ಸೋಮವಾರ, ಮೇ 17, 2021
21 °C
ನೇಮಕಾತಿ ಸಲಹಾ ಸಮಿತಿ ರದ್ದು: ಸರ್ಕಾರದ ಚಿಂತನೆ

ನ್ಯಾಯಮೂರ್ತಿಗಳ ನೇಮಕಕ್ಕೆ ಹೊಸ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ 20 ವರ್ಷ ಹಳೆಯ ಪದ್ಧತಿ ಕೈಬಿಟ್ಟು ಹೊಸ ನೇಮಕಾತಿ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವ ಕೇಂದ್ರ ಸಚಿವ ಸಂಪುಟದ ಮುಂದಿದೆ. ದೇಶದ 24 ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡುವ `ನ್ಯಾಯಮೂರ್ತಿಗಳ ನೇಮಕಾತಿ ಸಲಹಾ ಸಮಿತಿ'ಯನ್ನು (ಕೊಲಿಜಿಯಂ) ರದ್ದು ಮಾಡುವ ಪ್ರಸ್ತಾವವನ್ನು ನ್ಯಾಯಾಂಗ ನೇಮಕಾತಿ ಆಯೋಗ ಕೇಂದ್ರ ಸಚಿವ ಸಂಪುಟದ ಮುಂದಿಟ್ಟಿದೆ.ಈ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತ ನಂತರ ಸಹಜವಾಗಿ ನೇಮಕಾತಿ ಸಲಹಾ ಸಮಿತಿ ರದ್ದಾಗಲಿದ್ದು, ಹೊಸ ವ್ಯವಸ್ಥೆ, ಮಾರ್ಗಸೂಚಿಗಳ ರಚನೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.ನ್ಯಾಯಮೂರ್ತಿಗಳ ನೇಮಕಾತಿ ಸಲಹಾ ಸಮಿತಿಯು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕಾರಣ ಸರ್ಕಾರ ಅನಿವಾರ್ಯವಾಗಿ ಮಧ್ಯೆ ಪ್ರವೇಶಿಸಬೇಕಾಗಿದೆ ಎಂದು ಕೇಂದ್ರದ ನಿಲುವನ್ನು ಸಿಬಲ್ ಸಮರ್ಥಿಸಿಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಉನ್ನತ ಸ್ಥಾನಗಳಿಗೆ ಉತ್ತಮ ಹಾಗೂ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡುವ ಹೊಣೆಗಾರಿಕೆ ಸರ್ಕಾರದ ಮೇಲೂ ಇದೆ ಎಂದಿದ್ದಾರೆ.ಕಳೆದ ತಿಂಗಳು ಕಾನೂನು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಿಬಲ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. `ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಂಥ ಉನ್ನತ ಹುದ್ದೆಗೆ ಉತ್ತಮ ಹಿನ್ನೆಲೆ ಹೊಂದಿರುವ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂಬುದು ಸರ್ಕಾರ ಮತ್ತು ನ್ಯಾಯಾಂಗದ ಉದ್ದೇಶ. ಅದನ್ನು ನಿಭಾಯಿಸುವಲ್ಲಿ ಈ ಸಮಿತಿ ವಿಫಲವಾಗಿದೆ' ಎಂದು ಹೇಳಿದರು.ಸಮಿತಿ ಸಲಹೆ ಮೂಲಕ ನ್ಯಾಯಮೂರ್ತಿಗಳ ನೇಮಕ ಪದ್ಧತಿಯನ್ನು ಇತ್ತೀಚೆಗೆ ಬಲವಾಗಿ ಸಮರ್ಥಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ಸುದೀರ್ಘ ಸಮಾಲೋಚನೆ ಮತ್ತು ವಿವೇಚನೆಯಿಂದ ನೇಮಕ ಮಾಡಲಾಗುತ್ತದೆ ಎಂದು ವಿವರಿಸಿದ್ದರು.ಹೊಸ ವ್ಯವಸ್ಥೆ ಜಾರಿಗೂ ಮುನ್ನ ನ್ಯಾಯಾಂಗ ವಲಯದಿಂದ ಕೇಳಿ ಬಂದ ಆಕ್ಷೇಪಣೆ ಮತ್ತು ಮುಖ್ಯ ನ್ಯಾಯಮೂರ್ತಿ ಕಬೀರ್ ಅವರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಿಬಲ್ ಭರವಸೆ ನೀಡಿದ್ದಾರೆ. ಅಂತಿಮವಾಗಿ ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಗಣ್ಯರು ಮತ್ತು ಸರ್ಕಾರದ ಅಭಿಮತ ಈ ನಿಟ್ಟಿನಲ್ಲಿ ಮುಖ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.