ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆಗೆ ವಿರೋಧ

7

ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆಗೆ ವಿರೋಧ

Published:
Updated:

ಬೆಂಗಳೂರು: ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ‘ನ್ಯಾಯಮೂರ್ತಿಗಳ ಮಂಡಳಿ’ಯ ಬದಲು ‘ನ್ಯಾಯಾಂಗ ನೇಮಕಾತಿ ಆಯೋಗ’ದ ಮೂಲಕ ನಡೆಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಅಖಿಲ ಭಾರತ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.‘ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದು ನ್ಯಾಯಾಂಗದ ಹಿತದೃಷ್ಟಿಯಿಂದ ಒಳಿತಲ್ಲ’ ಎಂದು ಸಂಘದ ಅಧ್ಯಕ್ಷ ಆದೀಶ್‌ ಸಿ. ಅಗರ್‌ವಾಲ್‌ ಅವರು ಇಲ್ಲಿನ ಕ್ರೈಸ್ಟ್ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಲಾ’ನಲ್ಲಿ ಭಾನುವಾರ ಆಯೋಜಿಸಿದ್ದ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪದಲ್ಲಿ ಹೇಳಿದರು.ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯನ್ನು ಈಗ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಮೂರ್ತಿಗಳ ಮಂಡಳಿ ಮಾಡುತ್ತಿದೆ. ಇದರ ಬದಲು, ನ್ಯಾಯಾಂಗ ನೇಮಕಾತಿ ಆಯೋಗವನ್ನು ರಚಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಇತ್ತೀಚೆಗೆ ಮಂಡಿಸಿ, ಅನುಮೋದನೆ ಪಡೆದುಕೊಂಡಿದೆ. ಈ ಸಮಿತಿಯಲ್ಲಿ ಕೇಂದ್ರ ಕಾನೂನು ಸಚಿವರು ಹಾಗೂ ಕಾನೂನು ಇಲಾಖೆ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ. ಇಬ್ಬರು ‘ಗಣ್ಯ ವ್ಯಕ್ತಿಗಳು’ ಸಹ ಈ ಸಮಿತಿಯ ಸದಸ್ಯರಾಗಿರುತ್ತಾರೆ.‘ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವ ಸಾಕಷ್ಟು ಪ್ರಕರಣಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು ಪ್ರತಿವಾದಿಗಳಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಪ್ರತಿವಾದಿ ಸ್ಥಾನದಲ್ಲಿ ನಿಲ್ಲುವವರನ್ನೇ, ನ್ಯಾಯಮೂರ್ತಿಗಳ ನೇಮಕಾತಿ ಆಯೋಗದ ಸದಸ್ಯರನ್ನಾಗಿ ಮಾಡುವುದು ಎಷ್ಟು ಸರಿ’ ಎಂದು ಅಗರ್‌ವಾಲ್‌ ಪ್ರಶ್ನಿಸಿದರು.ಪ್ರಕರಣಗಳ ಶೀಘ್ರ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ, ಅಧೀನ ನ್ಯಾಯಾಲಯಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ಕ್ಕೆ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಕ್ರಮವಾಗಿ 65 ಹಾಗೂ 68ಕ್ಕೆ ಹೆಚ್ಚಿಸಬೇಕು ಎಂದು ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು.ವಕೀಲ ಕೇಲಬ್‌ ಗೇರ್ಬಿಯರ್‌ ಮಾತನಾಡಿ, ‘ವಕೀಲ ವೃತ್ತಿಗೆ ಹೊಸದಾಗಿ ಬರುತ್ತಿರುವ ಯುವಕರು, ಬೌದ್ಧಿಕ ಹಕ್ಕುಸ್ವಾಮ್ಯ ಕುರಿತ ಕಾನೂನನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಕಾನೂನಿನ ಈ ವಿಭಾಗದಲ್ಲಿ ಹೆಚ್ಚಿನ ಉದ್ಯೋಗಾವ­ಕಾಶಗಳಿವೆ’ ಎಂದರು.ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಹುಲುವಾಡಿ ಜಿ. ರಮೇಶ್‌, ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಆರ್‌. ರಾಮಚಂದ್ರ ಮೆನನ್‌, ಕ್ರೈಸ್ಟ್‌ ವಿ.ವಿ. ಕುಲಪತಿ ಡಾ. ಥಾಮಸ್‌ ಮ್ಯಾಥ್ಯೂ ಪಾಲ್ಗೊಂಡಿದ್ದರು.ವಿ.ವಿಯಲ್ಲಿ ನಡೆದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಗುಜ­ರಾತ್‌ನ ಗಾಂಧಿನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ­ಗಳು ಪ್ರಥಮ ಸ್ಥಾನ ಗಿಟ್ಟಿಸಿದರು. ಚೆನ್ನೈನ ‘ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಇನ್‌ ಲಾ’ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರು.ಸಂಸದೀಯ ಸ್ಥಾಯಿ ಸಮಿತಿಗೆ ಮಸೂದೆ

ನವದೆಹಲಿ (ಪಿಟಿಐ):
‘ನ್ಯಾಯ­ಮೂರ್ತಿಗಳ ನೇಮಕಾತಿ ಮಂಡಳಿ’ (ಕೊಲಿಜಿಯಂ ಸಿಸ್ಟಂ) ಮೂಲಕ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ಮಸೂದೆಯನ್ನು,  ಮತ್ತಷ್ಟು ಸಲಹೆ ಸೂಚನೆ ನೀಡುವುದಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿಗೆ ನೀಡಲಾಗಿದೆ.‘ನ್ಯಾಯಾಂಗೀಯ ನೇಮಕ ಆಯೋಗ ಮಸೂದೆ–­2013’ನ್ನು ಆಗಸ್ಟ್ 29ರಂದು ರಾಜ್ಯಸಭೆಯಲ್ಲಿ ಮಂಡಿಸ­ಲಾಗಿತ್ತು. ಇದೀಗ ಇದನ್ನು ಕಾನೂನಿನ ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿದೆ.ಸುಪ್ರೀಂಕೋರ್ಟ್ ಹಾಗೂ 24 ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ವರ್ಗಾವಣೆ ಕುರಿತು ವಿವರಣೆ ನೀಡುವ ಈ ಮಸೂದೆಯ ಕುರಿತು ಜನಸಾಮಾನ್ಯರ ಹಾಗೂ ಭಾಗೀದಾರರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ತೀರ್ಮಾನಿಸಿದೆ. ‘ನೇಮಕಾತಿ ಮಂಡಳಿ’  ಮೂಲಕವೇ ಉನ್ನತ ನ್ಯಾಯಾಲಯಗಳ ನ್ಯಾಯ ಮೂರ್ತಿಗಳ ನೇಮಕಾತಿ ನಡೆಯಲಿ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಶನಿವಾರವಷ್ಟೇ ಪ್ರತಿಪಾದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಕಾನೂನು ಸಚಿವ ಕಪಿಲ್‌ ಸಿಬಲ್‌ ಮಂಡಿಸಿದ ಈ ಮಸೂದೆಗೆ ಸರ್ಕಾರದ ಜತೆಗೆ ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿದ್ದು, ಅಧಿಕಾರದ ಸೂಕ್ಷ್ಮ ಸಮತೋಲನಕ್ಕಾಗಿ ‘ನೇಮಕಾತಿ ಮಂಡಳಿ’ಗೆ ಬದಲಾವಣೆ ತರುವುದು ಅಗತ್ಯ ಎಂದು ಪ್ರತಿಪಾದಿಸುತ್ತಿವೆ. ‘ನೇಮಕಾತಿ ಮಂಡಳಿ’ಗೆ ಬದಲಾ­ವಣೆ ತರುವ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಲು ವಿರೋಧ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದಿತ್ತು.ಈಗಿರುವ ‘ನೇಮಕಾತಿ ಮಂಡಳಿ’ ಅನ್ವಯ  ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ  ನಾಲ್ವರು ಅತಿ ಹಿರಿಯ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಬಹುದು.ಒಂದು ವೇಳೆ ಇಂತಹ ಶಿಫಾರಸು ಸರ್ಕಾರಕ್ಕೆ ಇಷ್ಟವಾಗದಿದ್ದಲ್ಲಿ ಅದು  ಪುನರ್‌ಪರಿಶೀಲಿಸುವಂತೆ ಕೋರಿ ‘ನೇಮಕಾತಿ ಮಂಡಳಿ’ಗೆ ಶಿಫಾರಸನ್ನು ಹಿಂದಿರುಗಿಸಬಹುದು. ಆದರೆ ಶಿಫಾರಸನ್ನೇ ಅದು ನಿರಾಕರಿಸುವಂತಿಲ್ಲ. ನ್ಯಾಯಮೂರ್ತಿಗಳನ್ನು ನ್ಯಾಯ­ಮೂರ್ತಿಗಳೇ ನೇಮಕ ಮಾಡುವಂತಹ ವ್ಯವಸ್ಥೆ ಬಹುಶಃ ಭಾರತದಲ್ಲಿ ಮಾತ್ರ ಇದೆ ಎನ್ನಲಾಗಿದೆ.ಮಸೂದೆ ಜಾರಿಯಾದಲ್ಲಿ...

ಹೊಸ ಮಸೂದೆ ಜಾರಿಗೆ ಬಂದಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಹಾಗೂ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ನೇಮಕಾತಿ ಆಯೋಗ ರಚನೆಯಾಗುತ್ತದೆ.ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ‘ಪಾರದರ್ಶಕ’ವಾಗಿರುವಂತೆ ನೋಡಿಕೊಳ್ಳಲು ಮಸೂದೆ ಅವಕಾಶ ಕಲ್ಪಿಸುತ್ತದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯ­ಮೂರ್ತಿ ನೇತೃತ್ವ ದಲ್ಲಿ ರಚನೆಯಾಗುವ ನ್ಯಾಯಾಂಗ ಆಯೋಗ ದಲ್ಲಿ ಸುಪ್ರೀಂಕೋರ್ಟ್‌ನ ಇಬ್ಬರು ಅತಿ ಹಿರಿಯ ನ್ಯಾಯ ಮೂರ್ತಿಗಳು, ಕಾನೂನು ಸಚಿವ, ಇಬ್ಬರು ತಜ್ಞರು ಸದಸ್ಯರಾಗಿ, ಕಾನೂನು ಸಚಿವಾಲಯದ ಕಾರ್ಯ­ದರ್ಶಿ ಸಂಚಾಲಕರಾಗಿ ಕಾರ್ಯನಿರ್ವ ಹಿಸುವರು.ಆಯೋಗದಲ್ಲಿರುವ ಇಬ್ಬರು ತಜ್ಞರನ್ನು ಪ್ರಧಾನಿ, ಮುಖ್ಯ ನ್ಯಾಯ­ಮೂರ್ತಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರು ಒಳಗೊಂಡ ಸಮಿತಿ ಆಯ್ಕೆ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry