ಗುರುವಾರ , ಜೂನ್ 17, 2021
21 °C

ನ್ಯಾಯಮೂರ್ತಿ ಬದಲಾವಣೆ ಕೋರಿದ್ದ ಹಿನ್ನೆಲೆ- ಸಮನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಬದಲಾವಣೆ ಕೋರಿದ್ದ ವಕೀಲ ಸಿರಾಜಿನ್ ಬಾಷಾ ಅವರ ವಿರುದ್ಧ ಹೈಕೋರ್ಟ್ ಖುದ್ದು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿದೆ.

ಈ ಸಂಬಂಧ ಅವರಿಗೆ ಸಮನ್ಸ್ ಜಾರಿಗೆ ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.ಬಾಷಾ ಅವರು ತಮ್ಮ ವಿರುದ್ಧ ದಾಖಲು ಮಾಡಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಯಡಿಯೂರಪ್ಪ ತಡೆ ಕೋರಿ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಒಂದು ಅರ್ಜಿಯ ವಿಚಾರಣೆ ನಡೆಸಿ ಯಡಿಯೂರಪ್ಪನವರ ಪರ ತೀರ್ಪು ನೀಡಿದ್ದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇನ್ನೊಂದು ಅರ್ಜಿಯಲ್ಲಿಯೂ ಅದೇ ಆದೇಶ ಹೊರಡಿಸಿದ್ದರು.ಸರಿಯಾಗಿ ವಿಚಾರಣೆ ನಡೆಸದೆ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದ್ದ ಬಾಷಾ, ವಿಚಾರಣೆಯನ್ನು ಬೇರೆ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ಕೋರಿದ್ದರು. ಮನವಿಯನ್ನು ನ್ಯಾ.ಪಾಟೀಲ್ ಪುರಸ್ಕರಿಸಿದ್ದರೂ, ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.`ಈ ರೀತಿಯ ಮನವಿ ಪುರಸ್ಕರಿಸಿದರೆ ಇದು ಬೇರೆಯವರಿಗೂ ಮಾದರಿಯಾಗುವ ಸಾಧ್ಯತೆ ಇದೆ. ಇಂತಹ ಪರಿಪಾಠಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ~ ಎಂದಿದ್ದ ನ್ಯಾಯಮೂರ್ತಿಗಳು ನ್ಯಾಯಾಂಗ ನಿಂದನೆಗೆ ಶಿಫಾರಸು ಮಾಡಿ, ಮುಂದಿನ ಕ್ರಮ ತೆಗೆದುಕೊಳ್ಳುವಂತೆ ರಿಜಿಸ್ಟ್ರಾರ್ ಅವರಿಗೆ ಆದೇಶಿಸ್ದ್ದಿದರು. ಈ ಆದೇಶದ ಅನ್ವಯ ಈಗ ಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲು ಮಾಡಿದೆ.ಚುನಾವಣೆಗೆ ಕೋರಿ ಅರ್ಜಿಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ಪರಿಷತ್ತಿನ ಚುನಾವಣೆ ಆಗಿ ಆರು ತಿಂಗಳು ಕಳೆದರೂ ಇದುವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲು ಪರಿಷತ್ತು ಮೀನಮೇಷ ಎಣಿಸುತ್ತಿದೆ ಎಂದು ದೂರಿ ಡಾ.ಎಚ್.ಎನ್.ರವೀಂದ್ರ ಅವರು ಅರ್ಜಿ ಸಲ್ಲಿಸಿದ್ದಾರೆ.`1992-93ರ ಅವಧಿಯ ನಂತರ ಇದುವರೆಗೂ ಪರಿಷತ್ತಿಗೆ ಚುನಾವಣೆ ನಡೆದಿರಲಿಲ್ಲ. ಆದರೆ ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ನಂತರ ಎಚ್ಚೆತ್ತುಕೊಂಡ ಪರಿಷತ್ತು ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಸಿದೆ. ಅದರಲ್ಲಿ ನಾನೂ ಆಯ್ಕೆಯಾಗಿದ್ದೇನೆ.

 

ಆದರೆ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆಯಲಿಲ್ಲ. ಈ ಬಗ್ಗೆ ಪರಿಷತ್ತಿನ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ~ ಎಂದು ಅರ್ಜಿದಾರರು ದೂರಿದ್ದಾರೆ. ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಚಾರಣೆ ಮುಂದೂಡಿದರು.`ವಿಮಾ ಇಲಾಖೆ ನೌಕರರಿಗೆ ಬೋನಸ್~ಕರ್ನಾಟಕ ರಾಜ್ಯ ವಿಮಾ ಇಲಾಖೆಯ ನೌಕರರು ಬೋನಸ್‌ಗೆ ಅರ್ಹರು ಎಂದು ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.ಇವರು ಬೋನಸ್‌ಗೆ ಅರ್ಹರಲ್ಲ ಎಂದು ಆದೇಶಿಸುವಂತೆ ಕೋರಿ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.`1965ರಲ್ಲಿ ಬೋನಸ್ ಕಾಯ್ದೆ  ಜಾರಿಗೊಂಡ ದಿನದಿಂದ 1980ರವರೆಗೆ ಇವರಿಗೆ ಎರಡು ತಿಂಗಳ ಸಂಬಳವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ. ಆದರೆ ಏಕಾಏಕಿ ಅದನ್ನು ರದ್ದು ಮಾಡಿರುವುದು ಸರಿಯಲ್ಲ~ ಎಂದು ಪೀಠ ತಿಳಿಸಿದೆ.1980ರಲ್ಲಿ ಬೋನಸ್ ನಿಲ್ಲಿಸಿದ್ದನ್ನು ಪ್ರಶ್ನಿಸಿ ಜಿ.ವಿ.ರಾಜು ಹಾಗೂ ಇತರರು ಕರ್ನಾಟಕ ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ನ್ಯಾಯಮಂಡಳಿ ಮಾನ್ಯ ಮಾಡಿತ್ತು. ಈ ಆದೇಶ ರದ್ದತಿಗೆ ಇಲಾಖೆ ಕೋರಿದ್ದ ಅರ್ಜಿಯನ್ನು ಏಕಸದಸ್ಯಪೀಠ 2002ನೇ ಸಾಲಿನಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅದೇ ಸಾಲಿನಲ್ಲಿ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪು ಈಗ ಹೊರಬಿದ್ದಿದೆ. ಪುನಃ ಇಲಾಖೆಗೆ ಹಿನ್ನಡೆಯುಂಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.