ನ್ಯಾಯಾಂಗ ನಿಂದನೆ: ಮರುಪರಿಶೀಲನೆ ಅಗತ್ಯ

7
ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ.ಕಟ್ಜು ಅಭಿಮತ

ನ್ಯಾಯಾಂಗ ನಿಂದನೆ: ಮರುಪರಿಶೀಲನೆ ಅಗತ್ಯ

Published:
Updated:

ಮಂಗಳೂರು: `ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಕಾನೂನುಗಳ ಮರುಪರಿಶೀಲನೆ ಮಾಡಬೇಕಾದ ಅಗತ್ಯವಿದೆ' ಎಂದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅಭಿಪ್ರಾಯಪಟ್ಟರು.ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಕಾನೂನು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಮಂಗಳವಾರ ಅವರು `ಸಾಂವಿಧಾನಿಕ ನ್ಯಾಯಶಾಸ್ತ್ರ'ದ ಬಗ್ಗೆ ದತ್ತಿ ಉಪನ್ಯಾಸ ನೀಡಿದರು.`ಕುಟುಕು ಕಾರ್ಯಾಚರಣೆಯನ್ನು ನಾನು ವಿರೋಧಿಸುವುದಿಲ್ಲ. ಭ್ರಷ್ಟಾಚಾರವನ್ನು ಬೆಳಕಿಗೆ ತರಲು ಇಂತಹ ಕಾರ್ಯಾಚರಣೆ ಅನಿವಾರ್ಯ' ಎಂದು ಅವರು ಸ್ಪಷ್ಟಪಡಿಸಿದರು.`ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ನ್ಯಾಯಾಲಯದ ಕಲಾಪಗಳ ಯಥಾವತ್ ವರದಿಯನ್ನು ಟಿ.ವಿ. ವಾಹಿನಿಗಳು ಬಿತ್ತರಿಸುವುದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ಆದರೆ ಕೆಲವೊಂದು ಪ್ರಕರಣಗಳ ಬಗ್ಗೆ ಮಾಧ್ಯಮಗಳೇ ವಿಶ್ಲೇಷಣೆ ನಡೆಸಿ ತೀರ್ಮಾನಕ್ಕೆ ಬರುವುದು ಒಳ್ಳೆಯದಲ್ಲ. ನ್ಯಾಯ ಒದಗಿಸುವ ಪ್ರಕ್ರಿಯೆಗೆ ಅಡ್ಡಿ ಉಂಟಾಗುವ ಸಂದರ್ಭಗಳಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಅಧಿಕಾರ ನ್ಯಾಯಾಧೀಶರಿಗೆ ಇದೆ' ಎಂದರು.`ಕಾವೇರಿ ನದಿ ನೀರು ಹಂಚಿಕೆ ಕುರಿತು ತಮಿಳುನಾಡು ಹಾಗೂ ಕರ್ನಾಟಕದ ನಡುವಿನ ವಿವಾದಕ್ಕೆ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳುವುದು ಕಷ್ಟ. ಎರಡೂ ರಾಜ್ಯಗಳು ಕಡಿಮೆ ವೆಚ್ಚದ ತಂತ್ರಜ್ಞಾನ ಬಳಸಿ ಸಮುದ್ರದ ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಬಗ್ಗೆ ಚಿಂತಿಸುವುದು ಒಳಿತು' ಎಂದು ಅವರು ಸಲಹೆ ನೀಡಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಲೋಕಪಾಲ ಮಸೂದೆಯು ಕಾನೂನಾಗಿ ಜಾರಿಗೆ ಬಂದರೆ ಭ್ರಷ್ಟಾಚಾರ ದುಪ್ಪಟ್ಟಾಗಲಿದೆ' ಎಂದರು.

ಭಾರತೀಯ ಪತ್ರಿಕಾ ಮಂಡಳಿ ಸದಸ್ಯ ರಾಜೀವ್ ರಂಜನ್ ನಾಗ್, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ.ರವೀಂದ್ರ, ಉಜಿರೆ ಎಸ್‌ಡಿಎಂ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಇದ್ದರು.ಅವರೂ ಪ್ರಜಾ ಸೇವಕರು!

`ರಾಜರ ಆಳ್ವಿಕೆ ಕಾಲದಲ್ಲಿ ನ್ಯಾಯಾಧೀಶರ ಘನತೆ ಕಾಪಾಡಲು ಇಂತಹ ಕಾನೂನುಗಳನ್ನು ರೂಪಿಸಲಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಮತ್ತು ಪ್ರಜೆಗಳ ಸಂಬಂಧ ಅದಲುಬದಲಾಗಿದೆ. ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಹಕ್ಕು ಜನರಿಗಿದೆ. ನ್ಯಾಯಾಧೀಶರು ಕೂಡಾ ಪ್ರಜೆಗಳ ಸೇವಕರು. ಅವರಿಗೆ ವಿಶೇಷ ವಿನಾಯಿತಿ ನೀಡಬೇಕಾಗಿಲ್ಲ. ನ್ಯಾಯಾಧೀಶರ ವರ್ಚಸ್ಸು ಮತ್ತು ಘನತೆ, ಅವರು ನಡೆದುಕೊಳ್ಳುವ ರೀತಿ ಹಾಗೂ ಅವರು ನೀಡುವ ತೀರ್ಪುಗಳನ್ನು ಆಧರಿಸಿರುತ್ತದೆ. ಅವರೂ ಟೀಕೆ ಎದುರಿಸಲು ಸಿದ್ಧರಾಗಿರಬೇಕು'

-ಮಾರ್ಕಂಡೇಯ ಕಟ್ಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry