೆಂದು ತಮ್ಮ ಕಚೇರಿಯಲ್ಲಿನ ಸಿಬ್ಬಂದಿಯೊಬ್ಬರಿಗೆ ನಿರ್ದೇಶಿಸಿದ್ದರು. ನಂತರ ಇದು ವಿವಾದವಾಗುವ ಲಕ್ಷಣ ಕಾಣಿಸಿದಾಗ, ಇದು ಸಲಹೆ  ಮಾತ್ರ; ಆದೇಶವಲ್ಲ ಎಂದು ಸ್ಪಷ್ಟಪಡಿಸಿದ್ದರು. ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ  ಸಿರಿಯಾಕ್ ಜೋಸೆಫ್ ಅವರು  2008ರ ಫೆ. 9ರಂದು, ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಪ್ರಚೋದನಾತ್ಮಕ ವೇಷಭೂಷಣಗಳೇ ಕಾರಣ ಎಂದಿದ್ದು ವಿವಾದವಾಗಿತ್ತು.  ಆ ಹೇಳಿಕೆಯನ್ನು ಅವರು ಮತ್ತಷ್ಟು ವಿಸ್ತರಿಸಿದ್ದರು. ದೇವಾಲಯ, ಚರ್ಚ್‌ಗಳಿಗೂ ಮಹಿಳೆಯರು ಈಗ ಯಾವ ರೀತಿಯ ಡ್ರೆಸ್‌ಗಳನ್ನು ಧರಿಸಿ ಬರುತ್ತಾರೆಂದರೆ, ದೇವರನ್ನು ಧ್ಯಾನಿಸುವ ಬದಲು ಎದುರಿರುವ ವ್ಯಕ್ತಿಯನ್ನು ಧ್ಯಾನಿಸುವ ಸ್ಥಿತಿ ಎದುರಾಗುತ್ತದೆ;  ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆ ಧರಿಸುವ ಪ್ರಚೋದನಾತ್ಮಕ ಉಡುಪುಗಳು ಪುರುಷರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಜನರ ಸುರಕ್ಷತೆಗಾಗಿ ಮಹಿಳೆಯರು ಸಭ್ಯ ಬಟ್ಟೆಗಳನ್ನು ತೊಡಬೇಕೆಂದು ಹೇಳಿದ್ದರು.

Post Comments (+)