ಮಂಗಳವಾರ, ಜನವರಿ 28, 2020
21 °C

ನ್ಯಾಯವಾದಿಗಳ ಆಟ: ಸಾರ್ವಜನಿಕರಿಗೆ ಪ್ರಾಣ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಆತ್ಮಾವಲೋಕನ ಮಾಡಿಕೊಳ್ಳಲಿ~

ಬೆಂಗಳೂರು: ವಕೀಲರು ನಗರದಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆ ದುರದೃಷ್ಟಕರ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.`ತಮಗಾದ ಅನ್ಯಾಯ ಹೇಳಿಕೊಳ್ಳಲು ವಕೀಲರಿಗೆ ಸ್ವಾತಂತ್ರ್ಯವಿದೆ, ಆದರೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸುವ ಹಕ್ಕು ಅವರಿಗಿಲ್ಲ~ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.`ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಆಗಿರುವ ತೊಂದರೆಯ ಕುರಿತು ವಕೀಲರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಸುಗಮ ರಸ್ತೆ ಸಂಚಾರಕ್ಕೆ ಐದು ನಿಮಿಷ ಅಡಚಣೆಯಾದರೂ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆಸಿದ ಪ್ರತಿಭಟನೆ, ರಸ್ತೆ ತಡೆಯಿಂದ ಸಾರ್ವಜನಿಕರು ಎಷ್ಟು ಕಷ್ಟ ಅನುಭವಿಸಿರಬಹುದು ಎಂಬ ಕುರಿತು ವಕೀಲರು ಆಲೋಚಿಸಬೇಕು~ ಎಂದು ಸಚಿವರು ಹೇಳಿದರು.`ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ನಾನು ಮತ್ತು ಗೃಹ ಸಚಿವ ಆರ್. ಅಶೋಕ ಅವರು ವಕೀಲರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇವೆ. ಇವತ್ತಿನ ಪ್ರತಿಭಟನೆಯಲ್ಲಿ ಎಲ್ಲ ವಕೀಲರೂ ಭಾಗವಹಿಸಿರಲಿಕ್ಕಿಲ್ಲ. ಆದರೆ ಕೆಲವರ ವರ್ತನೆ ವಕೀಲರ ಸಮುದಾಯಕ್ಕೇ ಕೆಟ್ಟ ಹೆಸರು ತರು ವಂತಿದೆ~ ಎಂದು ಬೇಸರಿಸಿದರು.`ಈ ಘಟನೆ ನಡೆದಾಗ ನಾನು ಚಿತ್ರದುರ್ಗದಲ್ಲಿದ್ದೆ. ಒಂದು ವೇಳೆ ನಾನು ಬೆಂಗಳೂರಿನಲ್ಲಿ ಇದ್ದಿದ್ದರೆ, ಘಟನಾ ಸ್ಥಳಕ್ಕೆ ತೆರಳಿ ವಕೀಲರ ಜೊತೆ ಮಾತುಕತೆ ನಡೆಸುತ್ತಿದ್ದೆ~ ಎಂದರು.

ಬಿಎಂಟಿಸಿ ಸೇವೆ ವ್ಯತ್ಯಯ

ವಕೀಲರ ಪ್ರತಿಭಟನೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾದ ಪರಿಣಾಮ ಬೆಳಿಗ್ಗೆಯಿಂದ ಸಂಜೆವರೆಗೂ ಬಿಎಂಟಿಸಿ ಬಸ್ ಸೇವೆಯಲ್ಲಿ ತೀವ್ರ ವ್ಯತ್ಯಯವಾಯಿತು.ನಗರದ ದಕ್ಷಿಣ ಭಾಗದ ಪ್ರದೇಶಗಳು, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ, ಶಿವಾಜಿನಗರ, ಮಡಿವಾಳ, ಆಡುಗೋಡಿ, ಎಲೆಕ್ಟ್ರಾನಿಕ್‌ಸಿಟಿ, ಹಲಸೂರು ಮತ್ತಿತರ ಬಡಾವಣೆಗಳಿಗೆ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿಲ್ಲ. ಬಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಸಕಾಲಕ್ಕೆ ನಿಗದಿತ ಸ್ಥಳ ತಲುಪಲು ಸಾಧ್ಯವಾಗಲಿಲ್ಲ. ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ನಿಂತಿದ್ದ ದೃಶ್ಯ ಮೆಜೆಸ್ಟಿಕ್‌ನಲ್ಲಿ ಕಂಡುಬಂತು.ಪೊಲೀಸರು ಹಲವೆಡೆ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ಬಸ್‌ಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

 

ಪ್ರತಿಕ್ರಿಯಿಸಿ (+)