ನ್ಯಾಯಾಧೀಶರು ಭ್ರಷ್ಟರಾಗಲು ವಕೀಲರು ಕಾರಣ: ನ್ಯಾ. ಹೆಗ್ಡೆ

7

ನ್ಯಾಯಾಧೀಶರು ಭ್ರಷ್ಟರಾಗಲು ವಕೀಲರು ಕಾರಣ: ನ್ಯಾ. ಹೆಗ್ಡೆ

Published:
Updated:

ಬೆಂಗಳೂರು: ವಕೀಲರ ಸಹಾಯವಿಲ್ಲದೇ ನ್ಯಾಯಾಧೀಶರು ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು  ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಬೆಂಗಳೂರು ವಕೀಲರ ಸಂಘವು ಹೈಕೋರ್ಟ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ನ್ಯಾಯಾಂಗದ ಘನತೆ ಹಾಗೂ ಹೊಣೆಗಾರಿಕೆ~ ಕುರಿತು ಅವರು ಮಾತನಾಡಿದರು.`ಅಧಿಕಾರಿಗಳು ಭ್ರಷ್ಟರು ಇಲ್ಲದಿದ್ದರೆ ಸಚಿವರೂ ಭ್ರಷ್ಟರಾಗುತ್ತಿರಲಿಲ್ಲ.  ಅದೇ ರೀತಿ ನ್ಯಾಯಾಂಗದಲ್ಲಿಯೂ ಭ್ರಷ್ಟರು ಇದ್ದಾರೆ ಎನ್ನುವುದಾದರೆ ಅದಕ್ಕೆ ಕೆಲ ವಕೀಲರು ಕಾರಣ. ಕಕ್ಷಿದಾರರು ಹಾಗೂ ನ್ಯಾಯಾಧೀಶರ ಮಧ್ಯೆ ನೇರ ಸಂಪರ್ಕ ಇರುವುದು ಬಹಳ ಕಡಿಮೆ. ಆದುದರಿಂದ ವಕೀಲರ ಸಹಾಯವಿಲ್ಲದೆ ಈ ರೀತಿ ಆಗುವುದಿಲ್ಲ~ ಎಂದು ಹೇಳಿದರು.`ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ~ ಎಂದು ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಉತ್ತರವಾಗಿ ನ್ಯಾ. ಹೆಗ್ಡೆ ಈ ಮಾತು ಹೇಳಿದರು.ಬದಲಾವಣೆ ಅಗತ್ಯ: `ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಅಗತ್ಯ ಇದೆ. ಪಾರದರ್ಶಕವಾಗಿ ನೇಮಕಾತಿ ಮಾಡಬೇಕಿದೆ. ಪುಸ್ತಕದ ಹುಳುಗಳನ್ನು ನೇಮಕ ಮಾಡಿಕೊಳ್ಳುವ ಬದಲು ಯಾವುದೇ ಪ್ರಕರಣವನ್ನು ಧೈರ್ಯದಿಂದ ನಿಭಾಯಿಸಬಲ್ಲ ಶಕ್ತರನ್ನು ನೇಮಿಸುವ ಅಗತ್ಯ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.`ನ್ಯಾಯಾಲಯದ ಕಲಾಪಗಳನ್ನು ವಿಡಿಯೊ ರೆಕಾರ್ಡಿಂಗ್ ಮಾಡುವ ಅಗತ್ಯ ಇದೆ. ಅಂದಾಗ ಮಾತ್ರ ಎಲ್ಲಿ ಯಾವ ರೀತಿಯ ವಿಚಾರಣೆ ನಡೆಯುತ್ತದೆ, ಯಾರು ಹೇಗೆ ಆದೇಶ ಹೊರಡಿಸುತ್ತಾರೆ ಎಂಬುದು ತಿಳಿದುಬರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ~ ಎಂದು ನ್ಯಾ.ಹೆಗ್ಡೆ ತಿಳಿಸಿದರು.ಸಂಸತ್ತಿಗೆ ಅಧಿಕಾರ ಸಲ್ಲ: `ನ್ಯಾಯಮೂರ್ತಿಗಳನ್ನು ಕೆಲಸದಿಂದ ವಜಾಗೊಳಿಸುವ ಅಧಿಕಾರ ಸಂಸತ್ತಿಗೆ ನೀಡಿರುವುದು ಉಚಿತವಲ್ಲ. ವಜಾ ಆದೇಶದಲ್ಲಿಯೂ ರಾಜಕೀಯ ನುಸುಳಿ ಎಲ್ಲ ಉದ್ದೇಶಗಳು ಬುಡಮೇಲಾಗುತ್ತಿವೆ. ಇದಕ್ಕಾಗಿಯೇ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕಾದ ಅಗತ್ಯ ಇದೆ ಎಂದರು.ಲೋಕಪಾಲ ವ್ಯಾಪ್ತಿಯಿಂದ ಪ್ರಧಾನ ಮಂತ್ರಿಯನ್ನು ಹೊರಗೆ ಇಡಲು ಒತ್ತಾಯ ಬರುತ್ತಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, `ಯಾರದ್ದೇ ವಿರುದ್ಧ ಆರೋಪ ಕೇಳಿಬಂದಾಗ ಅಂಥವರ ವಿರುದ್ಧ ತನಿಖೆ ನಡೆಸಬಾರದು ಎಂದರೆ ಏನರ್ಥ~ ಎಂದು ಖಾರವಾಗಿ ಪ್ರಶ್ನಿಸಿದರು.

ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry