ಮಂಗಳವಾರ, ಮೇ 17, 2022
27 °C

ನ್ಯಾಯಾಂಗದ ಸರ್ವಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದಲ್ಲಿ ಹಿಂದೆಲ್ಲ ನಡೆದದ್ದು ಸೇನೆಯ ಸರ್ವಾಧಿಕಾರ, ಈಗ ನಡೆಯುತ್ತಿರುವುದು ನ್ಯಾಯಾಂಗದ ಸರ್ವಾಧಿಕಾರ.`ನ್ಯಾಯಾಂಗ ನಿಂದನೆಯ ಅಪರಾಧವೆಸಗಿರುವ  ಯುಸೂಫ್ ಗಿಲಾನಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು~ ಎಂದು ತೀರ್ಪು ನೀಡುವ ಮೂಲಕ ಪಾಕಿಸ್ತಾನದ ಸುಪ್ರೀಂಕೋರ್ಟ್  ನಿಸ್ಸಂಶಯವಾಗಿ ನ್ಯಾಯಪೀಠದ ಗಡಿರೇಖೆಯನ್ನು ಉಲ್ಲಂಘಿಸಿದೆ.ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಮರುತನಿಖೆ ನಡೆಸುವಂತೆ ಸ್ವಿಜರ್‌ಲೆಂಡ್ ಸರ್ಕಾರವನ್ನು ಕೋರಲು ನಿರಾಕರಿಸುವ ಮೂಲಕ ಗಿಲಾನಿ ಅವರು ನ್ಯಾಯಾಂಗ ನಿಂದನೆಯ ಅಪರಾಧ ಎಸಗಿದ್ದಾರೆ ಎಂದು ಕಳೆದ ಏಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

 

ಇದರ ನಂತರ ಪ್ರಧಾನಿ ಹುದ್ದೆ ತ್ಯಜಿಸಲು ಒಪ್ಪದ ಗಿಲಾನಿ ಅವರನ್ನು ಸುಪ್ರೀಂಕೋರ್ಟ್ ಈಗ ಪದಚ್ಯುತಿಗೊಳಿಸಿದೆ. ಅಧ್ಯಕ್ಷ ಆಸಿಫ್ ಜರ್ದಾರಿ ಅವರು ಭ್ರಷ್ಟರೇ ಇರಬಹುದು, ಪ್ರಧಾನಿ ಗಿಲಾನಿ ಅವರೂ ಅಧ್ಯಕ್ಷರ ಜತೆ ಷಾಮೀಲು ಆಗಿರಲೂ ಬಹುದು.

 

ಆದರೆ ಈಗಿನ ಪ್ರಶ್ನೆ ಭ್ರಷ್ಟಾಚಾರದ್ದಲ್ಲ, ಸಂವಿಧಾನ ಮತ್ತು ನೆಲದ ಕಾನೂನಿನ ಪಾಲನೆಯದ್ದು. ದೇಶದ ಅಧ್ಯಕ್ಷ, ಪ್ರಧಾನಿ ಮತ್ತು ರಾಜ್ಯಪಾಲರಿಗೆ `ಇಮ್ಯುನಿಟಿ~ (ವಿಶೇಷ ರಕ್ಷಣೆ) ನೀಡಿರುವ ಪಾಕಿಸ್ತಾನ ಸಂವಿಧಾನದ 248ನೇ ಪರಿಚ್ಛೇದ, ಈ ಮೂವರ ವಿರುದ್ಧ ಯಾವ ನ್ಯಾಯಾಲಯ ಕೂಡಾ ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.ಇದರ ಹೊರತಾಗಿಯೂ ನ್ಯಾಯಮೂರ್ತಿ ಇಫ್ತಿಕರ್ ಮಹಮ್ಮದ್ ಚೌದರಿ ಅವರು ಗಿಲಾನಿ ಅವರನ್ನು ಶಿಕ್ಷಿಸಿರುವುದು ಮಾತ್ರವಲ್ಲ ಪ್ರಧಾನಿ ಹುದ್ದೆಯನ್ನು ತ್ಯಜಿಸುವಂತೆ ಮಾಡಿದ್ದಾರೆ. ಇದು ನ್ಯಾಯಾಂಗದ ಕ್ರಿಯಾಶೀಲತೆಯ ಅತಿರೇಕವಲ್ಲದೆ ಬೇರೇನಲ್ಲ.

ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ ಯಾವ ಸರ್ಕಾರ ಕೂಡಾ ಪೂರ್ಣ ಅವಧಿಯನ್ನು ಮುಗಿಸಿಲ್ಲ. ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಅಲ್ಲಿನ ಸರ್ಕಾರಗಳನ್ನು ಸಾಮಾನ್ಯವಾಗಿ ಸೇನಾ ಸರ್ವಾಧಿಕಾರಿಗಳು ಪದಚ್ಯುತಿಗೊಳಿಸುತ್ತಾ ಬಂದಿದ್ದಾರೆ. ಅಂತಹ ಸಂದರ್ಭಗಳಲ್ಲಿ ಸೇನೆಯ ಬೂಟುಗಾಲಿನ ಒದೆ ತಿಂದರೂ ನ್ಯಾಯಾಂಗ ಮಣಿಯದೆ ಶಾಸಕಾಂಗದ ಪರವಾಗಿ ನಿಂತ ಉದಾಹರಣೆಗಳಿವೆ.ಇದೇ ಕಾರಣಕ್ಕೆ ಈಗಿನ ವಿವಾದಾತ್ಮಕ ನ್ಯಾಯಮೂರ್ತಿ ಚೌದರಿ ಅವರು ವಿಶ್ವಖ್ಯಾತಿ ಪಡೆದವರು. ಈಗ ಅದೇ ನ್ಯಾಯಮೂರ್ತಿಗಳು ಪಾಕಿಸ್ತಾನದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು ಹೊರಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಕಳೆದ ಮಂಗಳವಾರ ನೀಡಿದ್ದ ತೀರ್ಪನ್ನು ಸಂಶಯದಿಂದ ನೋಡಲು ಬೇರೆ ಕಾರಣ ಕೂಡಾ ಇದೆ. ನ್ಯಾ. ಚೌದರಿ ಅವರ ಮಗ ಬಹುಕೋಟಿ ಭ್ರಷ್ಟಾಚಾರದ ಹಗರಣದಲ್ಲಿ ಆರೋಪಿಯಾಗಿದ್ದಾರೆ.ಇದು ಬಯಲಾಗಲು  ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕಾರಣ ಎಂಬ ಸಿಟ್ಟಿನಿಂದ ನ್ಯಾ. ಚೌದರಿ ಅವರು ಆಡಳಿತಾರೂಢ ಪಕ್ಷದ ಬೆನ್ನುಹತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿಬರುತ್ತಿದೆ. ಸ್ವತಂತ್ರ ದೇಶವಾಗಿ ಸ್ಥಾಪನೆಯಾದ ದಿನದಿಂದ ಪಾಕಿಸ್ತಾನ ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಲೇ ಬರುತ್ತಿದೆ.ಈಗ ಪ್ರಾರಂಭವಾಗಿರುವ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷದಿಂದಾಗಿ ಆ ದೇಶ ಮತ್ತೆ ಅರಾಜಕತೆಯ ಕಡೆ ಸಾಗುತ್ತಿರುವಂತೆ ಕಾಣುತ್ತಿದೆ. ಇದು ನೆರೆಯ ದೇಶವಾದ ಭಾರತದ ಚಿಂತೆ ಕೂಡಾ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.