ಸೋಮವಾರ, ಮೇ 23, 2022
20 °C

ನ್ಯಾಯಾಂಗ ಬಂಧನಕ್ಕೆ ವೈ.ಸಂಪಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವ್ಯಾಪ್ತಿಯ ಅಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದ ಕಾರಾಗೃಹ ಸೇರುತ್ತಿರುವ ಗಣ್ಯರ ಪಟ್ಟಿಗೆ ಈಗ ಕೆ.ಜಿ.ಎಫ್ ಶಾಸಕ  ವೈ.ಸಂಪಂಗಿ ಸೇರ್ಪಡೆ.ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಉದ್ಯಮಿ ಹುಸೇನ್ ಮೊಯಿನ್ ಫಾರೂಕ್ ಅವರಿಂದ ಲಂಚ ಪಡೆದಿರುವ ಆರೋಪ ಹೊತ್ತ ಅವರು ಈ ಹಿಂದೆ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆದು ಹೊರ ಬಂದ ನಂತರ ಮತ್ತೆ ಫಾರೂಕ್ ಅವರಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಗೊಳಿಸಿ ಸಂಪಂಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಶುಕ್ರವಾರ ಆದೇಶಿಸಿದ್ದಾರೆ.ಈ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡುವಾಗ ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿ ಸಂಪಂಗಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಫಾರೂಕ್ ಅವರು ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು. `2009ರಲ್ಲಿ ಸಂಪಂಗಿ ಅವರಿಗೆ ಲೋಕಾಯುಕ್ತ ಕೋರ್ಟ್ ಜಾಮೀನು ನೀಡಿದ ದಿನದಿಂದಲೂ ನನಗೆ ಹಾಗೂ ನನ್ನ ಕುಟುಂಬ ವರ್ಗದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಯಾಮರಣ ನೀಡುವಂತೆ ಕೋರಿ ನಾನು ರಾಷ್ಟ್ರಪತಿ, ಸುಪ್ರೀಂಕೋರ್ಟ್, ಹೈಕೋರ್ಟ್ ಎಲ್ಲೆಡೆ ಅರ್ಜಿ ಸಲ್ಲಿಸಿದ್ದೆ.ಸಂಪಂಗಿ ನೀಡುತ್ತಿರುವ ಮಾನಸಿಕ ಯಾತನೆಯಿಂದ ನನ್ನ ತಾಯಿಯ ಮಿದುಳು ನಿಷ್ಕ್ರಿಯವಾಗಿದೆ~ ಎಂದು ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.ಇದನ್ನು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದರು. ಲಂಚ ಪ್ರಕರಣದ ಕುರಿತಾಗಿ ಇರುವ ಸಾಕ್ಷಿಗಳ ಹೇಳಿಕೆಗಳು ಸಂಪೂರ್ಣಗೊಳ್ಳುವವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಅವರು ಪೊಲೀಸರಿಗೆ ಆದೇಶಿಸಿದರು.

 

ಪ್ರಕರಣದ ಹಿನ್ನೆಲೆ: ಕೆಜಿಎಫ್‌ನಲ್ಲಿ ತಾವು ಹೊಂದಿರುವ ನಿವೇಶನವನ್ನು ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಫಾರೂಕ್ ಅವರು ಆ್ಯಂಡರ್‌ಸನ್‌ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇನ್ನೊಂದು ಪ್ರಕರಣದಲ್ಲಿ ಫಾರೂಕ್ ಅವರ ವಿರುದ್ಧವೇ ದೂರು ದಾಖಲಾಗಿತ್ತು. ಈ ಎರಡು ದೂರುಗಳನ್ನು ಇತ್ಯರ್ಥಪಡಿಸಲು ಸಂಪಂಗಿ ಅವರ ಬಳಿಗೆ ಹೋಗುವಂತೆ ಇನ್ಸ್‌ಪೆಕ್ಟರ್ ಸೂಚಿಸಿದ್ದರು. ಅವರ ಸೂಚನೆಯಂತೆ ಹೋದಾಗ ಅವರು 5 ಲಕ್ಷ ರೂಪಾಯಿ ಲಂಚದ ಬೇಡಿಕೆ ಒಡ್ಡಿದ್ದರು. ಇದನ್ನು ಮೊಬೈಲ್ ದೂರವಾಣಿಯಲ್ಲಿ ಫಾರೂಕ್ ರೆಕಾರ್ಡ್ ಮಾಡಿಕೊಂಡಿದ್ದರು ಎನ್ನುವುದು ವಿವಾದ.ಲಂಚ ಪ್ರಕರಣ ಲೋಕಾಯುಕ್ತ ಕೋರ್ಟ್ ಮೆಟ್ಟಿಲೇರಿದ್ದಾಗ 2009ರಲ್ಲಿ ನ್ಯಾಯಾಲಯವು ಸಂಪಂಗಿ ಅವರನ್ನು ಬಂಧಿಸುವಂತೆ ಆದೇಶಿಸಿತ್ತು. ಬಂಧನಕ್ಕೆ ಒಳಗಾದ ತಕ್ಷಣ ಎದೆ ನೋವು ಎಂದು ಹೇಳುವ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊನೆಯಲ್ಲಿ ಅವರಿಗೆ ಜಾಮೀನು ಮಂಜೂರು ಆಗಿತ್ತು. ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಅವರಿಗೆ ಷರತ್ತು ವಿಧಿಸಲಾಗಿತ್ತು.

 

ಖುದ್ದು ಹಾಜರು: ಅರ್ಜಿಯ ವಿಚಾರಣೆ ವೇಳೆ ಸಂಪಂಗಿ ಕೋರ್ಟ್‌ನಲ್ಲಿ ಖುದ್ದು ಹಾಜರು ಇದ್ದರು. ಕಳೆದ ಬಾರಿ ಬಂಧನದ ಆದೇಶ ಹೊರಡುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ನಗುಮುಖದಿಂದಲೇ ಇದ್ದರು. ಬಂಧನದ ಆದೇಶ ಹೊರಟ ನಂತರ, ಮುಂದಿನ ಪ್ರಕ್ರಿಯೆ ಮುಗಿಯುವವರಿಗೆ ಅವರು ಸುಮಾರು ಅರ್ಧ ಗಂಟೆ ಕಾಲ ಕೋರ್ಟ್‌ನಲ್ಲಿಯೇ ಇದ್ದರು.ಫಾರೂಕ್ ಅವರು ಸಂಪಂಗಿ ಅವರಿಗೆ ನೀಡಿದ್ದ ಜಾಮೀನು ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯೊಂದು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.