ಶುಕ್ರವಾರ, ಮೇ 14, 2021
29 °C

ನ್ಯಾಯಾಂಗ ಬಂಧನಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳ್ಳತನ ಆರೋಪದ ಮೇಲೆ ಜೆ.ಸಿ.ನಗರ ಪೊಲೀಸರ ವಶದಲ್ಲಿರುವ ನೇಪಾಳ ಮೂಲದ ಬಾಮ್ ಬಹದ್ದೂರ್ ಎಂಬ ವ್ಯಕ್ತಿಯನ್ನು ತಕ್ಷಣವೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಗುರುವಾರ ಪೊಲೀಸರಿಗೆ ಆದೇಶಿಸಿದೆ.ತನ್ನ ಸಹೋದರನನ್ನು ಪೊಲೀಸರು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಒಂದು ವಾರ ಮುನ್ನ ಬಂಧಿಸಿ ಅಕ್ರಮ ಬಂಧನದಲ್ಲಿಟ್ಟು ಹಿಂಸಿಸಿದ್ದರು ಎಂದು ದೂರಿ ಆರೋಪಿಯ ಸಹೋದರಿ ಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಈ ಆದೇಶ ನೀಡಿದರು.`ಬಾಮ್ ಬಹದ್ದೂರ್‌ನನ್ನು ಪೊಲೀಸರು ಆಗಸ್ಟ್ 22ರಿಂದ ಅಕ್ರಮ ಬಂಧನದಲ್ಲಿ ಇರಿಸಿದ್ದರು. ಸೆ.  2ರಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ತನಿಖಾ ತಂಡ ಜೆ.ಸಿ.ನಗರ ಠಾಣೆಯ ಮೇಲೆ ದಾಳಿ ನಡೆಸಿದ್ದಾಗ ಇದು ಪತ್ತೆಯಾಗಿತ್ತು. ಆರೋಪಿಯನ್ನು ಪೊಲೀಸರು ತೀವ್ರವಾಗಿ ಹಿಂಸಿಸಿರುವುದು ಕೂಡ ಆಯೋಗದ ತನಿಖೆಯಲ್ಲಿ ತಿಳಿದುಬಂದಿತ್ತು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ~ ಎಂದು ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ದಾಖಲೆಗಳನ್ನು ಹಾಜರುಪಡಿಸಿದರು.ಮೊದಲು ಹಿಂಸಿಸಿದ ಪೊಲೀಸರ ವಶದಲ್ಲೇ ಆರೋಪಿಯನ್ನು ಮುಂದುವರಿಸುವುದು ಸರಿಯಲ್ಲ ಎಂಬ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯ, ತಕ್ಷಣವೇ ಬಹದ್ದೂರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದರು. ಪ್ರಕರಣದ ಸಂಬಂಧ ಪೊಲೀಸ್ ಇಲಾಖೆ, ಜೆ.ಸಿ.ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ನಾಗರಾಜು,  ಸಬ್ ಇನ್‌ಸ್ಪೆಕ್ಟರ್ ಅಮೋಲ್ ಎಸ್. ಕಾಳೆಗೆ ನೋಟಿಸ್ ಜಾರಿಗೆ ಆದೇಶಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.