ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಅಗತ್ಯ: ಇಂದಿರಾ

7

ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಅಗತ್ಯ: ಇಂದಿರಾ

Published:
Updated:

ಕಾರವಾರ: ‘ಭಾರತದಲ್ಲಿ ಸಮಗ್ರ ಬದಲಾವಣೆ ಸಮಯ ಬಂದಿದೆ. ಮತ್ತು ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದು ಕೇಂದ್ರ ಸರ್ಕಾರದ ಹೆಚ್ಚುವರಿ ಪ್ರಧಾನ ಕಾನೂನು ಸಲಹೆಗಾರರಾದ ಇಂದಿರಾ ಜಯಸಿಂಗ್ ಅಭಿಪ್ರಾಯಪಟ್ಟರು. ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಪಿ.ಎಸ್. ಕಾಮತ್ ಸ್ಮರಣಾರ್ಥ 3ನೇ ಜಿಲ್ಲಾ ಮಟ್ಟದ ಅಂತರಕಾಲೇಜು ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  ‘ದೇಶದಾದ್ಯಂತ ಜನರು ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ಹಿಂಸಾಚಾರಗಳು ಮತ್ತು ಅಪರಾಧಗಳ ವಿರುದ್ಧ ಸಿಡಿದೆದ್ದಿದ್ದಾರೆ ಹಾಗೂ ಶುದ್ದ ರಾಜಕೀಯ ಬಯಸಿದ್ದಾರೆ.ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷವು ಸಾಧಿಸಿದ ಜಯ ಈ ಬದಲಾವಣೆಯ ಸಂಕೇತ. ಭಾರತವು 21 ನೇ ಶತಮಾನದಲ್ಲಿ ಹಿಂದೆ ಇದ್ದ ಸ್ಥಿತಿಗಿಂತ ಉತ್ತಮ ವ್ಯವಸ್ಥೆಯತ್ತ ಸಾಗುವ ನಿಟ್ಟಿನಲ್ಲಿದೆ’ ಎಂದು ಹೇಳಿದರು.ಭಾರತ ಮತ್ತು ಜಾಗತಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, ‘ಭೂಮಿ ಮತ್ತು ನೀರಿನ ಕುರಿತ ಸಮಸ್ಯೆಗಳು 21ನೇ ಶತಮಾನದಲ್ಲಿ ತೀವ್ರ ಸ್ವರೂಪ ತಾಳಲಿವೆ. ಭೂಮಿಯ ಸದ್ಬಳಕೆ, ನೀರಿನ ಮೂಲಗಳ ಸಂರಕ್ಷಣೆ ಮತ್ತು ಸ್ವಚ್ಛ ನೀರಿನ ಪೂರೈಕೆ ಜಗತ್ತಿನ ಅಗತ್ಯವಾಗಿವೆ’ ಎಂದು ಹೇಳಿದರು.ಕಾನೂನುಗಳಿದ್ದರೂ ದುರ್ಬಲರಿಗೆ ಸರಿಯಾದ ನ್ಯಾಯ ಸಿಗುವುದು ಅತಿ ಕಷ್ಟ. ಯಾಕೆಂದರೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ನ್ಯಾಯ ಪಡೆಯುವುದು ಅತಿ ವೆಚ್ಚದಾಯಕ. ದುರ್ಬಲರಿಗೆ ನ್ಯಾಯ ಸಿಗುವಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದರು.‘ಭಾರತದಲ್ಲಿ ಇತರ ವ್ಯವಸ್ಥೆಗಳು ಬದಲಾವಣೆಯಾಗುತ್ತಿದ್ದರೂ ನ್ಯಾಯಾಂಗ ವ್ಯವಸ್ಥೆ ಮಾತ್ರ ಇದ್ದ ಹಾಗೇ ಇದೆ ಮತ್ತು ನ್ಯಾಯಾಂಗ ವ್ಯವಸ್ಥೆ ತುರ್ತಾಗಿ ಬದಲಾಗುವ ಅಗತ್ಯ ಇದೆ’ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆನರಾ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ. ಕಾಮತ್‌, ದೇಶದ ಯುವಕರನ್ನು ಸಮರ್ಪಕ ಶಿಕ್ಷಣ ಮತ್ತು ತರಬೇತಿಯಿಂದ ಪರಿವರ್ತನಾಕಾರ ರಾಗಿ ರೂಪಿಸಬೇಕು ಎಂದು ಹೇಳಿದರು. ಸುಪ್ರೀಂ ಕೋರ್ಟ್‌ ವಕೀಲ ಹಾಗೂ ಚರ್ಚಾ ಸ್ಪರ್ಧೆಯ ಪ್ರಾಯೋಜಕರಾಗಿರುವ ದೇವದತ್ತ ಕಾಮತ ಅವರು ಮಾತನಾಡಿ, ‘ಪ್ರಜಾಪ್ರಭುತ್ವದ ನೆಲೆ ಭದ್ರಗೊಳ್ಳಲು ಕೇವಲ ಮಹಾನಗರ ಮತ್ತು ನಗರಗಳಲ್ಲಿ ಜನ ಜಾಗೃತಿಯಾದರೆ ಸಾಲದು ಮತ್ತು ಅಂತಹ ಜಾಗೃತಿ ಗ್ರಾಮೀಣ ಮತ್ತು ತಳಮಟ್ಟದಲ್ಲಿ ಮೂಡಿ ಬರಬೇಕು’ ಎಂದು ಹೇಳಿದರು.ವಿಜೇತರು: ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ 9 ತಾಲ್ಲೂಕು ಕೇಂದ್ರಗಳಿಂದ ಒಟ್ಟು 18 ಸ್ಪರ್ಧಾಳು ಭಾಗವಹಿಸಿದ್ದರು.

ಶಿರಸಿಯ ಹುಲ್ಲೇಕಲ್‌ನ ಶ್ರೀದೇವಿ ಸಂಯುಕ್ತ ಜೂನಿಯರ್‌ ಕಾಲೇಜಿನ ಭಾಗ್ಯಾ ಎನ್. ಭಟ್ಟ (ಪ್ರಥಮ ಸ್ಥಾನ) ₨ 50ಸಾವಿರ, ಕಾರವಾರದ ಸರ್ಕಾರಿ ಪಿ.ಯು. ಕಾಲೇಜಿನ ಸಾಜೀದ್ ಆರ್. ದಫೇದಾರ (ದ್ವಿತೀಯ) ₨ 30 ಸಾವಿರ, ಮುರ್ಡೇಶ್ವರದ ಆರ್.ಎನ್.ಎಸ್. ಪಿ.ಯು ಕಾಲೇಜಿನ ಕೆ.ಕೆ. ಅಪೂರ್ವ (ತೃತೀಯ) ₨ 20 ಸಾವಿರ ಬಹುಮಾನವಾಗಿ ಪಡೆದರು.ಯಲ್ಲಾಪುರದ ವೈಟಿಎಸ್ಎಸ್ ಪಿ.ಯು. ಕಾಲೇಜಿನ ಗಣೇಶ್. ಎಲ್. ಭಟ್ಟ ಹಾಗೂ ಹೊನ್ನಾವರದ ಎಸ್‌ಡಿಎಂ ಮಹಾವಿದ್ಯಾಲಯ ಗೌತಮ ಆರ್. ಶೇಟ್‌ ಅವರು ತಲಾ ₨ 5 ಸಾವಿರಗಳ ಸಮಾಧಾನಕರ ಬಹುಮಾನ ಪಡೆದರು. ಎಲೆಕ್ಟ್ರಾನಿಕ್‌ ಆಟೋಮೇಶನ್ ಪ್ರೈ.ಲಿ. ಕಂಪೆನಿಯ ವ್ಯವಸ್ಥಾಪಕ ನಿರ್ವಾಹಕ ಮಾಧವ ಕಾಮತ ಅವರು ದೇಣಿಗೆಯಾಗಿ ನೀಡಿದ ಟ್ಯಾಬ್ಲೆಟ್ ಪರ್ಸನಲ್ ಕಂಪ್ಯೂಟರ್‌ಗಳನ್ನು ಎಲ್ಲಾ 18 ಸ್ಪರ್ಧಾಳುಗಳಿಗೂ ವಿತರಿಸಲಾಯಿತು.ನಿವೃತ್ತ ಪ್ರಾಂಶುಪಾಲ ಜಿ.ವಿ. ಭಟ್ಟ, ಕೆನರಾ ವೆಲ್ಫೇರ್‌ ಟ್ರಸ್ಟ್‌ ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಪಿ.ಎಂ. ತಾಂಡೇಲ, ಪ್ರಾಂಶುಪಾಲ ಎಂ.ಎಚ್. ನಾಯ್ಕ, ಪ್ರೊ. ಸಿ.ಡಿ. ಭಟ್ಟ ಹಾಜರಿದ್ದರು. ಪ್ರೊ. ದೇವಾನಂದ ಗಾಂವಕರ ಪ್ರಾರ್ಥನೆ ಹಾಡಿದರು. ಪ್ರೊ.ಮೋಹನ ಭಟ್ಟ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry