ನ್ಯಾಯಾಂಗ ಆಯೋಗ ವರದಿಯೇ ಅಕ್ರಮ

ಶುಕ್ರವಾರ, ಜೂಲೈ 19, 2019
26 °C

ನ್ಯಾಯಾಂಗ ಆಯೋಗ ವರದಿಯೇ ಅಕ್ರಮ

Published:
Updated:

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಗೆ ಸಂಬಂಧಿಸಿದಂತೆ ಶಂಕಿತ ಏಳು  ಆರೋಪಿಗಳ ವಿರುದ್ಧ ವಿಚಾರಣೆ ಕೈಗೊಳ್ಳಲು ಪಾಕ್ ಸರ್ಕಾರದ ನ್ಯಾಯಾಂಗ ಆಯೋಗ ಮುಂಬೈಗೆ ತೆರಳಿ ಮಾಹಿತಿ ಸಂಗ್ರಹಿಸಿರುವುದೆಲ್ಲ `ಅಕ್ರಮ~ ಎಂದು ಕರೆದಿರುವ ರಾವಲ್ಪಿಂಡಿ ಭಯೋತ್ಪಾದನಾ ನಿಗ್ರಹ ಕೋರ್ಟ್, ಆಯೋಗದ ವರದಿಯನ್ನು ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರದ ಒಂದು ಭಾಗ ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದಿದೆ.ಘಟನೆಗೆ ಸಂಬಂಧಿಸಿದಂತೆ ಆಯೋಗ ಕಳೆದ ಮಾರ್ಚ್‌ನಲ್ಲಿ ಮುಂಬೈಗೆ ತೆರಳಿ ವರದಿ ನೀಡಿರುವುದೆಲ್ಲ `ಅಕ್ರಮ~ ಎಂದಿರುವ ನ್ಯಾಯಾಧೀಶ ಚೌಧರಿ ಹಬೀಬ್ ಉರ್ ರೆಹಮಾನ್, ಪ್ರಕರಣದ ತನಿಖೆಯಲ್ಲಿ ಆಯೋಗದ ವರದಿಯನ್ನು ದಾಖಲೆ ಎಂದು ಪರಿಗಣಿಸಲು ಆಗದು ಎಂದು ಆದೇಶದಲ್ಲಿ ಹೇಳಿದ್ದಾರೆ.ಮುಂಬೈ ಭೇಟಿಯ ಸಮಯದಲ್ಲಿ ಆಯೋಗದ ಸದಸ್ಯರು ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಿರಲಿಲ್ಲ. ಹಾಗಾಗಿ ಆಯೋಗದ ವರದಿಯನ್ನು ದಾಖಲೆ ಎಂದು ಪರಿಗಣಿಸಬಾರದು ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಆ ವಾದವನ್ನು ಕೋರ್ಟ್ ಮನ್ನಿಸಿತು.ಮುಂಬೈಗೆ ಮತ್ತೊಂದು ಆಯೋಗ: ಈ ಮಧ್ಯೆ ಮುಖ್ಯ ಪ್ರಾಸಿಕ್ಯೂಟರ್ ಚೌಧರಿ ಜುಲ್ಫಿಕಾರ್ ಅಲಿ, ಭಾರತ ಅವಕಾಶ ಕಲ್ಪಿಸಿದಲ್ಲಿ ಸಾಕ್ಷಿಗಳ ಪಾಟೀ ಸವಾಲಿಗೆ  ಮುಂಬೈಗೆ ಮತ್ತೊಂದು ಆಯೋಗ ಕಳುಹಿಸಿಕೊಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ರೆಹಮಾನ್, ಪಾಟೀ ಸವಾಲಿಗೆ ಸಂಬಂಧಿಸಿದಂತೆ ಭಾರತ, ಪಾಕಿಸ್ತಾನಗಳು ಹೊಸ ಒಪ್ಪಂದ ಮಾಡಿಕೊಂಡಲ್ಲಿ ಈ ಕುರಿತು ಪ್ರಾಸಿಕ್ಯೂಷನ್ ಮತ್ತೊಂದು ಅರ್ಜಿ ಸಲ್ಲಿಸಬಹುದು ಎಂದರು. ಪ್ರಕರಣದ ವಿಚಾರಣೆಯನ್ನು ಈ ತಿಂಗಳ 21ಕ್ಕೆ ಮುಂದೂಡಲಾಗಿದೆ.ಪಾಕಿಸ್ತಾನದ ಪ್ರಾಸಿಕ್ಯೂಟರ್‌ಗಳು ಹಾಗೂ ಆರೋಪಿಗಳ ಪರ ವಕೀಲರನ್ನು ಒಳಗೊಂಡ ಎಂಟು ಜನರ  ನ್ಯಾಯಾಂಗ ಆಯೋಗ ಕಳೆದ ಮಾರ್ಚ್‌ನಲ್ಲಿ ಮುಂಬೈಗೆ ತೆರಳಿ ನ್ಯಾಯಾಧೀಶರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉಗ್ರರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಭೇಟಿ ಮಾಡಿ ವರದಿ ಸಂಗ್ರಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.ಆದರೆ, ಭಾರತ, ಪಾಕ್ ನಡುವಿನ ಒಪ್ಪಂದದ ಅನ್ವಯ ಭಾರತದ ಅಧಿಕಾರಿಗಳು ಪಾಟೀ ಸವಾಲು ನಡೆಸಲು ಪಾಕ್ ಆಯೋಗಕ್ಕೆ ಅವಕಾಶ ನೀಡಿರಲಿಲ್ಲ.ಪ್ರತಿಕೂಲ ಪರಿಣಾಮ: 166 ಜನರನ್ನು ಬಲಿ ತೆಗೆದುಕೊಂಡ ಮುಂಬೈ ದಾಳಿಯನ್ನು ಯೋಜಿಸಿದ, ಹಣಕಾಸು ನೆರವು ನೀಡಿದ ಜತೆಗೆ ಕಾರ್ಯಾಚರಣೆ ಕೈಗೊಂಡ ಏಳು ಜನ ಆರೋಪಿಗಳ ವಿಚಾರಣೆಯಲ್ಲಿ ಕೋರ್ಟ್‌ನ ಈ ಆದೇಶ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ವಿಶೇಷ ಎಂದರೆ 2009ರ ಆರಂಭದಿಂದ ಘಟನೆಯ ವಿಚಾರಣೆ ಕೈಗೊಂಡ ರಾವಲ್ಪಿಂಡಿ ಕೋರ್ಟ್‌ನ ನ್ಯಾಯಾಧೀಶರು ಐದು ಬಾರಿ ಬದಲಾಗಿದ್ದಾರೆ.ಕಳೆದ ಮೇನಲ್ಲಿ ಭಾರತ, ಪಾಕಿಸ್ತಾನಗಳ ಗೃಹ ಖಾತೆ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ಮುಂಬೈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಭಾರತದ ನ್ಯಾಯಾಂಗ ಆಯೋಗ ಭೇಟಿ ನೀಡಬೇಕಿದೆ. ಆದರೆ ಇದೀಗ ಪಾಕ್ ಕೋರ್ಟ್‌ನ ಆದೇಶ ಈ ಯತ್ನಕ್ಕೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.`ಆಯೋಗದ ವರದಿಯನ್ನು ಪರಿಶೀಲಿಸುವ ಅಧಿಕಾರ ಕೋರ್ಟ್‌ಗೆ ಇದೆ. ಈ ವರದಿಯನ್ನು ಸಾಕ್ಷಿಯ ಒಂದು ಭಾಗವನ್ನಾಗಿ ಪರಿಗಣಿಸುವುದು ಹೇಗೆ ಸಾಧ್ಯ~ ಎಂದು ಆರೋಪಿಗಳಲ್ಲಿ ಒಬ್ಬನಾಗಿರುವ ಲಷ್ಕರ್-ಏ-ತೊಯ್ಬಾ ಸಂಘಟನೆಯ ಕಮಾಂಡರ್ ಝಕಿವುರ್ ರೆಹಮಾನ್ ಲಖ್ವಿ ಪರ ವಕೀಲ ಖ್ವಾಜಾ ಹ್ಯಾರಿಸ್ ಅಹಮದ್ ಪ್ರಶ್ನಿಸಿದ್ದಾರೆ.

ಭಾರತ ದಿಗ್ಭ್ರಮೆ

ನವದೆಹಲಿ (ಪಿಟಿಐ): ಮುಂಬೈ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ನ್ಯಾಯಾಂಗ ಆಯೋಗ ಕಲೆ ಹಾಕಿರುವ ಸಾಕ್ಷ್ಯಗಳು ಊರ್ಜಿತವಲ್ಲ ಎಂದು ಪಾಕಿಸ್ತಾನದ ನ್ಯಾಯಾಲಯ ನೀಡಿರುವ ತೀರ್ಪಿಗೆ ಭಾರತ ದಿಗ್ಭ್ರಮೆ ವ್ಯಕ್ತಪಡಿಸುವ ಜತೆಗೆ, ಆಯೋಗ ಸಂಗ್ರಹಿಸಿದ ಮಾಹಿತಿಗೆ ಸಾಕ್ಷ್ಯಾಧಾರದ ಮೌಲ್ಯ ಇದೆ ಎಂದು ಪ್ರತಿಪಾದಿಸಿದೆ.ಈ ತೀರ್ಪಿನ ಪ್ರತಿಯನ್ನು ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಕಚೇರಿ ಮೂಲಕ ತರಿಸಿಕೊಳ್ಳಲಾಗುವುದು. ತೀರ್ಪನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry