ನ್ಯಾಯಾಂಗ ಇಲಾಖೆ ಪರಿಸರ ಗೆಳೆಯರು

7

ನ್ಯಾಯಾಂಗ ಇಲಾಖೆ ಪರಿಸರ ಗೆಳೆಯರು

Published:
Updated:

ಹಾವೇರಿ: ವಾರಗಟ್ಟಲೇ ಫೈಲು, ಆಫೀಸು ಎಂದು ಓಡಾಡುತ್ತಿದ್ದವರ ಹಾಗೂ ತೀರ್ಪು ನೀಡುವ ಸ್ಥಾನದಲ್ಲಿರುವವರ ಕೈಯಲ್ಲಿ ಸಲಕೆ, ಗುದ್ದಲಿಗಳು ಬಂದಿದ್ದವು. ರಜಾದಿನವಾದ ಭಾನುವಾರ ಮನೆಯಲ್ಲಿ ಹಾಯಾಗಿ ಕಾಲ ಕಳೆಯಬೇಕಾದವರು ತಗ್ಗುಗಳನ್ನು ತೋಡುತ್ತಿದ್ದರೆ, ಕೆಲವರು ಸಸಿ ನೆಟ್ಟು ನೀರು ಹಾಕುತ್ತಿದ್ದರು.ಜಿಲ್ಲೆಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ನ್ಯಾಯಾಧೀಶರು ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ಕೈಗೊಳ್ಳಲಾದ ವಿಶಿಷ್ಟ ಶ್ರಮದಾನವಿದು.ಜಿಲ್ಲೆಯ ನ್ಯಾಯಾಂಗ ಇಲಾಖೆ ನೌಕರರು ಸ್ವಯಂ ಪ್ರೇರಿತರಾಗಿ `ಪರಸರದ ಗೆಳೆಯರು~ ಎಂಬ ಗುಂಪು ಕಟ್ಟಿಕೊಂಡು ಕಾಂಕ್ರೀಟ್ ಕಾಡು ಆಗಿರುವ ನಗರದಲ್ಲಿ ಗಿಡ ಮರ ಬೆಳೆಸಲು ಮುಂದಾಗಿದ್ದಾರೆ.ಇತ್ತೀಚೆಗೆ ನೂತನ ನ್ಯಾಯಾಲಯದ ಕಟ್ಟಡದ ಆವರಣದಲ್ಲಿರುವ ಖುಲ್ಲಾ ಜಾಗೆಯಲ್ಲಿ ಬೆಳ್ಳಂಬೆಳಗ್ಗೆ ನ್ಯಾಯಾಧೀಶರು ಸೇರಿದಂತೆ ಜಿಲ್ಲೆಯ ಸುಮಾರು 90 ಜನ ನ್ಯಾಯಾಂಗ ಇಲಾಖೆ ಸಿಬ್ಬಂದಿ ಏಕಕಾಲಕ್ಕೆ ಶ್ರಮದಾನ ಕೈಗೊಂಡು ಬೇವು, ಸಂಪಗಿ, ಹೊಂಗೆ, ಮಾವು, ತೆಂಗು, ಬಿಲ್ವ, ಹುಣಸೆ ಸೇರಿದಂತೆ ಸುಮಾರು 250 ಸಸಿಗಳನ್ನು ನೆಟ್ಟಿದ್ದಾರೆ.ಕೇವಲ ಸಸಿಗಳನ್ನು ನೆಡುವುದಕ್ಕೆ ಸೀಮಿತವಾಗದೇ, ಶ್ರಮದಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಎರಡು ಸಸಿಗಳನ್ನು ದತ್ತು ಪಡೆದು ಒಂದು ವರ್ಷ ಅವುಗಳ ಪೋಷಣೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.ಈಗಾಗಲೇ ನ್ಯಾಯಾಲಯ ಆವರಣದಲ್ಲಿ ನೆಡಲಾದ 250 ಸಸಿಗಳಿಗೂ ಕಟ್ಟಿಗೆಯ ರಕ್ಷಣಾ ಬೇಲಿ ಅಳವಡಿಸಿದ್ದಾರೆ. ಸಸಿ ನೆಟ್ಟ ನಂತರ ಸುಮಾರು ಹದಿನೈದು ದಿನ ಮಳೆ ಇಲ್ಲದ ಕಾರಣ ತಾವೇ ಸ್ವತಃ ತಮ್ಮ ಶಕ್ತನುಸಾರ ಹಣ ಸಂಗ್ರಹಿಸಿ ಟ್ಯಾಂಕರ್ ಮೂಲಕ ನೀರು ಹಾಕಿ ಅವುಗಳ ರಕ್ಷಣೆ ಮಾಡುತ್ತಿದ್ದಾರೆ.ಪರಿಸರ ಕಾಳಜಿ: ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಳೆದ ಕೆಲವು ದಶಕಗಳಿಂದ ಇದ್ದ ಗಿಡ ಮರಗಳನ್ನು ಕಡಿದು ಹಾಕಲಾಗುತ್ತದೆ. ಇದರಿಂದ ಗಿಡ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುದ್ದು, ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜತೆಗೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪರಿಸರ ಪುನರ್‌ಸ್ಥಾಪಿಸುವ ಹಾಗೂ ಪಕ್ಷಿಗಳ ಓಡಾಟ ಹೆಚ್ಚಿಸುವ ಉದ್ದೇಶದಿಂದ ನ್ಯಾಯಾಂಗ ಇಲಾಖೆ ಸಿಬ್ಬಂದಿ ಈ ಸಸಿ ನೆಟ್ಟು ಬೆಳೆಸಲು ಮುಂದಾಗಿದೆ.ಸಸಿಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ನೀಡಿದ ನಂತರ ಸಿಬ್ಬಂದಿಗಳ ವರ್ತನೆಯಲ್ಲಿ ಗುಣಾತ್ಮಕ ಬದಲಾವಣೆ ಕಾಣಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ 300 ಜನ ಸಿಬ್ಬಂದಿ ಹಾಗೂ 18 ಜನ ನ್ಯಾಯಾಧೀಶರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳುತ್ತಾರೆ ಹಾವೇರಿ ನ್ಯಾಯಾಲಯದ ಶಿರಸ್ತೇದಾರ ಬಿ. ಶ್ರೀನಿವಾಸ.ಮುಂಬರುವ ದಿನಗಳಲ್ಲಿ ನೂತನ ನ್ಯಾಯಾಲಯದ ಆವರಣದಲ್ಲಿ ಸುಮಾರು ಒಂದು ಸಾವಿರ ಗಿಡಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಪಕ್ಷಿಗಳಿಗೆ ತಿನ್ನಲು ಸಹಕಾರಿಯಾಗುವ ಹಣ್ಣುಗಳ ಗಿಡಗಳನ್ನೇ ಪ್ರತ್ಯೇಕವಾಗಿ ಬೆಳೆಸಲು ನಿರ್ಧರಿಸಲಾಗಿದೆ. ಅದೇ ರೀತಿ ನ್ಯಾಯಾಲಯ ಆವರಣದ ಮುಂಭಾಗದಲ್ಲಿ ಎರಡು ಉದ್ಯಾನಗೋಳನ್ನು ಹಾಗೂ ಪಕ್ಕದಲ್ಲಿ ರೋಜ್ ಗಾರ್ಡನ್ ಸ್ಥಾಪಿಸುವ ಉದ್ದೇಶವನ್ನು ಪರಿಸರದ ಗೆಳೆಯರು ಹೊಂದಿದ್ದಾರೆ ಎಂದು ತಿಳಿಸುತ್ತಾರೆ.ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಅವರು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಸ್ವತಃ ತಾವು ಕೂಡಾ ಶ್ರಮದಾನದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟು ಸಿಬ್ಬಂದಿಗಳಿಗೆ ಉತ್ತೇಜನ ನೀಡಿದ್ದಾರಲ್ಲದೇ, ನ್ಯಾಯಾಲಯದ ಆವರಣದ ಮುಂಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉದ್ಯಾನಕ್ಕೆ ಬೇಕಾಗುವ ಹ್ಲ್ಲುಲಿನ ಹಾಸಿಗೆ ಅಗತ್ಯವಿರುವ ಹಣವನ್ನು ನೀಡುವ ಭರವಸೆ ನೀಡಿದ್ದಾರೆ. ನ್ಯಾಯಾಲಯ ಆವರಣಕ್ಕೆ ಕಂಪೌಂಡ್ ನಿರ್ಮಾಣ ಪೂರ್ಣಗೊಂಡ ನಂತರ ಉದ್ಯಾನ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಶ್ರೀನಿವಾಸ ತಿಳಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry