ನ್ಯಾಯಸಿದ್ಧಾಂತದ ಮಿತಿ ಮೀರುವ ಪ್ರಯತ್ನ ನಡೆಯಲಿ

7

ನ್ಯಾಯಸಿದ್ಧಾಂತದ ಮಿತಿ ಮೀರುವ ಪ್ರಯತ್ನ ನಡೆಯಲಿ

Published:
Updated:

ಕಾವೇರಿ ವಿವಾದ ಕುರಿತಂತೆ ಪ್ರತಿಭಟಿಸುತ್ತಿರುವ ಕನ್ನಡಿಗನ ಪ್ರಶ್ನೆ ಸರಳವಾದದ್ದು: ಸುಪ್ರೀಂ ಕೋರ್ಟ್ ಮತ್ತು ಪ್ರಧಾನ ಮಂತ್ರಿಗಳು ಅಂಕಿ-ಅಂಶಗಳನ್ನು ಗಮನಿಸಿ,ಕರ್ನಾಟಕದ ಜಲಾಶಯಗಳಲ್ಲಿ ನಮ್ಮ ಅಗತ್ಯಕ್ಕೇ ಸಾಲುವಷ್ಟು ನೀರಿಲ್ಲವೆಂದು ಅರಿತ ಮೇಲೆ ಕೂಡ ಪುನಃ ಏಕೆ ತಮಿಳುನಾಡಿಗೆ ನೀರು ಬಿಡಲು ಆದೇಶಿಸುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರಿಸಲು ನೀಡುವ ವಿವರಣೆಗಳಲ್ಲಿ  ಸ್ವಲ್ಪ ಮಟ್ಟಿನ ಸತ್ಯ ಇರಬಹುದು.ಸುಪ್ರೀಂ ಕೋರ್ಟ್ ಅಥವಾ ಕಾವೇರಿ ನದಿ ಪ್ರಾಧಿಕಾರದಲ್ಲಿ ನಮ್ಮ ಸಮಸ್ಯೆಯನ್ನು ನುರಿತ ವಕೀಲರು ಅಥವಾ ರಾಜಕಾರಣಿಗಳು ಪ್ರತಿಪಾದಿಸುತ್ತಿಲ್ಲ ಎಂದಲ್ಲ. ವಾಸ್ತವವೇನೆಂದರೆ ಪ್ರತಿಭಟಿಸುತ್ತಿರುವ ಕನ್ನಡಿಗನ ವಾದವನ್ನು ತರ್ಕಬದ್ಧವಾಗಿ ಮನವರಿಕೆ ಮಾಡಿಕೊಡುವುದು ಅವರಿಗೆ ಸಾಧ್ಯವಾಗುತ್ತಿಲ್ಲ.ಇದಕ್ಕೆ ಕಾರಣವೂ ಸರಳವಾದುದೇ. ಕಾವೇರಿ ನೀರಿನ ಮೇಲೆ ನಾವು ಸ್ಥಾಪಿಸಬಯಸುವ ಹಕ್ಕನ್ನು ಇದುವರೆಗೆ ಬೆಳೆದುಬಂದಿರುವ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ನೀರಿನ ಹಂಚಿಕೆಯ ಕುರಿತಾದ ನ್ಯಾಯಸಿದ್ಧಾಂತ ಒಂದು ಸೀಮಿತ ನೆಲೆಯಲ್ಲಿ ಮಾತ್ರ ಒಪ್ಪಿಕೊಳ್ಳುತ್ತದೆ.

ಅಂದರೆ, ಕಾವೇರಿ ಕರ್ನಾಟಕದಲ್ಲಿಯೇ ಹುಟ್ಟಿ, ಅರ್ಧಕ್ಕಿಂತ ಹೆಚ್ಚು ನೀರನ್ನು ಕರ್ನಾಟಕದಲ್ಲಿ ಬೀಳುವ ಮಳೆಯ ಮೂಲಕವೇ ಪಡೆದು, ಇಲ್ಲಿನ ಜಲಾಶಯಗಳಲ್ಲಿ ನಮ್ಮ ಅಗತ್ಯಗಳಿಗೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಕೊಂಡರೂ ಸಹ, ಆ ನೀರಿನ ಮೇಲೆ ಕರ್ನಾಟಕದ ಹಕ್ಕು ಸೀಮಿತವಾದದ್ದು.

ಪ್ರತಿಭಟಿಸುತ್ತಿರುವ ಕನ್ನಡಿಗನ ದೃಷ್ಟಿಯಲ್ಲಿ ಕರ್ನಾಟಕದ ಹಕ್ಕು ಮೊದಲನೆಯದು ಮಾತ್ರವಲ್ಲ ಬದಲಿಗೆ ಸಮಗ್ರ ಮತ್ತು ನಿರುಂಕುಶವಾದದ್ದು. ಹೀಗಾಗಿ ಪ್ರತಿಭಟಿಸುತ್ತಿರುವ ಕನ್ನಡಿಗನ ಸಮಸ್ಯೆ ಕಾವೇರಿ ಕೊಳ್ಳದ ಕೆಳಗಿನ ರಾಜ್ಯವಾದ ತಮಿಳುನಾಡಿನ ಹಕ್ಕನ್ನು ಪ್ರಾಥಮಿಕ ಎಂದು ಗುರುತಿಸುವ ನ್ಯಾಯಸಿದ್ಧಾಂತದ ಜೊತೆಗಿರುವುದು ಎಂಬುದನ್ನು ನಾವು ಮೊದಲು ಅರಿಯಬೇಕಾಗಿದೆ.

ಕಾವೇರಿ ನ್ಯಾಯಮಂಡಳಿ ತನ್ನ ನೀರು ಹಂಚಿಕೆಯ ಸೂತ್ರದಲ್ಲಿ ಈ ನ್ಯಾಯಸಿದ್ಧಾಂತದ ತತ್ವಗಳನ್ನು ಅನುಸರಿಸಿದೆ. ಮಳೆ ಕಡಿಮೆ ಬಂದ ವರ್ಷಗಳಲ್ಲಿ ಸಹ, ಕರ್ನಾಟಕದ ನೀರನ್ನು ಅನುಪಾತದಲ್ಲಿ ಹಂಚಿಕೊಳ್ಳಲು ಸೂಚಿಸಿದೆ.

ಒಂದು ನಿರ್ದಿಷ್ಟ ಸಂಕಷ್ಟ ಸೂತ್ರ ಒದಗಿಸದಿದ್ದರೂ, ಟ್ರಿಬ್ಯುನಲ್ ಇದೊಂದು ರಾಜಕೀಯ ಸಮಸ್ಯೆ ಎಂದು ಗುರುತಿಸಿ, ಅದಕ್ಕೆ ನ್ಯಾಯದ ಸೂತ್ರ ಕೊಡದೆ ಪ್ರಧಾನಿಗಳ ನೇತೃತ್ವದ ಕಾವೇರಿ ನದಿ ಪ್ರಾಧಿಕಾರಕ್ಕೆ ಈ ಜವಾಬ್ದಾರಿ ನೀಡಿದೆ. ಈಗ ಪ್ರತಿಭಟಿಸುತ್ತಿರುವ ಕನ್ನಡಿಗ ಎದುರಿಸುತ್ತಿರುವ ನ್ಯಾಯಸಿದ್ಧಾಂತದ ಸಮಸ್ಯೆಯ ಮೂಲ ಇಲ್ಲಿಯೇ ಇದೆ.ಇದು ಏಕೆ ಎಂದು ಸಹಜವಾಗಿಯೇ ನಮ್ಮ ಮನಸ್ಸಿನಲ್ಲಿ ಈ ನ್ಯಾಯಸಿದ್ಧಾಂತದ ನ್ಯಾಯಪರತೆ ಮತ್ತು ನಿಷ್ಪಕ್ಷಪಾತತನದ ಬಗ್ಗೆಯೇ ಸಂಶಯ ಮೂಡುತ್ತದೆ. ನದಿ ನೀರಿನ ಮೇಲಿನ ಹಕ್ಕನ್ನು ಸ್ಥಾಪಿಸುವಲ್ಲಿ ಪ್ರಾಥಮಿಕ ವಾದವಾಗಿ ಮಂಡಿತವಾಗುವುದು ನೀರು ಯಾರ ಸುಪರ್ದಿಯಲ್ಲಿದೆ ಅಥವಾ ಯಾವ ಪ್ರದೇಶದಲ್ಲಿ ಸಂಗ್ರಹಿತವಾಗಿದೆ ಎಂಬುದು ಮಾತ್ರವಲ್ಲ.

ಬದಲಿಗೆ ಐತಿಹಾಸಿಕವಾಗಿ ಯಾರು ಮೊದಲು ನದಿ ನೀರನ್ನು ಬಳಸಲು ಆರಂಭಿಸಿದರು ಮತ್ತು ಆ ಬಳಕೆಯ ಸ್ವರೂಪ ಹಾಗು ಕ್ರಮ ಹೇಗಿತ್ತು ಎನ್ನುವುದು ಕೂಡ ಮುಖ್ಯ. ಇದನ್ನೆ `ಪ್ರಿಯರ್ ಅಪ್ರಾಪ್ರಿಯೇಶನ್~ ತತ್ವ ಎಂದು ಕರೆಯುತ್ತಾರೆ.

ಆ ಕಾರಣದಿಂದಲೇ ಸಾವಿರಾರು ವರ್ಷಗಳಿಂದ ಕಾವೇರಿ ನೀರನ್ನು ಕೃಷಿಗೆ ಬಳಸುತ್ತ, 1970ಕ್ಕೆ ಮುನ್ನವೇ ಸುಮಾರು 26 ಲಕ್ಷ ಎಕರೆಗೆ ನೀರಾವರಿಯನ್ನು ವಿಸ್ತರಿಸಿಕೊಂಡ ತಮಿಳುನಾಡು ನ್ಯಾಯಾಲಯದಲ್ಲಿ ತನ್ನ ಬೇಡಿಕೆಗಳಿಗೆ ಮನ್ನಣೆ ಪಡೆಯುತ್ತದೆ.ಹೀಗಾಗಿಯೇ ತನ್ನ ಕುರುವೈ ಬೆಳೆಗೆ ಅಗತ್ಯ ಪ್ರಮಾಣದಲ್ಲಿ ನೀರು ಬೇಕೆಂದು ತಮಿಳುನಾಡು ಕೇಳಿದಾಗ, ಕರ್ನಾಟಕದ ಅಗತ್ಯಗಳಿಗಿಂತ ಮೊದಲು ಅಲ್ಲಿನ ಅವಶ್ಯಕತೆಗಳನ್ನು ಪೂರೈಸುವುದು. ಕರ್ನಾಟಕದ ಬೆಳೆಗಳಿರಲಿ, ಕುಡಿಯುವ ನೀರಿನ ಅಗತ್ಯಗಳನ್ನೂ ಟ್ರಿಬ್ಯುನಲ್ ತನ್ನ ತೀರ್ಪಿನಲ್ಲಿ ಗುರುತಿಸದು.

ಆ ಕಾರಣಕ್ಕಾಗಿಯೆ ಬೆಂಗಳೂರಿಗೆ 1.75 ಟಿಎಮ್‌ಸಿ ಅಡಿ ನೀರನ್ನು ಕೊಟ್ಟಿದ್ದು. ಬೆಂಗಳೂರಿಗೆ 30 ಟಿಎಮ್‌ಸಿ ಅಡಿ ಅಗತ್ಯವಿದ್ದರೆ ಅದು ಬೇರೆ ಮೂಲಗಳಿಂದ ಪೂರೈಸಿಕೊಳ್ಳಬೇಕು.

ಇದರರ್ಥ ಮಳೆ ಸರಿಯಾಗಿ ಆದ ವರ್ಷಗಳಲ್ಲಿ ಹೆಚ್ಚಿನ ನೀರನ್ನು ಬೆಂಗಳೂರಿಗೆ ನಾವು ಕೊಡಬಹುದೇನೋ. ಆದರೆ ಟ್ರಿಬ್ಯುನಲ್ ಅದನ್ನು ಒಂದು ಹಕ್ಕಾಗಿ ಪರಿಗಣಿಸಿಲ್ಲ ಮತ್ತು ಆ ಕಾರಣದಿಂದ ಸುಪ್ರೀಂ ಕೋರ್ಟ್‌ನ ಮುಂದೆ ಕುಡಿಯುವ ನೀರಿನ ಅಗತ್ಯವನ್ನು ಪ್ರಸ್ತಾಪಿಸಿದಾಗ, ನಮ್ಮ ವಾದಕ್ಕೆ ಮನ್ನಣೆ ಸಿಗುವುದಿಲ್ಲ.ಹಾಗಾದರೆ ಪ್ರತಿಭಟಿಸುತ್ತಿರುವ ಕನ್ನಡಿಗನ ವಾದ ನ್ಯಾಯಸಮ್ಮತವಲ್ಲವೇ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕರ್ನಾಟಕದ ಹಕ್ಕು `ಇಕ್ವಿಟಿ~ ತತ್ವವನ್ನು ಆಧರಿಸಿರುವುದು. ಅಂದರೆ ರೂಢಿಗತ ಮತ್ತು ಕಾನೂನು ಸಮ್ಮತ ನ್ಯಾಯದ ಜೊತೆಗೆ, ಅದನ್ನು ಮೀರಿದ ನಿಷ್ಪಕ್ಷಪಾತ ಧರ್ಮತತ್ವದ ಅಧಾರದ ಮೇಲೆ, ನೀರು ಹಂಚಿಕೆಗೆ ನಾವು ಆಗ್ರಹಿಸಬೇಕಾಗುತ್ತದೆ.

ಏಕೆಂದರೆ ನದಿ ಕಣಿವೆಯ ಕೆಳಗಿನ ರಾಜ್ಯಗಳ ಹಕ್ಕುಗಳ ಮೇಲೆ ಒಂದು ಮಿತಿ ಹೇರಬೇಕಾದರೆ, ಅದರ ತಾತ್ವಿಕ ಆಧಾರ ಏನಿರಬೇಕು ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕು.

ಉದಹರಣೆಗೆ ತಮಿಳುನಾಡಿನ ರೈತರು ನೀರು ಮತ್ತು ಭೂಮಿ ಬಳಕೆಯ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಬದಲಾವಣೆ ಮಾಡಲು ಒಪ್ಪದೆ, ಸುಧಾರಿತ ಕೃಷಿಪದ್ಧತಿಗಳನ್ನು ಅನುಸರಿಸದೆ, ಹಳೆಯ ಮಾದರಿಯ ಆಧಾರದ ಮೇಲೆ ನೀರಿಗೆಬೇಡಿಕೆಯಿಟ್ಟಾಗ ಅಂತಹ ಸಂದರ್ಭದಲ್ಲಿ ಅಗತ್ಯವಾದ ನ್ಯಾಯತತ್ವಗಳು ಮತ್ತು ಸಿದ್ಧಾಂತಗಳೇನು? ಈ ಚರ್ಚೆ ಸಂಕಷ್ಟದ ಸಮಯದಲ್ಲಿ ಮಾತ್ರವಲ್ಲ, ನೀರಿನ ಕೊರತೆ ಹೆಚ್ಚಾಗಲಿರುವ ಮುಂಬರುವ ದಿನಗಳಲ್ಲಿ ಎಲ್ಲ ವರ್ಷಗಳಲ್ಲೂ ನಮ್ಮನ್ನು ಕಾಡುವ ಪ್ರಶ್ನೆಗಳಾಗಲಿವೆ.ಇದಾವುದೂ ಕರ್ನಾಟಕದ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ರಾಜಕಾರಣಿಗಳಿಗೆ ತಿಳಿದಿಲ್ಲ ಎಂದಲ್ಲ. ತಮಿಳುನಾಡಿಗೆ ಅನುಕೂಲಕರವಾದ ನ್ಯಾಯಸಿದ್ಧಾಂತದ ಪರಿಣಾಮ ತಪ್ಪಿಸಲೆಂದೇ, ಕರ್ನಾಟಕ ನ್ಯಾಯಮಂಡಳಿಯ ಬದಲಿಗೆ ಟ್ರಿಬ್ಯುನಲ್ ಬದಲು ಮಾತುಕತೆ ಮತ್ತು ರಾಜಕೀಯ ಒಪ್ಪಂದದ ದಾರಿಯನ್ನೇ ಉದ್ದಕ್ಕೂ ಬಯಸಿದ್ದು.ಮಿಗಿಲಾಗಿ 1970-1980ರ ದಶಕಗಳಲ್ಲಿ ಕಾವೇರಿ ಕೊಳ್ಳದಲ್ಲಿ ಹೊಸ ನೀರಾವರಿ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದು. ಶೆಟ್ಟರ್ ಸೇರಿದಂತೆ ಹಿಂದಿನ ಎಲ್ಲ ಮುಖ್ಯಮಂತ್ರಿಗಳು-ನೀರಾವರಿ ಮಂತ್ರಿಗಳು ಎಡವಿದ್ದು ಈ ತಮಿಳುನಾಡಿಗೆ ಅನುಕೂಲಕರವಾದ ನ್ಯಾಯಸಿದ್ಧಾಂತದ ಬಗ್ಗೆ ಮುಕ್ತವಾಗಿ, ಪ್ರಾಮಾಣಿಕವಾಗಿ ಕನ್ನಡಿಗರೊಡನೆ ಮಾತನಾಡದೆ ಇದ್ದದ್ದು.

ರಾಜಕೀಯ ಇಚ್ಛಾಶಕ್ತಿಯ ಮತ್ತು ಮುತ್ಸದ್ಧಿತನದ ಕೊರತೆಯಿದ್ದರೆ ಅದು ಎದ್ದು ಕಾಣಿಸುವುದು ನೀರಿನ ಹಕ್ಕುದಾರರು ಮತ್ತು ಅವರ ಹಕ್ಕುಗಳ ವ್ಯಾಪ್ತಿ, ಮಿತಿಗಳ ಬಗ್ಗೆ ಒಂದು ಸ್ಪಷ್ಟವಾದ ಸಿದ್ಧಾಂತ ಮತ್ತು ಅದರ ಆಧಾರದ ಮೇಲೆ ನ್ಯಾಯಯುತ ಹಂಚಿಕೆಯ ವ್ಯವಸ್ಥೆಯೊಂದನ್ನು ರೂಪಿಸದಿದ್ದುದು. ಪ್ರತಿದಿನದ ರಾಜಕೀಯ ತುರ್ತಿನಲ್ಲಿ ಇಂತಹ ಸವಾಲುಗಳ ಬಗ್ಗೆ ನಮ್ಮ ನಾಯಕರುಗಳು ತಲೆ ಕೆಡಿಸಿಕೊಳ್ಳದಿರುವುದು ಆಶ್ಚರ್ಯವೇನಲ್ಲ.ಇತರೆ ನದಿ ನೀರಿನ ಸಮಸ್ಯೆಗಳಿಗೆ ಹೋಲಿಸಿದಾಗ, ಕಾವೇರಿ ಕೊಳ್ಳದ ಸಮಸ್ಯೆಯಿರುವುದು ಇಲ್ಲಿ ಈಗಾಗಲೇ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿರುವುದು. ಹಾಗಾಗಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಾಗ, ನೀರಿನ ಮೇಲಿನ ಜಗಳಗಳು ಕರ್ನಾಟಕದೊಳಗೂ ಆರಂಭವಾಗುತ್ತವೆ.

ಈಗಾಗಲೆ ಮಂಡ್ಯದ ರೈತರು ಮತ್ತು ಬೆಂಗಳೂರಿನ ನಾಗರಿಕರ ನಡುವೆ ತಿಕ್ಕಾಟ ಪ್ರಾರಂಭವಾಗಿದ್ದು ಕೆಲಕಾಲದ ಹಿಂದೆ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಮೇಲಿರುವ ಹೊಣೆ ನೀರಿನ ಹಕ್ಕು ಮತ್ತು ಬಳಕೆಯ ಸ್ವರೂಪದ ಬಗ್ಗೆ ಒಂದು ಜವಾಬ್ದಾರಿಯುತ ಚರ್ಚೆ ಆರಂಭಿಸಿ, ಸಾಧ್ಯವಾದಷ್ಟು ಬೇಗ ಒಂದು ನ್ಯಾಯಯುತ ವ್ಯವಸ್ಥೆ ರೂಪಿಸಿಕೊಳ್ಳುವುದು.

ಇಂತಹ ವ್ಯವಸ್ಥೆಯ ಅಂಗವಾಗಿ, ನಾವು ನೀರಿನ ಅಗತ್ಯತೆಯ ಬಗ್ಗೆಯೇ ಸ್ವಲ್ಪ ಭಿನ್ನವಾಗಿ ಯೋಚಿಸುವುದು ಅನಿವಾರ್ಯವಾಗುತ್ತದೆ. ಸಂಕಷ್ಟದ ವರ್ಷಗಳಲ್ಲಿ ನೀರಿನ ರೇಶನ್ ಮಾಡಬೇಕಾಗಬಹುದು. ಕುಡಿಯುವ ನೀರಿನ ಅಗತ್ಯ ಹೆಚ್ಚಿನ ಪ್ರಾಮುಖ್ಯ ಪಡೆಯುವುದಾದರೆ, ನೀರು ಸಿಗದ ರೈತನಿಗೆ ಪರಿಹಾರ ಹೇಗೆ ಒದಗಿಸುವುದು? ಈ ಪರಿಹಾರ ಕುಡಿಯುವ ನೀರು ಪಡೆಯುವ ಗ್ರಾಹಕರು ಸರ್ಚಾರ್ಜ್ ರೂಪದಲ್ಲಿ ಕೊಡುವರೇ?ಇದುವರೆಗಿನ ಇತಿಹಾಸ ಗಮನಿಸಿದರೆ, ನ್ಯಾಯಮಂಡಳಿ ಮತ್ತು ರಾಜಕಾರಣದ ಮುಖ್ಯಧಾರೆಯೊಳಗಿನಿಂದ ಯಾವ ಪರಿಹಾರವೂ ಬರುವ ಸಾಧ್ಯತೆಗಳಿಲ್ಲ. ಕರ್ನಾಟಕ ಮತ್ತು ತಮಿಳುನಾಡಿನ ನಾಗರಿಕ ನಾಗರಿಕ ಸಮಾಜಗಳು ಈ ಹಿಂದೆ ರೈತರು,ಸಾಮಾಜಿಕ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಮಾಡಿದ್ದರು. ಅಂತಹ ಪ್ರಯತ್ನಗಳು ನೂರ್ಮಡಿಗೊಳ್ಳಬೇಕಿದೆ. ಮೊನ್ನೆ ತಾನೆ ಸಂಘಟಿತವಾಗಿರುವ ಬೆಂಗಳೂರಿನ ವಕೀಲರ ಸಮಿತಿ ಸಹ ಈ ನಿಟ್ಟಿನಲ್ಲಿಯೇ ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕು.ಈಗ ಪ್ರತಿಭಟಿಸುತ್ತಿರುವ ಕನ್ನಡಿಗನನ್ನು ಜಗಳಗಂಟ, ನೆರೆಹೊರೆಯವರೊಡನೆ ಹೊಂದಿಕೊಳ್ಳದವನು ಎಂದೇ ಗುರುತಿಸುತ್ತ, ಆತನ ಪ್ರಶ್ನೆಯ ಹಿಂದಿರುವ `ಇಕ್ವಿಟಿ~ಯ ಸವಾಲನ್ನು ಇಡೀ ದೇಶವೆ ಗುರುತಿಸುವಂತೆ ಮಾಡಬೇಕಾದುದು ಇಂದಿನ ತುರ್ತು.

ಈ ಪ್ರಯತ್ನ ಶಾಂತಿಯುತವಾಗಿ, ಪಕ್ಷಾತೀತವಾಗಿ ನಡೆಸಿಕೊಂಡು ಬರುತ್ತಿರುವ ಮಂಡ್ಯದ ರೈತರ ನೇತೃತ್ವದಲ್ಲಿಯೇ ಆಗಬೇಕು. ಅವರ ಚಳುವಳಿಯ ಗರ್ಭದಿಂದ ಹುಟ್ಟಬಹುದಾದ ಹೊಸ ತಾತ್ವಿಕತೆ ನಾನು ಮೇಲೆ ಗುರುತಿಸಿದ ನ್ಯಾಯ ಸಿದ್ಧಾಂತದ ಮಿತಿಗಳನ್ನು ಮೀರಲು ನಮಗೆ ಸಾಧ್ಯವಾಗಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry